ಬುಧವಾರ, ಜನವರಿ 27, 2021
22 °C
ಕೋವಿಡ್‌ನಿಂದ ಕಂಗೆಟ್ಟ ರಂಗಭೂಮಿ: ಲಾಕ್‌ಡೌನ್ ತೆರವಾದರೂ ರಂಗ ಚಟುವಟಿಕೆ ಕ್ಷೀಣ

‘ಪರದೆ’ ಸರಿಯುವ ನಿರೀಕ್ಷೆಯಲ್ಲಿ ಕಲಾವಿದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ಜಾತ್ರೆಗಳು, ಉತ್ಸವಗಳೆಂದರೆ ವೃತ್ತಿಪರ ರಂಗಭೂಮಿ ಕಲಾವಿದರ ಪಾಲಿಗೆ ದುಡಿಮೆಯ ಸಮಯ. ಆದರೆ, ಈ ಬಾರಿ ಕೊರೊನಾದಿಂದಾಗಿ ಬಿದ್ದ ಹೊಡೆತದಿಂದ ಮೇಲೇಳಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ. ಅಲ್ಲಲ್ಲಿ ಬೆರಳೆಣಿಕೆಯ ನಾಟಕಗಳು ಆಯೋಜನೆಯಾದರೂ ನಿರೀಕ್ಷಿತ ಆದಾಯ ಕೈಸೇರದೇ ಪರದಾಟ ಮುಂದುವರಿದಿದೆ.

ಸಾಧಾರಣವಾಗಿ ಡಿಸೆಂಬರ್‌ನಿಂದ ಮೇ ತಿಂಗಳಲ್ಲಿ ಕಾರವಾರ ತಾಲ್ಲೂಕು ಒಂದರಲ್ಲೇ 100ಕ್ಕೂ ಅಧಿಕ ಸಣ್ಣಪುಟ್ಟ ಜಾತ್ರೆಗಳು, ಬಂಡಿಹಬ್ಬ, ವಾರ್ಷಿಕೋತ್ಸವಗಳು ನೆರವೇರುತ್ತವೆ. ಅಲ್ಲೆಲ್ಲ ಕನ್ನಡ, ಕೊಂಕಣಿ ನಾಟಕ, ಯಕ್ಷಗಾನದ ಪ್ರದರ್ಶನ ಸಾಮಾನ್ಯವಾಗಿ ಆಯೋಜನೆಯಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಕಾರಣದಿಂದ ಜಾತ್ರೆಗಳನ್ನು ಹಮ್ಮಿಕೊಳ್ಳಲು ಅವಕಾಶ ಇರಲಿಲ್ಲ. ಇದರಿಂದ ವೃತ್ತಿಪರ ಕಲಾವಿದರು ಇನ್ನಿಲ್ಲದ ಸಂಕಷ್ಟ ಅನುಭವಿಸಿದರು.

ರಂಗಭೂಮಿ ಚಟುವಟಿಕೆಗಳನ್ನು ಆಯೋಜಿಸಲು ಅವಕಾಶ ಬೇಕು ಎಂಬ ಕಲಾವಿದರ ಬೇಡಿಕೆಯನ್ನು ಮನ್ನಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಅದಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ. ಆದರೆ, ಕಾರ್ಯಕ್ರಮದಲ್ಲಿ ಸೇರುವ ಜನಸಂಖ್ಯೆಗೆ ನಿರ್ಬಂಧ ಹೇರಿರುವುದು ಮತ್ತು ಕೋವಿಡ್‌ ಬಗ್ಗೆ ಜನರ ಆತಂಕದಿಂದ ರಂಗ ಚಟುವಟಿಕೆಗಳು ಚೇತರಿಸಿಕೊಂಡಿಲ್ಲ ಎನ್ನುತ್ತಾರೆ ರಂಗಭೂಮಿ ಕಲಾವಿದರು.

ಶಿರಸಿ

ಡೊಳ್ಳು ಕುಣಿತ, ಯಕ್ಷಗಾನ, ಸಂಗೀತ, ಭರತನಾಟ್ಯ ಹೀಗೆ ಹತ್ತಾರು ಕಲಾಪ್ರಕಾರ ಪ್ರದರ್ಶಿಸಿ ಜೀವನ ಸಾಗಿಸುತ್ತಿದ್ದ ಕಲಾವಿದರಿಗೆ ಕೊರೊನಾ ತಂದಿಟ್ಟ ಸಂಕಷ್ಟ ಇನ್ನೂ ನಿವಾರಣೆ ಆಗಿಲ್ಲ. ಕಾರ್ಯಕ್ರಮಗಳ ಪ್ರದರ್ಶನಕ್ಕೆ ಅವಕಾಶ ಸಿಗದೆ ದುಡಿಮೆ ಕಳೆದುಕೊಂಡವರ ಪಾಡು ಹೇಳತೀರದು.

ತಾಲ್ಲೂಕಿನಲ್ಲಿ ಬಹುತೇಕ ಹವ್ಯಾಸಿ ಕಲಾವಿದರಿದ್ದರೂ ವೃತ್ತಿಪರ ಕಲಾವಿದರ ಸಂಖ್ಯೆಗೂ ಕೊರತೆ ಇಲ್ಲ. ಗ್ರಾಮೀಣ ಭಾಗದಲ್ಲಿರುವ ಡೊಳ್ಳು ಕುಣಿತ ತಂಡ, ಜೋಗಿ ನೃತ್ಯ ಕಲಾವಿದರು ಕನಿಷ್ಠಪಕ್ಷ ಮಾಸಾಶನ ಸೌಲಭ್ಯವನ್ನೂ ಪಡೆಯುತ್ತಿಲ್ಲ. 

‘ಸರ್ಕಾರಿ ಜಯಂತ್ಯುತ್ಸವಗಳು, ಸಮಾವೇಶಗಳಲ್ಲಿ ಡೊಳ್ಳು ಕುಣಿತಕ್ಕೆ ಅವಕಾಶ ಸಿಗುತ್ತಿತ್ತು. ಲಾಕ್‍ಡೌನ್‍ನಿಂದಾಗಿ ಅದು ಸ್ಥಗಿತವಾಯಿತು. ವರ್ಷದಲ್ಲಿ ಆದಾಯ ಸಂಪಾದಿಸುತ್ತಿದ್ದ ಕಾಲದಲ್ಲೇ ಸಾಂಕ್ರಾಮಿಕ ರೋಗ ಆವರಿಸಿದ್ದರಿಂದ ಆರ್ಥಿಕ ಸಂಕಷ್ಟದಲ್ಲಿದ್ದೇವೆ’ ಎಂದು ಮಳಲಿಯ ಡೊಳ್ಳು ಕುಣಿತ ಕಲಾತಂಡದ ಮುಖ್ಯಸ್ಥ ಮಂಜುನಾಥ ಗೌಡ ತಿಳಿಸಿದರು.

‘ಒಂಬತ್ತು ತಿಂಗಳಿನಿಂದ ಕಲಾ ತರಬೇತಿ ನೀಡುವವರಿಗೂ ತರಗತಿ ನಡೆಸುವುದು ಕಷ್ಟವಾಯಿತು. ಈಚೆಗೆ ಆನ್‍ಲೈನ್ ತರಬೇತಿ ಆರಂಭಿಸಿದ್ದೇವೆ. ನಿರಂತರ ಕಾರ್ಯಕ್ರಮ ನೀಡುವ ಕಲಾವಿದರಿಗೆ ವೇದಿಕೆ ಮೂಲಕ ಕಲಾ ಪ್ರದರ್ಶನಕ್ಕೆ ಅವಕಾಶ ಸಿಗದಿದ್ದಾಗ ಬೇಸರ ಸಹಜ’ ಎನ್ನುತ್ತಾರೆ ಭರತನಾಟ್ಯ ಕಲಾವಿದೆ ಸೀಮಾ ಭಾಗವತ್.

ಮುಂಡಗೋಡ

ಕೋವಿಡ್ ಕರಿನೆರಳು ಕಲಾತಂಡಗಳು, ಮನರಂಜನಾ ಪರಿಕರಗಳ ಕೆಲಸಗಾರರಿಗೆ ಹೆಚ್ಚಿನ ಆರ್ಥಿಕ ನಷ್ಟ ಉಂಟುಮಾಡಿದೆ. ತಾಲ್ಲೂಕಿನ ಕಾತೂರ ಗ್ರಾಮದೇವಿ ಜಾತ್ರೆಗೆ ಮೈಸೂರಿನಿಂದ ಬಂದಿದ್ದ ಮನರಂಜನಾ ಪರಿಕರಗಳ ಕೆಲಸಗಾರರು ಇನ್ನಿಲ್ಲದ ತೊಂದರೆ ಅನುಭವಿಸಿದರು.

ಜಾತ್ರೆ ಆರಂಭವಾಗಿ 2-3 ದಿನಗಳಲ್ಲಿಯೇ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಇದರಿಂದ 25-30 ಕೆಲಸಗಾರರು ಕೆಲಸವೂ ಇಲ್ಲದೇ ಸ್ವಂತ ಊರಿಗೂ ಹೋಗಲಾಗದೇ ಸತತ ಒಂಬತ್ತು ತಿಂಗಳು ಇದೇ ಊರಿನಲ್ಲಿ ಕಷ್ಟದ ಜೀವನ ಕಳೆದಿದ್ದಾರೆ.

‘ಲಾಕ್‍ಡೌನ್ ಸಮಯದಲ್ಲಿ ಬಹಳ ತೊಂದರೆ ಅನುಭವಿಸಿದ್ದು, 2020ರಲ್ಲಿ ಒಂದೂ ಆಟ ನಡೆಯಲಿಲ್ಲ. ಹೊಟ್ಟೆಪಾಡಿಗಾಗಿ ಭತ್ತದ ಗದ್ದೆ, ಇನ್ನಿತರ ಕೆಲಸ ಮಾಡಿದ್ದೇವೆ. ಮಂಗಳೂರಿಗೆ ಹೋಗಿ ಕೆಲಸ ಮಾಡಿ, ಕುಟುಂಬ ನಿರ್ವಹಣೆ ಮಾಡಿದ್ದೇವೆ. ಅಕ್ಕಪಕ್ಕದ ಕೆಲವರು ಸಹಾಯ ಮಾಡಿದ್ದರು. ಕೋವಿಡ್ ಬಡ ಕಲಾವಿದರ ಬದುಕನ್ನೇ ಅತಂತ್ರ ಮಾಡಿದೆ. ಈಗಲೂ ಆಟಗಳು ನಡೆಯುತ್ತಿಲ್ಲ’ ಎಂದು ಹುಣಸೂರು ತಾಲ್ಲೂಕಿನ ಬಾಬು ಸಿದ್ಧು ಹೇಳಿದರು.

ಸಿದ್ದಾಪುರ

ಕೋವಿಡ್‌ ಕಾರಣದಿಂದಾಗಿ 10 ತಿಂಗಳಿನಿಂದ ತಾಲ್ಲೂಕಿನಲ್ಲಿ ವಿವಿಧ ಕಲಾ ಪ್ರದರ್ಶನಗಳು ಬಹುತೇಕ ಸ್ಥಗಿತವಾಗಿದ್ದು, ಈ ಕಲಾವಿದರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ.

ತಾಲ್ಲೂಕಿನಲ್ಲಿ ರಂಗ ಸೌಗಂಧ ಮತ್ತು ಒಡ್ಡೋಲಗ ಎಂಬ ಎರಡು ಸಕ್ರಿಯ ನಾಟಕ ತಂಡಗಳಿವೆ. ಜೊತೆಗೇ ಕೆಲವು ಹವ್ಯಾಸಿ ನಾಟಕ ಮಂಡಳಿಗಳು, ಜಾನಪದ ಹಾಗೂ ಡೊಳ್ಳಿನ ತಂಡಗಳು ಇವೆ. ಸುಮಾರು 90 ಜನ ಯಕ್ಷಗಾನ ಕಲಾವಿದರಿದ್ದಾರೆ.

‘ಈ ವರ್ಷ ಕೋವಿಡ್‌ ಕಾರಣದಿಂದ ನಮಗೆ ಕೇವಲ ಎರಡು ನಾಟಕಗಳ ಪ್ರದರ್ಶನ ನೀಡಲು ಸಾಧ್ಯವಾಯಿತು. ಫೇಸ್‌ಬುಕ್‌ ಲೈವ್‌ ಮೂಲಕ ನೀಡಿದ ನಾಟಕ ಅಷ್ಟಾಗಿ ಪರಿಣಾಮಕಾರಿ ಆಗಿಲ್ಲ. ನಾಟಕವನ್ನೇ ಜೀವನೋಪಾಯಕ್ಕೆ ಅವಲಂಬಿಸಿದವರು ಕೋವಿಡ್‌ನಿಂದ ಕಷ್ಟ ಪಟ್ಟಿದ್ದಾರೆ. ಬೇರೆ ಆದಾಯ ಮೂಲ ಹೊಂದಿದ ಕಲಾವಿದರು ಹೇಗೋ ಜೀವನ ನಡೆಸಿದ್ದಾರೆ’ ಎಂದು ‘ರಂಗ ಸೌಗಂಧ’ದ ಸಂಚಾಲಕ ಗಣಪತಿ ಹೆಗಡೆ ಹುಲಿಮನೆ ಬೇಸರಿಸುತ್ತಾರೆ.

ಹೊನ್ನಾವರ

ಯಕ್ಷಗಾನ ರಂಗ ಭೂಮಿಗೆ ಶ್ರೇಷ್ಠ ಕಲಾವಿದರನ್ನು ನೀಡಿದ ಹಿರಿಮೆ ಹೊನ್ನಾವರ ತಾಲ್ಲೂಕಿಗಿದೆ. ಕೆರೆಮನೆ, ಗುಂಡಬಾಳ ಮೊದಲಾದ ಹಳೆಯ ಯಕ್ಷಗಾನ ಮೇಳಗಳು ಈಗಲೂ ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ. ಇವುಗಳ ಜೊತೆಗೆ ಅಭಿನೇತ್ರಿ, ಜಲವಳ್ಳಿ, ವೀರಾಂಜನೇಯ ಮೊದಲಾದ ಮೇಳಗಳು ಕಲಾವಿದರಿಗೆ ವೇದಿಕೆ ಒದಗಿಸುವ ಕಾಯಕ ಮಾಡುತ್ತಿವೆ.

ತಾಲ್ಲೂಕಿನಲ್ಲಿ ಸುಮಾರು 100 ವೃತ್ತಿಪರ ಯಕ್ಷಗಾನ ಕಲಾವಿದರಿದ್ದು, ನಾಡಿನ ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್ ಕಾರಣದಿಂದ ಕಲಾವಿದರು ಮತ್ತು ಕಲಾ ಮೇಳಗಳ ಆರ್ಥಿಕ ಸಂಕಷ್ಟ ದ್ವಿಗುಣಗೊಂಡಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಹಲವು ಕಲಾವಿದರು ತಮ್ಮ ಕಲಾ ಬದುಕಿಗೆ ವಿದಾಯ ಹೇಳಲು ತೀರ್ಮಾನಿಸಿದ್ದರು. ಆದರೆ, ಅವರ ಮೈಮನಗಳ ಭಾಗವಾಗಿರುವ ಯಕ್ಷಗಾನದ ಸೆಳೆತ, ಸ್ವಾಭಾವಿಕವಾಗಿ ವ್ಯಾವಹಾರಿಕ ಚತುರರಲ್ಲದ ಈ ಕಲಾವಿದರನ್ನು ರಂಗದಾಚೆ ಹೋಗಲು ಬಿಡಲಿಲ್ಲ.

ಈ ಎಲ್ಲ ಕಾರಣಗಳಿಂದ ರಂಗಭೂಮಿ ಕಲಾವಿದರು, ಕೊರೊನಾ ಎಂಬ ‘ಪರದೆ’ ಸರಿದು ಜನಜೀವನ ಮೊದಲಿನಂತಾಗಲು ಕಾಯುತ್ತಿದ್ದಾರೆ.

‘ಅವಕಾಶವೇ ಸಿಗಲಿಲ್ಲ’

ಮುಂಡಗೋಡ ತಾಲ್ಲೂಕಿನ ಮುಡಸಾಲಿ ಗ್ರಾಮದ ವೀರಗಾಸೆ ತಂಡವು ರಾಜ್ಯಮಟ್ಟದಲ್ಲಿ ಹತ್ತಾರು ಪ್ರದರ್ಶನಗಳನ್ನು ನೀಡಿ ಹೆಸರು ಗಳಿಸಿದೆ. ಆದರೆ, 2020ರಲ್ಲಿ ಕಾರವಾರ ಹೊರತುಪಡಿಸಿ ಮತ್ತೆಲ್ಲೂ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.

‘ಒಟ್ಟು 12ಕ್ಕಿಂತ ಹೆಚ್ಚು ಸದಸ್ಯರ ವೀರಗಾಸೆ ತಂಡಕ್ಕೆ ಪ್ರದರ್ಶನ ಮಾಡಲು ಕೋವಿಡ್‌ನಿಂದ ಸಾಧ್ಯವಾಗಲಿಲ್ಲ. ಒಂದು ಕಡೆ ಆರ್ಥಿಕ ನಷ್ಟ, ಮತ್ತೊಂದೆಡೆ ಕಲೆಯನ್ನು ಬೆಳೆಸಬೇಕೆನ್ನುವ ಯುವಕರ ಆಸೆಗೆ ತಣ್ಣೀರೆರಚಿದೆ. ಈಗಲೂ ಸ್ಥಳೀಯವಾಗಿ ಅಥವಾ ಬೇರೆ ಕಡೆಯಿಂದ ಪ್ರದರ್ಶನದ ಅವಕಾಶ ಸಿಗುತ್ತಿಲ್ಲ’ ಎನ್ನುತ್ತಾರೆ ವೀರಗಾಸೆ ತಂಡದ ಶಾಂತಕುಮಾರ ಕೀರ್ತೆಪ್ಪನವರ್.

‘ತುರ್ತು ನಿಧಿ ಸ್ಥಾ‍ಪಿಸಿ’

ನಿಧಾನವಾಗಿ ತಲೆ ಎತ್ತುತ್ತಿರುವ ವೃತ್ತಿ ಮೇಳಗಳತ್ತ ವೃತ್ತಿಪರ ಕಲಾವಿದರು ಮತ್ತೆ ಮುಖ ಮಾಡಿದ್ದಾರೆ. ಹೊನ್ನಾವರ ತಾಲ್ಲೂಕಿನ ಅಭಿನೇತ್ರಿ, ಜಲವಳ್ಳಿ ತಂಡಗಳು ಆನ್‌ಲೈನ್ ಯಕ್ಷಗಾನ ಪ್ರದರ್ಶನ ಏರ್ಪಡಿಸಿ ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ಸಂಪರ್ಕಕ್ಕೆ ಕೆಲವು ಯತ್ನಗಳನ್ನು ನಡೆಸಿದ್ದವು. ಸ್ಥಳೀಯವಾಗಿ ಹಲವಾರು ದಾನಿಗಳು ಈ ಪ್ರಯತ್ನದಲ್ಲಿ ಕೈಜೋಡಿಸಿದ್ದರೂ ಎಲ್ಲ ಕಲಾವಿದರನ್ನು ತಲುಪಲು ಸಾಧ್ಯವಾಗಲಿಲ್ಲ.

‘ಪ್ರದರ್ಶನಗಳಿಲ್ಲದಿದ್ದರೆ ಕಲಾವಿದ ಆರ್ಥಿಕ ಸಂಕಷ್ಟ ಎದುರಿಸುವ ಜೊತೆಗೆ ಮಾನಸಿಕ ಆಘಾತಕ್ಕೊಳಗಾಗುತ್ತಾನೆ. ಲಾಕ್‌ಡೌನ್‌ನಂಥ ತುರ್ತು ಸ್ಥಿತಿಯನ್ನು ನಿಭಾಯಿಸಲು ಸರ್ಕಾರವು ಕಲಾವಿದರಿಗಾಗಿ ಯಕ್ಷಗಾನ ಅಕಾಡೆಮಿಯ ಮೂಲಕ ತುರ್ತುನಿಧಿಯನ್ನು ಸ್ಥಾಪಿಸುವ ಅಗತ್ಯವಿದೆ’ ಎಂದು ಅಭಿನೇತ್ರಿ ಆರ್ಟ್ಸ್ ಟ್ರಸ್ಟ್‌ನ ಮುಖ್ಯ ಟ್ರಸ್ಟಿ ಶಂಕರ ಹೆಗಡೆ ನೀಲ್ಕೋಡ.

***

* ಈ ವರ್ಷ ಬೇಸಿಗೆಯಲ್ಲಿ ಪ್ರದರ್ಶನ ಕಾಣಬೇಕಿದ್ದ 35ಕ್ಕೂ ಅಧಿಕ ನಾಟಕಗಳು ರದ್ದಾದವು. ಹಾಗಾಗಿ ವೇದಿಕೆಯ ಹಿನ್ನೆಲೆಗೆ ಬಳಸುವ ಪರದೆಯ ಬಾಡಿಗೆಯೂ ನಮಗೆ ಸಿಗದಂತಾಯಿತು.

– ಕೆನ್ಯಾ ಹಣಕೋಣ, ನಾಟಕ ಕಲಾವಿದ

* ಸರ್ಕಾರದ ಸೌಲಭ್ಯ ನಮ್ಮ ಕಲಾವಿದರಿಗೆ ಸಿಕ್ಕಿಲ್ಲ. ಕಲೆಯನ್ನೇ ನಂಬಿದವರ ಬದುಕು ಮೂರಾಬಟ್ಟೆಯಾಗಿದೆ. ಅನಾರೋಗ್ಯವಾದರೆ ಔಷಧಕ್ಕೂ ಹಣ ಹೊಂದಿಸುವುದು ಕಷ್ಟವಾಗಿದೆ.

– ಮಂಜುನಾಥ ಗೌಡ, ಮಳಲಿಯ ಡೊಳ್ಳು ಕುಣಿತ ಕಲಾತಂಡದ ಮುಖ್ಯಸ್ಥ

* ಯಕ್ಷಗಾನ ಕಲಾವಿದರಿಗೆ ಬೆಂಗಳೂರು, ಮುಂಬೈನಂತಹ ನಗರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಗುತ್ತಿತ್ತು. ಕೋವಿಡ್‌ನಿಂದಾಗಿ ಕಲಾವಿದರಿಗೆ ದೊಡ್ಡ ಆರ್ಥಿಕ ಹೊಡೆತವಾಗಿದೆ.

– ಮಹಾಬಲೇಶ್ವರ ಕ್ಯಾದಗಿ, ಯಕ್ಷಗಾನದ ಹಾಸ್ಯ ಕಲಾವಿದ.

* ಪ್ರಜಾವಾಣಿ ತಂಡ: ಸದಾಶಿವ ಎಂ.ಎಸ್, ಗಣಪತಿ ಹೆಗಡೆ, ಶಾಂತೇಶ ಬೆನಕನಕೊಪ್ಪ, ರವೀಂದ್ರ ಭಟ್ ಬಳಗುಳಿ, ಎಂ.ಜಿ.ಹೆಗಡೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.