ಮಂಗಳವಾರ, ಮಾರ್ಚ್ 31, 2020
19 °C
ಪೊಲೀಸರ ಪಿಸ್ತೂಲ್ ಕದ್ದು ಸಿಕ್ಕಿಬಿದ್ದಿದ್ದ ಇಬ್ಬರು: ರೈಲಿನಲ್ಲಿ ಕಳವಿಗೆ ಕೈಜೋಡಿಸಿದ ಮತ್ತೊಬ್ಬ

ಜೈಲು ಶಿಕ್ಷೆಯಾಗಿದ್ದರೂ ಬಿಡದ ಕಳ್ಳತನದ ಚಾಳಿ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಮತ್ಸ್ಯಗಂಧ ಎಕ್ಸ್‌ಪ್ರೆಸ್’ ರೈಲಿನಲ್ಲಿ ಸೆ.28ರಂದು ಬೆಳಗಿನ ಜಾವ ಚಿನ್ನಾಭರಣ ಹಾಗೂ ನಗದು ಕಳವು ಮಾಡಿ ಸಿಕ್ಕಿಬಿದ್ದ ಮೂವರು ಆರೋಪಿಗಳಲ್ಲಿ ಇಬ್ಬರಿಗೆ, ರೈಲಿನಲ್ಲಿ ಕದಿಯುವುದೇ ಕಸುಬಾಗಿತ್ತು. ಈ ಹಿಂದೆ ಉತ್ತರ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ಪಿಸ್ತೂಲ್ ಕದ್ದು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ಗೊತ್ತಾಗಿದೆ.

ಉತ್ತರ ಪ್ರದೇಶದ ದಿಲೀಪ್ ಮಿಶ್ರಾ ಹಾಗೂ ಮುಕದ್ದರ್, ಅಲಹಾಬಾದ್‌ನ ನೈನಿ ಎಂಬಲ್ಲಿ ಸೆರೆಮನೆ ವಾಸ ಅನುಭವಿಸಿದ್ದರು. ಆದರೂ ತಮ್ಮ ಚಾಳಿಯನ್ನು ಬಿಡದ ಅವರು, ಕೊಂಕಣ ರೈಲಿನಲ್ಲಿ ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದರು. ಅವರಿಗೆ ಈಚೆಗೆ ಕುಲ್ಲು ನಿಶಾದ್ ಎಂಬಾತನೂ ಜೊತೆಯಾಗಿದ್ದ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಸಿನಿಮೀಯ ಕಾರ್ಯಾಚರಣೆ: ಮುಂಬೈನ ಬೇಲಾಪುರದಲ್ಲಿರುವ ಕೊಂಕಣ ರೈಲ್ವೆ ಕೇಂದ್ರ ಕಚೇರಿಗೆ ಬಂದ ಮಾಹಿತಿ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಯಿತು. ‘ಮಂಗಳೂರಿನತ್ತ ಹೊರಟಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಚಿನ್ನಾಭರಣ ಮತ್ತು ನಗದು ಕಳವಾಗಿದೆ. ಈ ಬಗ್ಗೆ ಪರಿಶೀಲಿಸಿ’ ಎಂದು ಅಧಿಕಾರಿಗಳು ಭಟ್ಕಳದ ರೈಲ್ವೆ ಪೊಲೀಸರಿಗೆ ಸೂಚಿಸಿದರು. ಕೂಡಲೇ ಎಸ್‌.ಐ ಶಿಶುಪಾಲ, ಕಾನ್‌ಸ್ಟೆಬಲ್ ಕಾನ್‌ಸ್ಟೆಬಲ್‌ಗಳಾದ ವಿ.ವಿ.ಶ್ರೀಕಾಂತ, ಹೇರಂಭ ನಾಯ್ಕ ಹಾಗೂ ಶಶಿಕಲಾ ಪಟಗಾರ್ ಮುರ್ಡೇಶ್ವರ ರೈಲು ನಿಲ್ದಾಣಕ್ಕೆ ಬಂದರು. 

ಅಷ್ಟರಲ್ಲಿ ರೈಲು ನಿಲ್ದಾಣದಿಂದ ಹೊರಟಿತ್ತು. ಪೊಲೀಸರು ಪ್ಲಾಟ್‌ಫಾರಂ ಸುತ್ತಮುತ್ತ ಆರೋಪಿಗಳಿಗೆ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಸ್ಥಳದಲ್ಲಿದ್ದ ಆಟೊರಿಕ್ಷಾ ಚಾಲಕರನ್ನು ಪ್ರಶ್ನಿಸಿದಾಗ ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದ ಮೂವರು ಭಟ್ಕಳ ಬಸ್ ನಿಲ್ದಾಣಕ್ಕೆ ಹೋಗಿದ್ದು ತಿಳಿಯಿತು. ಪೊಲೀಸರು ಅಲ್ಲಿಗೆ ತೆರಳಿದಾಗ, ಮೂವರೂ ಪಣಜಿಗೆ ಹೋಗುವ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ ವಿಚಾರ ಗೊತ್ತಾಯಿತು. 

ಈ ಬಗ್ಗೆ ಕಾರವಾರದ ಆರ್‌.ಪಿ.ಎಫ್‌ನ ಸಹಾಯಕ ಭದ್ರತಾ ಆಯುಕ್ತ ಪ್ರವೀಣ ಕುಮಾರ್‌ ಹಾಗೂ ಐ.ಪಿ.ಎಫ್ ಬಿನೋದ್ ಕುಮಾರ್ ಅವರಿಗೆ ಮಾಹಿತಿ ನೀಡಲಾಯಿತು. ಅವರಿಬ್ಬರೂ ಕಾನ್‌ಸ್ಟೆಬಲ್ ದಿಲೀಪ ಗುನಗಿ ಹಾಗೂ ಚಾಲಕ ಸುಭಾಸ ಮಾಯೇಕರ್ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ 66ರತ್ತ ಧಾವಿಸಿದರು.

ಈ ನಡುವೆ, ಬಸ್ ಚಾಲಕನ ಮೊಬೈಲ್‌ಗೆ ಪೊಲೀಸರು ಕರೆ ಮಾಡಿ ಬಸ್‌ನಲ್ಲಿ ಆರೋಪಿಗಳು ಇರುವ ಬಗ್ಗೆ ತಿಳಿಸಿದರು. ಯಾವುದೇ ಕಾರಣಕ್ಕೂ ಅವರತ್ತ ವಿಶೇಷ ಗಮನ ಹರಿಸಬಾರದು. ತಮ್ಮ ತಂಡ ಕಾಣಿಸಿದಲ್ಲಿ ಬಸ್‌ ನಿಲ್ಲಿಸಬೇಕು ಎಂದೂ ಸೂಚಿಸಿದರು. ಅದರಂತೆ ಕಾರವಾರದ ಬೈತಖೋಲ ಬಳಿ ಪೊಲೀಸರನ್ನು ಕಂಡಾಗ ಚಾಲಕ ಬಸ್ ನಿಲ್ಲಿಸಿದರು. ಅದರಲ್ಲಿದ್ದ ಆರೋಪಿಗಳನ್ನು ಅವರು ಕದ್ದ ವಸ್ತುಗಳೊಂದಿಗೆ ವಶಕ್ಕೆ ಪಡೆದರು.

ಆರೋಪಿಗಳನ್ನು ವಶಕ್ಕೆ ಪಡೆದ ವಿಡಿಯೊ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತವಾಗಿದೆ.

₹ 4 ಲಕ್ಷದ ವಸ್ತು ಜಪ್ತಿ: ಮೂವರು ಆರೋಪಿಗಳು ರೈಲಿನಲ್ಲಿ ಕದ್ದಿದ್ದ ಚಿನ್ನಾಭರಣ, ನಗದು, ಮೊಬೈಲ್‌ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಯಾಣಿಕರಾದ ಉಡುಪಿಯ ಚೈತ್ರಾ ಶೆಟ್ಟಿ ನೀಡಿದ ದೂರಿನ ಪ್ರಕಾರ ಇವುಗಳ ಮೌಲ್ಯ ಸುಮಾರು ₹ 4 ಲಕ್ಷ ಎನ್ನಲಾಗಿದೆ. ದೂರು ದಾಖಲಿಸಿಕೊಂಡಿರುವ ಮುರ್ಡೇಶ್ವರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು