ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳವಿ: ಚೆನ್ನಬಸವೇಶ್ವರ ರಥೋತ್ಸವ 10ರಂದು

ಜೊಯಿಡಾ ತಾಲ್ಲೂಕಿನ ಉಳವಿ: ಈ ಬಾರಿ 400 ಚಕ್ಕಡಿಗಳು ಬರುವ ನಿರೀಕ್ಷೆ
Last Updated 3 ಫೆಬ್ರುವರಿ 2020, 11:20 IST
ಅಕ್ಷರ ಗಾತ್ರ

ಕಾರವಾರ:ಜೊಯಿಡಾ ತಾಲ್ಲೂಕಿನ ಉಳವಿಯಲ್ಲಿ ಚೆನ್ನಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.10ರಂದು ಸಂಜೆ 4ಕ್ಕೆ ಮಹಾರಥೋತ್ಸವ ನೆರವೇರಲಿದೆ ಎಂದು ಶ್ರೀ ಚೆನ್ನಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಗಂಗಾಧರ ಚೆನ್ನಪ್ಪ ಕಿತ್ತೂರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆ.10ರಂದು ಶಾಸಕ ಆರ್.ವಿ.ದೇಶಪಾಂಡೆ ರಥಕ್ಕೆ ಪೂಜೆ ಸಲ್ಲಿಸಿರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿವಿಧ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದ್ದು,ಭಕ್ತರಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ’ ಎಂದರು.

‘ಕ್ಷೇತ್ರದಲ್ಲಿ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ಟ್ರಸ್ಟ್‌ ₹ 40 ಲಕ್ಷ ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿದೆ. ಅದೇ ರೀತಿ, ಸರ್ಕಾರದ ಅನುದಾನದ ನೆರವಿನಲ್ಲಿ ಯಾತ್ರಿ ನಿವಾಸದ ಮೂರನೇ ಮಹಡಿಯಲ್ಲಿ 40 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಹೊಸ ಮಹಾದ್ವಾರವನ್ನು ಸ್ಥಾಪಿಸಲಾಗಿದ್ದು, ನೂತನ ಬಸ್ ನಿಲ್ದಾಣವನ್ನೂ ಉದ್ಘಾಟಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಟ್ರಸ್ಟ್ ಉಪಾಧ್ಯಕ್ಷ ಸಂಜಯ ಬಸವರಾಜ ಕಿತ್ತೂರ ಮಾತನಾಡಿ, ‘ಉತ್ಸವದ ಅಂಗವಾಗಿ ಫೆ.9ರಂದು ಮಧ್ಯಾಹ್ನ 12ಕ್ಕೆ ‘ಚನ್ನಬಸವ ಪ್ರಸಾದ’ ಮತ್ತು ‘ಶಿವಶರಣ ಶರಣೆಯರ ಪ್ರಸಾದ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು. ಆ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸುರೇಶ ಅಂಗಡಿ ಭಾಗವಹಿಸುವರು. ಬಿ.ಜೆ.ಪಿ.ಯ ರಾಜ್ಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಯಡಿಯೂರಪ್ಪ, ಶಾಸಕರಾದ ಮಹಾಂತೇಶ ಕೌಜಲಗಿ ಮತ್ತು ಮಹಾಂತೇಶ ದೊಡಗೌಡ್ರು ಪಾಲ್ಗೊಳ್ಳುವರು’ ಎಂದು ಹೇಳಿದರು.

ಫೆ.11ರಂದು ಬಯಲು ಕುಸ್ತಿ ಪಂದ್ಯಾವಳಿ ಹಾಗೂ 12ರಂದು ಓಕುಳಿಯೊಂದಿಗೆಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದರು ತಿಳಿಸಿದರು.

‘ಅಗತ್ಯ ಸಂದರ್ಭದಲ್ಲಿ ಭಕ್ತರ ಆರೋಗ್ಯ ತಪಾಸಣೆಗೆಂದು ಮೂವರು ವೈದ್ಯರು ಇರಲಿದ್ದಾರೆ.ದೇವಸ್ಥಾನ ಟ್ರಸ್ಟ್‌ನಿಂದ ಮೂರು ಹೊತ್ತು ಪ್ರಸಾದ ವಿತರಣೆ ಮಾಡಲಾಗುವುದು. ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಸುಮಾರು 400 ಚಕ್ಕಡಿಗಳನ್ನು ರೈತರು ತರುವ ನಿರೀಕ್ಷೆಯಿದೆ. ಜಾನುವಾರಿನ ಸುರಕ್ಷತೆಗಾಗಿ ಜೊಯಿಡಾ ಮತ್ತು ದಾಂಡೇಲಿಯಿಂದ ಪಶು ವೈದ್ಯರ ಸಂಚಾರಿ ತಂಡವು ಸಂಚರಿಸಲಿದೆ’ ಎಂದು ಹೇಳಿದರು.

‘ಹಣ ಸಂಗ್ರಹಿಸುತ್ತಿಲ್ಲ’

‘ಉಳವಿ ದೇವಸ್ಥಾನ ಟ್ರಸ್ಟ್ ಭಕ್ತರಿಂದ ವಂತಿಗೆ, ಕಾಣಿಕೆ ಸಂಗ್ರಹಿಸಲು ಯಾರಿಗೂ ರಸೀದಿ ಪುಸ್ತಕಗಳನ್ನು ನೀಡಿಲ್ಲ. ಯಾರಾದರೂ ದೇವಸ್ಥಾನದ ಹೆಸರಿನಲ್ಲಿ ಹಣ ನೀಡುವಂತೆ ಕೇಳಿದರೆ ಭಕ್ತರು ಎಚ್ಚರಿಕೆ ವಹಿಸಬೇಕು’ ಎಂದು ಟ್ರಸ್ಟ್ ಅಧ್ಯಕ್ಷ ಗಂಗಾಧರ ಚೆನ್ನಪ್ಪ ಕಿತ್ತೂರ ಹೇಳಿದ್ದಾರೆ.

ಕಾರವಾರ ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ಉಳ್ವೇಕರ್, ದೇವಸ್ಥಾನದ ಪ್ರಧಾನ ಅರ್ಚಕ ಶಂಕರಯ್ಯ ಕಲ್ಮಠ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT