ಶನಿವಾರ, ಜನವರಿ 16, 2021
19 °C
ಚತುಷ್ಪಥ ಕಾಮಗಾರಿಗೆ ತೆರವು ಮಾಡಿದ ಕಲ್ಲುಗಳ ಅಪಾಯಕಾರಿ ಸಾಗಣೆ

ಕಾರವಾರ: ಹೆದ್ದಾರಿ ಪ್ರಯಾಣಿಕರಿಗೆ ಕಲ್ಲಿನ ಆತಂಕ!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಸದಾ ಒಂದಿಲ್ಲೊಂದು ಕಾರಣದಿಂದ ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಲೇ ಇದೆ. ಗುಡ್ಡದಿಂದ ಅಗೆದು ತೆಗೆದ ಕಲ್ಲುಗಳ ಅವೈಜ್ಞಾನಿಕ ರೀತಿಯ ಸಾಗಣೆ ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.

ತಾಲ್ಲೂಕಿನ ಬಿಣಗಾ, ಅರಗಾ ಮುಂತಾದೆಡೆ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು ಕೊರೆಯಲಾಗಿದೆ. ಅವುಗಳಲ್ಲಿದ್ದ ಬೃಹತ್ ಬಂಡೆಗಲ್ಲುಗಳನ್ನು ಒಡೆದು ಬೇರೆಡೆಗೆ ಲಾರಿಗಳ ಮೂಲಕ ಸಾಗಿಸಲಾಗುತ್ತಿದೆ. ಆದರೆ, ಹೀಗೆ ಸಾಗಿಸುವಾಗ ಸಾರ್ವಜನಿಕರ ಬಗ್ಗೆ ಕನಿಷ್ಠ ಸುರಕ್ಷತಾ ಕ್ರಮಗಳನ್ನೂ ಅನುಸರಿಸುತ್ತಿಲ್ಲ. ತೆರೆದ ಲಾರಿಗಳಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಕೊಂಡೊಯ್ಯುವುದು ಆತಂಕ ಮೂಡಿಸುತ್ತದೆ ಎನ್ನುತ್ತಾರೆ ಕಾರು ಚಾಲಕ ಮಂಗಳೂರಿನ ನರಸಿಂಹ.

‘ಲಾರಿಗಳ ಕ್ಯಾರಿಯರ್ ಮಟ್ಟವನ್ನು ಮೀರಿ ಕಲ್ಲುಗಳನ್ನು ಹೇರಲಾಗುತ್ತಿದೆ. ಕಾರವಾರ ಸಮೀಪಿಸುತ್ತಿದ್ದಂತೆ ಹೆದ್ದಾರಿಯು ತುಂಬ ತಿರುವು, ಏರಿಗಳಿಂದ ಕೂಡಿದೆ. ಕಲ್ಲುಗಳನ್ನು ಸಾಗಿಸುವ ಲಾರಿಗಳು ವೇಗವಾಗಿ, ಹೆದ್ದಾರಿಯ ಮಧ್ಯದಲ್ಲೇ ಸಾಗುತ್ತಿರುತ್ತವೆ. ಅವುಗಳಿಂದ ಕಲ್ಲು ಬಿದ್ದರೆ ಹಿಂದೆ ಇರುವ ವಾಹನ ಸವಾರರ ಜೀವಕ್ಕೇ ಅಪಾಯವಾಗಬಹುದು. ವಾಹನಗಳ ಗಾಜು ಒಡೆಯಬಹುದು. ದ್ವಿಚಕ್ರ ವಾಹನ ಚಾಲಕರು ನಿಯಂತ್ರಣ ತಪ್ಪಿ ಬೀಳಬಹುದು. ಇದು ಅತ್ಯಂತ ಅಪಾಯಕಾರಿ. ಸುರಕ್ಷತಾ ಕ್ರಮಗಳನ್ನು ಅನುಸರಿಸಿಯೇ ಕಲ್ಲು ಸಾಗಣೆ ಮಾಡಬೇಕು’ ಎಂಬುದು ಅವರ ಒತ್ತಾಯವಾಗಿದೆ.

‘ನನ್ನ ಎದುರೇ ಲಾರಿಯೊಂದರಿಂದ ಸಣ್ಣ ಗಾತ್ರದ ಕಲ್ಲುಗಳು ಉದುರುತ್ತಿದ್ದವು. ಲಾರಿಯನ್ನು ಓವರ್‌ಟೇಕ್ ಮಾಡಿ ಸಾಗಲೂ ಆಗಲಿಲ್ಲ. ಕೊನೆಗೆ ರಸ್ತೆಯಂಚಿನಲ್ಲಿ ಕಾರನ್ನು ನಿಲ್ಲಿಸಿ ಸ್ವಲ್ಪ ಸಮಯದ ಬಳಿಕ ನಾನು ಪ್ರಯಾಣ ಬೆಳೆಸಿದೆ’ ಎಂದು ತಮಗಾದ ಅನುಭವವನ್ನು ತಿಳಿಸಿದರು.

‘ಟಾರ್ಪಾಲ್ ಅಳವಡಿಕೆ ಕಡ್ಡಾಯ’: ‘ಕಲ್ಲು ಸಾಗಣೆಯ ಲಾರಿಗಳಲ್ಲಿ ಟಾರ್ಪಾಲ್ ಅಳವಡಿಕೆ ಕಡ್ಡಾಯವಾಗಿದೆ. ಒಂದುವೇಳೆ, ಇದು ಸಾಧ್ಯವಾಗದಿದ್ದರೆ ಕ್ಯಾರಿಯರ್ ಮಟ್ಟದಲ್ಲೇ ಕಲ್ಲುಗಳನ್ನು ಹೇರಬೇಕು. ಓವರ್‌ಲೋಡ್ ಮಾಡುವುದು, ತಿರುವುಗಳಲ್ಲಿ ವೇಗವಾಗಿ ಸಾಗುವುದರ ವಿರುದ್ಧ ಕಾರ್ಯಾಚರಣೆ ಮಾಡಲಾಗುವುದು’ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

‘ಈ ಬಗ್ಗೆ ಹಿಂದೊಮ್ಮೆ ಕ್ರಮ ಕೈಗೊಳ್ಳಲಾಗಿತ್ತು. ಈಗ ಮತ್ತೆ ನಿಯಮ ಮೀರಿದ್ದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು