ಶನಿವಾರ, ಜೂಲೈ 11, 2020
21 °C
ಗೂಡಿಗೆ ಮರಳುವ ಆನೆಗಳ ಪಾಲಿಗೆ ದುರ್ಗಮವಾಗುತ್ತಿರುವ ದಾರಿ

ಮುಂಡಗೋಡ| ನಾಲ್ಕು ತಿಂಗಳಲ್ಲಿ ಎರಡು ಆನೆ ಸಾವು

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ವಾರ್ಷಿಕ ಸಂಚಾರ ಮುಗಿಸಿ ದಾಂಡೇಲಿ ಅಭಯಾರಣ್ಯಕ್ಕೆ ಮರಳಬೇಕಿದ್ದ ಆನೆಗಳೆರೆಡು, ಈ ವರ್ಷ ದಾರಿ ಮಧ್ಯೆಯೇ ಜೀವ ಕಳೆದುಕೊಂಡಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಸರಾಸರಿ ಒಂದರಂತೆ ಆನೆ ಮೃತಪಟ್ಟು, ಗಜಪಡೆಗೆ ತಾಲ್ಲೂಕಿನ ಅರಣ್ಯ ಪ್ರದೇಶ ದುರ್ಗಮ ದಾರಿಯಾಗುತ್ತಿದೆ.

ಅದರಲ್ಲಿಯೂ ತಾಲ್ಲೂಕಿನ ಗುಂಜಾವತಿ ಅರಣ್ಯ ಪ್ರದೇಶ, ಗಜಪಡೆಯ ಪಾಲಿಗೆ ಸಾವಿನಮನೆ ಎಂಬ ಅಪವಾದ ಹೊತ್ತುಕೊಳ್ಳಬೇಕಾಗಿದೆ. ಇತ್ತೀಚಿನ ವರ್ಷಗಳಲ್ಲಿ ಒಂದು ಮರಿ ಆನೆ ಸಹಿತ ಮೂರು ಆನೆಗಳು ಇದೇ ಅರಣ್ಯದಲ್ಲಿ ಅಸುನೀಗಿವೆ. ಈ ವರ್ಷದ ಆರಂಭದಲ್ಲಿಯೇ ಅವಧಿ ಪೂರ್ವ ಜನಿಸಿದ್ದ ಮರಿಆನೆ ಬಾಳೆಹಳ್ಳದಲ್ಲಿ ಜೀವ ಕಳೆದುಕೊಂಡಿತ್ತು. ಹೆಣ್ಣಾನೆಯು ಮರಿಯಾನೆಗೆ ಪರಿತಪಿಸುತ್ತ ಸತತ ಎಂಟು ದಿನಗಳ ಕಾಲ ಮೂಕರೋದನ ತೋರಿತ್ತು.

ಈ ಘಟನೆ ಮಾಸುವ ಮುನ್ನವೇ 15-20 ವರ್ಷದ ಹೆಣ್ಣಾನೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪ್ರತ್ಯಕ್ಷವಾಗಿ, ಗುಂಜಾವತಿಯ ಅರಳಿಕಟ್ಟೆ ಕೆರೆಯಲ್ಲಿ ನರಳಾಡಿ ಗುರುವಾರ ಜೀವ ಬಿಟ್ಟಿದೆ. ಅದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿಲ್ಲ ಎಂಬ ಆರೋಪದ ನಡುವೆಯೇ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. 2020ರಲ್ಲಿ ಎರಡು ಆನೆಗಳು ದಾರಿಮಧ್ಯೆ ಪ್ರಾಣ ಬಿಟ್ಟು, ತಾಲ್ಲೂಕಿನ ಗಜಪಥದಲ್ಲಿ ಕಪ್ಪು ಚುಕ್ಕೆ ದಾಖಲಾಗಿದೆ.

ಸುರಕ್ಷಿತವಾಗಿ ಮರಳಲಿ: ಇನ್ನೂ ನಾಲ್ಕು ಆನೆಗಳು ಸದ್ಯ ಕಾತೂರ ಅರಣ್ಯ ವಲಯದಲ್ಲಿಯೇ ಸಂಚಾರ ನಡೆಸಿದ್ದು, ಯಾವುದೇ ಅನಾಹುತ ಆಗದಂತೆ ಅವುಗಳು ಗೂಡಿಗೆ ಮರಳುವಂತಾಗಬೇಕು. ಈ ಸಲ ಎರಡು ಆನೆಗಳು ದಾವಣಗೆರೆ ಜಿಲ್ಲೆಯ ಚನ್ನಗಿರಿಗೆ ಹೋಗಿ ಮರಳಿವೆ ಎಂದು ವನ್ಯಜೀವಿ ಸಂಸ್ಥೆಯ ಸದಸ್ಯ ರವಿ ಯಲ್ಲಾಪುರ ಅಭಿಪ್ರಾಯ ಪಡುತ್ತಾರೆ.

ಪುನರ್ವಸತಿ ಕೇಂದ್ರಕ್ಕೆ ಆಗ್ರಹ: ಪ್ರತಿ ವರ್ಷ ದಾಂಡೇಲಿಯಿಂದ 60-70ರಷ್ಟು ಕಾಡಾನೆಗಳು ಆಹಾರ ಅರಸಿ ಹಳಿಯಾಳ-ಖಾನಾಪುರ, ಸಾಂಬ್ರಾಣಿ-ಭಗವತಿ, ಯಲ್ಲಾಪುರ-ಮುಂಡಗೋಡ ಮಾರ್ಗದಲ್ಲಿ ಸಂಚರಿಸುತ್ತವೆ. ಗಾಯಗೊಂಡ ಸಮಯದಲ್ಲಿ ಚಿಕಿತ್ಸೆ ಕೊಡಿಸಲು, ಶಿವಮೊಗ್ಗದ ಸಕ್ರೇಬೈಲ್ ಆನೆ ಬಿಡಾರದ ವೈದ್ಯರೇ ಬರಬೇಕು. ದಾಂಡೇಲಿ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿಯೇ ಆನೆಗಳ ಪುನರ್ವಸತಿ ಕೇಂದ್ರ ಮಾಡಿದರೆ, ಕಾಡಾನೆಗಳ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ವನ್ಯಜೀವಿ ಹೋರಾಟಗಾರರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.