ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಮಕ್ಕಳ ಕೆಲಸ ಚಳವಳಿಯಾಗಿ ಬೆಳೆಯಲಿ

ಅಜಿತ ಮನೋಚೇತನಾ ಸಂಸ್ಥೆಯಲ್ಲಿ ಶಿಕ್ಷಕರಿಗೆ ಕಾರ್ಯಾಗಾರ
Last Updated 29 ಆಗಸ್ಟ್ 2019, 13:29 IST
ಅಕ್ಷರ ಗಾತ್ರ

ಶಿರಸಿ: ವಿಶೇಷ ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳು, ಸಂಘಟನೆಗಳು ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಈ ಕಾರ್ಯವನ್ನು ಚಳವಳಿ ರೂಪದಲ್ಲಿ ನಡೆಸಬೇಕು ಎಂದು ಬೆಂಗಳೂರಿನ ವಿಶೇಷ ಮಕ್ಕಳ ಪುನರ್ವಸತಿ ಸಂಸ್ಥೆ ‘ಧರಿತ್ರಿ’ ಮುಖ್ಯಸ್ಥ ಶ್ರೀಕಾಂತ ಬೆಟಗೇರಿ ಹೇಳಿದರು.

ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಧರಿತ್ರಿ ವಿಶೇಷ ಮಕ್ಕಳ ಪುನರ್ವಸತಿ ಸಂಸ್ಥೆ ಜಂಟಿ ಆಶ್ರಯದಲ್ಲಿ ಗುರುವಾರ ಇಲ್ಲಿ ಆಯೋಜಿಸಿದ್ದ ಶಿಕ್ಷಕರ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ವಿಶೇಷ ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುವವರು ಆಗಾಗ ಸೇರಿ ಪರಸ್ಪರ ವಿಷಯ ಹಂಚಿಕೆ ಮಾಡಿಕೊಳ್ಳುವುದರಿಂದ ಹೊಸ ಪ್ರಯೋಗಗಳು ಅರಿವಾಗುತ್ತವೆ ಎಂದರು.

ವಿಶೇಷ ಮಕ್ಕಳ ಏಳ್ಗೆ, ಅವರ ಸ್ವಾವಲಂಬನೆ ಶಾಲೆಗಳು ಹಾಗೂ ಶಿಕ್ಷಕರ ಉದ್ದೇಶವಾಗಿರಬೇಕು. ಪ್ರತಿ ವ್ಯಕ್ತಿಯಲ್ಲೂ ಒಂದಿಲ್ಲೊಂದು ಕೊರತೆಯಿರುತ್ತದೆ. ಆದರೆ, ವಿಶೇಷ ಮಕ್ಕಳಲ್ಲಿರುವ ಕೊರತೆ ಎದ್ದು ಕಾಣುತ್ತದೆ. ಅವರು ತಮ್ಮ ನಿತ್ಯದ ಕೆಲಸಗಳನ್ನು ಸ್ವತಂತ್ರವಾಗಿ ಮಾಡಿಕೊಳ್ಳುವಷ್ಟು ಸಿದ್ಧರಾದರೆ ಶೇ 50ರಷ್ಟು ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.

ಸಂಗೀತ, ಪರಿಸರ, ನೃತ್ಯ, ಯೋಗ, ಪ್ರಾಣಾಯಾಮ ಸೇರಿದಂತೆ ಹೊಸ ಕ್ಷೇತ್ರಗಳ ಪರಿಚಯ, ಪ್ರಯೋಗ, ರಚನಾತ್ಮಕ ಚಟುವಟಿಕೆಗಳ ಮೂಲಕ ವಿಶೇಷ ಮಕ್ಕಳ ವಿಕಾಸಕ್ಕೆ ಸಂಘ–ಸಂಸ್ಥೆಗಳು ಮುಂದಾಗಬೇಕು. ವಿಶೇಷ ಮಕ್ಕಳ ವಿಕಾಸಕ್ಕೆ ಪೂರಕವಾಗಿ ಶಿಕ್ಷಕರ ಮಾನಸಿಕತೆ, ಚಿಂತನೆಗಳನ್ನು ಒರೆಗೆ ಹಚ್ಚುವ ತರಬೇತಿ, ಮಾರ್ಗದರ್ಶನ ನೀಡುವ ಕೆಲಸ ಆಗಬೇಕು. ವಿಶೇಷ ಮಕ್ಕಳು, ಅವರ ಪಾಲಕರು, ಶಿಕ್ಷಕರ ಸಮೂಹ, ಆಡಳಿತ ಮಂಡಳಿಯ ಆಧಾರದ ಮೇಲೆ ಸಂಸ್ಥೆಯೊಂದು ಸರಿಯಾಗಿ ನಡೆಯುತ್ತದೆ. ನಾವು ಮಾಡುವ ಕೆಲಸ ವಿಶಾಲವಾಗಿದೆ ಎಂದು ಭಾವಿಸದೆ, ವಿಶಾಲ ಜಗತ್ತಿನ ವಿಚಾರ, ಆವಿಷ್ಕಾರಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ಮಾಡಿದರು.

ನಿವೃತ್ತ ಶಿಕ್ಷಕ ವಿ.ಆರ್.ಹೆಗಡೆ ನೀರ್ನಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಅಜಿತ ಮನೋಚೇತನಾ ಟ್ರಸ್ಟ್‌ ಪ್ರಮುಖ ಅನಂತ ಅಶೀಸರ, ಅಧಿಕಾರಿ ಹೇಮಲತಾ ನಾಯ್ಕ ಇದ್ದರು. ಟ್ರಸ್ಟ್ ಅಧ್ಯಕ್ಷ ಸುಧೀರ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸುಮಿತ್ರಾ ಮರಾಠಿ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ನರ್ಮದಾ ಹೆಗಡೆ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳ ವಿಶೇಷ ಮಕ್ಕಳ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT