ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಶಾಲ್ಮಲಾ ಶಿಲ್ಪವನಕ್ಕೆ ಪ್ರವಾಸಿಗರ ದಂಡು

ಬುಡಕಟ್ಟು ಜನರ ಜೀವನ ಚಿತ್ರಣ ತೆರೆದಿಡುವ ಜಾಗ
Last Updated 7 ಮೇ 2022, 19:30 IST
ಅಕ್ಷರ ಗಾತ್ರ

ಶಿರಸಿ: ಸೀಮಿತ ವ್ಯಾಪ್ತಿಯಲ್ಲಿ ಅರಣ್ಯ ಜಿಲ್ಲೆ ಖ್ಯಾತಿಯ ಉತ್ತರ ಕನ್ನಡದಲ್ಲಿ ನೆಲೆನಿಂತ ಬುಡಕಟ್ಟು ಜನರ ಜೀವನ ಚಿತ್ರಣ ಕಣ್ತುಂಬಿಕೊಡುವ ಜಾಗ ಇಲ್ಲಿನ ಚಿಪಗಿಯಲ್ಲಿರುವ ಶಾಲ್ಮಲಾ ಶಿಲ್ಪವನ.

ಆರು ವರ್ಷಗಳ ಹಿಂದೆ 15 ಹೆಕ್ಟೇರ್ ಪ್ರದೇಶದಲ್ಲಿ ಸ್ಥಾಪಿತವಾದ ಉದ್ಯಾನ ಪ್ರವಾಸಿಗರನ್ನು ಮನಸೆಳೆಯುವ ಕೇಂದ್ರವಾಗಿ ಮಾರ್ಪಟ್ಟಿದೆ. ಸಸ್ಯ ವೈವಿಧ್ಯವನ್ನು ಒಳಗೊಂಡ ನೈಸರ್ಗಿಕ ಅರಣ್ಯ ಪ್ರದೇಶದಲ್ಲಿ ಕಲಾಕೃತಿಗಳನ್ನು ಸ್ಥಾಪಿಸಿ ಮೆರಗು ಹೆಚ್ಚಿಸಲಾಗಿದೆ.

ಹಾಲಕ್ಕಿ, ಸಿದ್ದಿ, ಗೌಳಿ, ಕುಣಬಿ ಮುಂತಾದ ಬುಡಕಟ್ಟು ಜನರ ದೈನಂದಿನ ಜೀವನ ಪ್ರತಿಬಿಂಬಿಸುವ ಕಲಾಕೃತಿಗಳು, ಗುಡಿಸಿಲಿನ ಮಾದರಿಗಳನ್ನು ಕಾಂಕ್ರೀಟ್ ಬಳಸಿ ರಚಿಸಲಾಗಿದೆ. ಇವೇ ಇಲ್ಲಿನ ಮುಖ್ಯ ಆಕರ್ಷಣೆ. ಇದರ ಹೊರತಾಗಿ ಹುಲಿ, ಕಪ್ಪು ಚಿರತೆ, ಕಾಡುಕೋಣ, ಹೆಬ್ಬಾವು, ಜಿಂಕೆ, ಮುಂತಾದ ವನ್ಯಜೀವಿಗಳನ್ನು ತದ್ರೂಪ ಹೋಲುವ ಕಲಾಕೃತಿಗಳು ನೋಡುಗರನ್ನು ಸೆಳೆಯುತ್ತವೆ.

ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷದಿಂದ ಶಿಲ್ಪವನ ಬಹುತೇಕ ದಿನ ಬಾಗಿಲು ಮುಚ್ಚಿತ್ತು. ಆದಾಯವಿಲ್ಲದ ಪರಿಣಾಮ ನಿರ್ವಹಣೆಯೂ ಸರಿಯಾಗಿಲ್ಲದೆ ಸೊರಗಿತ್ತು. ಈಗ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ವಾರಾಂತ್ಯದಲ್ಲಿ ನೂರಾರು ಸಂಖ್ಯೆಯ ಜನರು ಶಿಲ್ಪವನದ ಸೊಬಗು ಸವಿಯುತ್ತಿದ್ದಾರೆ. ವಯಸ್ಕರಿಗೆ ₹40, ಮಕ್ಕಳಿಗೆ ₹20 ಪ್ರವೇಶ ದರ ನಿಗದಿಪಡಿಸಲಾಗಿದೆ.

ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಈ ಉದ್ಯಾನ ಪ್ರಿವೆಡ್ಡಿಂಗ್ ಫೋಟೊಶೂಟ್, ಪಿಕ್‍ನಿಕ್ ತಾಣವಾಗಿ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಬೇಸಿಗೆ ಶಿಬಿರದ ಕಲಿಕಾರ್ಥಿಗಳು ಗುಂಪು ಗುಂಪಾಗಿ ಉದ್ಯಾನ ವೀಕ್ಷಣೆ ನಡೆಸುತ್ತಿದ್ದಾರೆ. ಮಕ್ಕಳಿಗಾಗಿಯೇ ಆಡಿ ನಲಿಯಲು ನಿರ್ಮಿಸಿರುವ ‘ಕಿಡ್ ಝೋನ್’ನಲ್ಲಿ ಜಂಗುಳಿ ಕಾಣಸಿಗುತ್ತಿದೆ.

‘ಶಿರಸಿ–ಹುಬ್ಬಳ್ಳಿ ಹೆದ್ದಾರಿ ಪಕ್ಕದಲ್ಲೇ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಸತತ ಮಳೆ ಬೀಳುತ್ತಿರುವ ಕಾರಣ ಉದ್ಯಾನ ಹಸಿರಾಗಿರುವುದು ಮೆರಗು ಹೆಚ್ಚಿಸಿದೆ. ಹಸಿರು ಉದ್ಯಾನ ನೋಡಲೆಂದೇ ಜನರು ಬರುತ್ತಿದ್ದಾರೆ’ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಆಹ್ಲಾದಕರ ವಾತಾವರಣ:

‘ನೈಸರ್ಗಿಕ ಅರಣ್ಯದಲ್ಲಿ ನಿರ್ಮಾಣವಾಗಿರುವ ಕಾರಣ ಶಿಲ್ಪವನದಲ್ಲಿಬಿರು ಬೇಸಿಗೆಯಲ್ಲೂ ಸುತ್ತಾಡಿದರೂ ಸೆಖೆಯ ಅನುಭವ ಆಗುತ್ತಿಲ್ಲ. ಇಲ್ಲಿನ ಆಹ್ಲಾದಕರ ವಾತಾವರಣಕ್ಕೆ ಮನಸೋತಿದ್ದೇವೆ’ ಎನ್ನುತ್ತಾರೆ ಹುಬ್ಬಳ್ಳಿಯ ಹರ್ಷಿತ್ ಕುಲಕರ್ಣಿ.

‘ಉದ್ಯಾನದ ಆವರಣದಲ್ಲಿ ತಿನಿಸು ಮಳಿಗೆ ಅಗತ್ಯವಿದೆ. ಉದ್ಯಾನಕ್ಕೆ ಬಂದು ಅಸಭ್ಯವಾಗಿ ವರ್ತನೆಯಲ್ಲಿ ತೊಡಗುವವರಿಗೆ ಕಡಿವಾಣ ಹಾಕುವ ಅಗತ್ಯವೂ ಇದೆ’ ಎಂದರು.

--------------

ಶಾಲ್ಮಲಾ ಶಿಲ್ಪವನದಲ್ಲಿ ಪ್ರವಾಸಿಗರನ್ನು ಸೆಳೆಯಲು ಇನ್ನಷ್ಟು ಸೌಕರ್ಯ ಅಳವಡಿಸುವ ಯೋಚನೆ ಇದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾದರಷ್ಟೆ ಇದು ಸಾಧ್ಯವಾಗಲಿದೆ.

ಬಸವರಾಜ ಬೋಚಳ್ಳಿ, ಶಿರಸಿ ಆರ್.ಎಫ್.ಒ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT