ಬುಧವಾರ, ಜನವರಿ 20, 2021
20 °C
ನಸುಕಿನಲ್ಲಿ ಕೃತ್ಯವೆಸಗಿದ ಅಪರಿಚಿತ ಪರಾರಿ

ಅಂಕೋಲಾ ಅವರ್ಸಾದಲ್ಲಿ ಗುಂಡಿನ ದಾಳಿ: ಬೆಚ್ಚಿದ ಮದುವೆ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ತಾಲ್ಲೂಕಿನ ಅವರ್ಸಾದಲ್ಲಿ ಶನಿವಾರ ಮುಂಜಾನೆ ಮದುವೆ ಸಮಾರಂಭದ ಸಿದ್ಧತೆಯಲ್ಲಿದ್ದ ಮನೆಯೊಂದರ ಮೇಲೆ  ಅಪರಿಚಿತನೊಬ್ಬ ಗುಂಡಿನ ದಾಳಿ ಮಾಡಿದ್ದಾನೆ. ಅದೃಷ್ಟವಶಾತ್ ಗುಂಡು ಮನೆಯ ಗೋಡೆಗೆ ತಗುಲಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ.

ಸ್ಥಳದಲ್ಲಿ ಎರಡು ಗುಂಡುಗಳ ಅವಶೇಷಗಳು ಸಿಕ್ಕಿದ್ದು, ಅವುಗಳನ್ನು ಪೊಲೀಸರು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಬಂದೂಕು ಅಥವಾ ಪಿಸ್ತೂಲಿನ ಮಾಹಿತಿ ತಿಳಿದುಬರಬೇಕಿದೆ.

ಅವರ್ಸಾ ಗ್ರಾಮದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ರಾಮನಗುಳಿಯ ಯುವತಿಯೊಬ್ಬರ ವಿವಾಹವು ಶನಿವಾರ ನಿಗದಿಯಾಗಿತ್ತು. ಅಲ್ಲಿಗೆ ತೆರಳಲು ಅವರು ಮತ್ತು ಕುಟುಂಬದವರು ಅವರ್ಸಾದ ತಮ್ಮ ಸಂಬಂಧಿಕರಾದ ರೂಪಾ ಸುನೀಲ್ ತಳೇಕರ್ ಎಂಬುವವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು.

ಮದುವೆ ಸಮಾರಂಭದ ಅಂತಿಮ ಸಿದ್ಧತೆಯಲ್ಲಿದ್ದ ಮನೆಯ ಬಳಿ ಮುಂಜಾನೆ 4.10ಕ್ಕೆ ಏಕಾಏಕಿ ಗುಂಡಿನ ಶಬ್ದ ಕೇಳಿ ಮನೆ ಮಂದಿ ಬೆಚ್ಚಿಬಿದ್ದರು. ಯಾರನ್ನೋ ಗುರಿಯಾಗಿಟ್ಟು ಬಂದೂಕಿನಿಂದ ಸಿಡಿಸಿದ ಗುಂಡುಗಳು ಗೋಡೆಗೆ ತಗುಲಿದ್ದವು. ಹಾಗಾಗಿ ಭಾರಿ ಅಪಾಯವೊಂದು ತಪ್ಪಿತು.

ಯುವತಿಯ ಕುಟುಂಬಕ್ಕೆ ಯಾರೂ ಶತ್ರುಗಳಿಲ್ಲ. ಆದರೆ, ಕೆಲವು ದಿನಗಳಿಂದ ತಾಲ್ಲೂಕಿನ ವಜ್ರಳ್ಳಿಯ, ಅಪರಾಧ ಹಿನ್ನೆಲೆಯಿರುವ ವ್ಯಕ್ತಿಯೊಬ್ಬ ಆಕೆಯನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ನಿರಾಕರಿಸಿದ ಕಾರಣ ಆತನೇ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

ಈ ಘಟನೆಯ ಕುರಿತು ವಧುವಿನ ಸಂಬಂಧಿ ಸಂದೀಪ ತಳೇಕರ ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂಕೋಲಾ ಠಾಣೆ ಇನ್‌ಸ್ಪೆಕ್ಟರ್ ಈ.ಸಿ.ಸಂಪತ್ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು