ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ತೀವ್ರಗೊಂಡ ಸುಸಜ್ಜಿತ ಆಸ್ಪತ್ರೆ ಅಭಿಯಾನ

ಏಳು ಸಾವಿರಕ್ಕೂ ಅಧಿಕ ಟ್ವಿಟ್‌ಗಳು: ಟ್ವಿಟರ್‌ನಲ್ಲಿ ‘ಟ್ರೆಂಡ್’ ಆದ ಜಿಲ್ಲೆಯ ಜನರ ಬೇಡಿಕೆ
Last Updated 8 ಜೂನ್ 2019, 19:45 IST
ಅಕ್ಷರ ಗಾತ್ರ

ಕಾರವಾರ: ಸುಸಜ್ಜಿತಆಸ್ಪತ್ರೆಯೊಂದು ಜಿಲ್ಲೆಯಲ್ಲಿ ನಿರ್ಮಾಣ ಆಗಲೇಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿರುವ ಅಭಿಯಾನ, ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.

ಶನಿವಾರ ಒಂದೇ ದಿನ #WeNeedEmergencyHospitalInUttarakannada ಎಂಬ ಹ್ಯಾಷ್‌ಟ್ಯಾಗ್ ಬಳಸಿ 7 ಸಾವಿರಕ್ಕೂ ಅಧಿಕ ಟ್ವಿಟ್‌ಗಳನ್ನು ಮಾಡಲಾಗಿದೆ. ಸಂಜೆಎಂಟುಗಂಟೆಯವರೆಗೆಇದು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ, ದೇಶದಲ್ಲಿ 22ನೇಸ್ಥಾನದಲ್ಲಿ ‘ಟ್ರೆಂಡ್’ ಆಯಿತು.

ಮುಖ್ಯಮಂತ್ರಿ ಪ್ರತಿಕ್ರಿಯೆ:ಈ ಅಭಿಯಾನಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವಿಟರ್‌ನಲ್ಲಿ ಶನಿವಾರ ಪ್ರತಿಕ್ರಿಯಿಸಿದ್ದಾರೆ.

‘ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆಯ ಅಗತ್ಯಕ್ಕಾಗಿ ಅಭಿಯಾನ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ವರದಿ ತರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಫೇಸ್‌ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಂಗಳಲ್ಲೂ ಅಭಿಯಾನ ಮುಂದುವರಿದಿದೆ.ಜಿಲ್ಲೆಯ ಎಲ್ಲ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಸಂಸದ ಅನಂತಕುಮಾರ ಹೆಗಡೆ, ಪ್ರಧಾನಮಂತ್ರಿ ಕಚೇರಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲ ಪ್ರಮುಖ ವ್ಯಕ್ತಿಗಳಿಗೆ ಟ್ವಿಟ್ ಮಾಡಲಾಗುತ್ತಿದೆ. ಸಾಮಾಜಿಕ ಕಳಕಳಿಯುಳ್ಳ ಯುವಕರಿಂದ ಆರಂಭವಾದ ಈ ಅಭಿಯಾನಕ್ಕೆ ಜಿಲ್ಲೆಯ ಜನಪ್ರತಿಧಿಗಳೂ ಬೆಂಬಲ ಸೂಚಿಸಿದ್ದಾರೆ. ಜಿಲ್ಲೆಯ ಬಹುಜನರ ಈ ಬೇಡಿಕೆಯನ್ನು ಸದನದಲ್ಲಿ ಮಂಡಿಸುವುದಾಗಿ ಶಾಸಕರುಭರವಸೆ ನೀಡಿದ್ದಾರೆ.

ಕಾರವಾರದ ಶಾಸಕಿ ರೂಪಾಲಿ ನಾಯ್ಕ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ನಾನು ಶಾಸಕಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮೊದಲು ಮಾಡಿದ ಕೆಲಸವೇ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಒತ್ತಾಯಿಸಿದ್ದು. ಅಂದಿನ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು2018ರ ಜುಲೈ 6 ಹಾಗೂ ಡಿ.13ರಂದು ಭೇಟಿಯಾಗಿಈ ಬಗ್ಗೆ ಮನವಿ ಸಲ್ಲಿಸಿದ್ದೆ’ ಎಂದು ತಿಳಿಸಿದ್ದಾರೆ.

‘ಈ ಸಂಬಂಧ₹550 ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನೂ ತಯಾರಿಸಿ ಸಲ್ಲಿಸಿದ್ದೆ. ಈ ವರ್ಷಫೆಬ್ರುವರಿಯಲ್ಲಿ ರಾಜ್ಯ ಬಜೆಟ್‌ನಲ್ಲಿ ಹೊಸದಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಿಕೊಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಮನವಿ ಮಾಡಿದ್ದೆ’ ಎಂದು ಹೇಳಿದ್ದಾರೆ.

‘ಅಭಿಯಾನದ ಒತ್ತಾಯದಂತೆ, ಶೀಘ್ರವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವಂತೆಮತ್ತೊಮ್ಮೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ರಿಗೆಹಾಗೂ ಮುಖ್ಯಮಂತ್ರಿಗೆಮನವಿ ಮಾಡಿ ಒತ್ತಾಯಿಸುತ್ತೇನೆ. ಅಭಿಯಾನ ಮುಂದು ವರಿಸೋಣ. ಶಾಸಕಿಯಾಗಿ ನನ್ನ ಕರ್ತವ್ಯ ನಾನು ಮಾಡುವೆ, ನಿಮ್ಮ ಜೊತೆಗಿರುವೆ’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಕುಮಟಾ ಶಾಸಕ ದಿನಕರ ಶೆಟ್ಟಿ ಆಸ್ಪತ್ರೆಯ ಅವಶ್ಯಕತೆಯನ್ನು ಒಪ್ಪಿಕೊಂಡಿದ್ದಾರೆ. ‘ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಕುರಿತು ದುಬೈನ ಉದ್ಯಮಿ ಬಿ.ಆರ್.ಶೆಟ್ಟಿ ಅವರ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಅದಕ್ಕಾಗಿ ಎಂಟು ಎಕರೆ ಜಾಗದ ಹುಡುಕಾಟ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಇದೇ ರೀತಿ, ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಹಮತ ವ್ಯಕ್ತಪಡಿಸಿದ್ದಾರೆ. ‘ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೇಡಿಕೆಗೆ ನನ್ನ ಸಹಮತವಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮುಂದುವರಿಸುವೆ’ ಎಂದು ಬರೆದು ಕೊಂಡಿದ್ದಾರೆ.

ಭಟ್ಕಳ ಶಾಸಕ ಸುನೀಲ ನಾಯ್ಕ ಕೂಡ ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಮ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಮುಖಂಡರಾದ ಶಾರದಾ ಶೆಟ್ಟಿ, ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಕೂಡ ಅಭಿಯಾನವನ್ನು ಬೆಂಬಲಿಸಿದ್ದಾರೆ. ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ, ಯುವ ಬ್ರಿಗೇಡ್ ಸಂಸ್ಥಾ‍ಪಕ ಚಕ್ರವರ್ತಿ ಸೂಲಿಬೆಲೆ, ಕನ್ನಡ ಪರ ವಿವಿಧ ಸಂಘಟನೆಗಳ ಮುಖಂಡರೂ ಬೆಂಬಲ ಸೂಚಿಸಿದ್ದಾರೆ.

ಟ್ವೀಟ್‌ ಮಾಡಿದ್ದಕ್ಕೆ ಬ್ಲಾಕ್...!:ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿ ಟ್ವೀಟ್‌ ಮಾಡಿದವರನ್ನು ಸಂಸದ ಅನಂತಕುಮಾರ ಹೆಗಡೆ ಬ್ಲಾಕ್ ಮಾಡಿದ್ದಾರೆ. ‘ಉತ್ತರ ಕನ್ನಡ ಟ್ರೋಲರ್ಸ್’ ಎಂಬ ಟ್ವಿಟರ್ ಖಾತೆಯಿಂದ ಸಂಸದರಿಗೆ ಟ್ವಿಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸುವ ಬದಲು ಅವರು ಬೇಡಿಕೆ ಮಂಡಿಸಿದವರನ್ನೇ ತಮ್ಮ ಸಾಮಾಜಿಕ ಜಾಲತಾಣ ಖಾತೆಯಿಂದ ದೂರವಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT