ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ವರ್ಷಗಳ ಪದವೀಧರರ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಸೂಚನೆ

Last Updated 11 ಆಗಸ್ಟ್ 2021, 15:27 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿರುವ ವಿವಿಧ ಔದ್ಯೋಗಿಕ ಅವಕಾಶಗಳು ಮತ್ತು ಅವುಗಳಿಗೆ ಅನುಗುಣವಾಗಿ ಸ್ಥಳೀಯ ಯುವಕರ ಕೌಶಲದ ಮಟ್ಟವನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ಕ್ರಮಗಳನ್ನು ಜಾರಿ ಮಾಡಲು ಜಿಲ್ಲಾಡಳಿತ ಮಹತ್ವದ ಹೆಜ್ಜೆಯಿಟ್ಟಿದೆ. ಈ ಸಂಬಂಧ ಜಿಲ್ಲಾ ಕೌಶಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ವಿವಿಧ ಅಧಿಕಾರಿಗಳ ಜೊತೆ ಒಂದು ಸುತ್ತಿನ ಸಭೆಯನ್ನೂ ನಡೆಸಿದ್ದಾರೆ.

ಜಿಲ್ಲೆಯಲ್ಲಿರುವ ಬೃಹತ್ ಯೋಜನೆಗಳಾದ ಕೈಗಾ ಅಣು ವಿದ್ಯುತ್ ಸ್ಥಾವರ, ಕೊಂಕಣ ರೈಲ್ವೆ, ಭಾರತೀಯ ನೌಕಾನೆಲೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಬೇಕು ಎಂಬ ಕೂಗು ಪದೇಪದೇ ಕೇಳಿಬರುತ್ತಿದೆ. ಆದರೆ, ಈ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಯುವಕರ ಕೌಶಲವೇನು, ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸ್ಪಷ್ಟವಾದ ಮಾಹಿತಿ ಲಭ್ಯವಿಲ್ಲ. ಇದನ್ನು ಅರಿತುಕೊಳ್ಳಲು, ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಪದವೀಧರರು ಎಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಯಾವ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸಿಕ್ಕಿವೆ ಎಂಬ ಸಂಗತಿಗಳನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು, ‘ಜಿಲ್ಲಾ ಕೌಶಲ ಅಭಿವೃದ್ಧಿ ಸಮಿತಿಯನ್ನು ಮತ್ತಷ್ಟು ಸಕ್ರಿಯಗೊಳಿಸುವುದು ಹಾಗೂ ಕೌಶಲಾಭಿವೃದ್ಧಿಗೆ ಸಂಬಂಧಿಸಿ ಒಂದಷ್ಟು ಗುರಿಗಳನ್ನು ಹೊಂದುವುದು ನಮ್ಮ ಉದ್ದೇಶವಾಗಿದೆ. ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಮಾರ್ಗೋಪಾಯಗಳನ್ನು ಚರ್ಚಿಸಲಾಗಿದೆ’ ಎಂದು ತಿಳಿಸಿದರು.

‘ಕೌಶಲ ಅಭಿವೃದ್ಧಿ ಸಮಿತಿಗೆ ಈಗಾಗಲೇ ಉಪ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಬರಲಿರುವ ಔದ್ಯೋಗಿಕ ಅವಕಾಶಗಳನ್ನು ಗುರಿಯಾಗಿಟ್ಟುಕೊಂಡು ತರಬೇತಿ, ಕಾರ್ಯಾಗಾರ ಮುಂತಾದವುಗಳನ್ನು ಯೋಜಿಸಲಾಗುವುದು. ಸ್ವ ಉದ್ಯೋಗ ಮತ್ತು ನೌಕರಿ, ಎರಡೂ ಕ್ಷೇತ್ರಗಳ ಬಗ್ಗೆ ಗಮನ ಹರಿಸಲಾಗುವುದು’ ಎಂದರು.

‘ಈ ನಿಟ್ಟಿನಲ್ಲಿ ಯುವಕರನ್ನು ಸಿದ್ಧಪಡಿಸಲು ಜಿಲ್ಲೆಯಲ್ಲಿ ಸದ್ಯಕ್ಕೆ ಲಭ್ಯವಿರುವ ಆಯ್ಕೆಗಳೇನು ಎಂಬ ಬಗ್ಗೆ ಅಧ್ಯಯನ ಮಾಡಲು ತಿಳಿಸಲಾಗಿದೆ. ಅಂತೆಯೇ ಯುವಕರು ಯಾವ ಕ್ಷೇತ್ರಗಳತ್ತ ಹೆಚ್ಚಿನ ಒಲವು ಹೊಂದಿದ್ದಾರೆ ಎಂದೂ ತಿಳಿದುಕೊಳ್ಳಲು ಸೂಚಿಸಲಾಗಿದೆ’ ಎಂದು ಹೇಳಿದರು.

ಜಿಲ್ಲೆಯಲ್ಲೇ ತರಬೇತಿಗೆ ಚಿಂತನೆ:

ಜಿಲ್ಲೆಯ ಬಹುತೇಕ ಯುವಕರು ತಮ್ಮ ಪದವಿ ವಿದ್ಯಾಭ್ಯಾಸದ ಬಳಿಕ ₹30 ಸಾವಿರ, ₹40 ಸಾವಿರ ಖರ್ಚು ಮಾಡಿ ಕಿರು ಅವಧಿಯ ತರಬೇತಿ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಾರೆ. ಬಳಿಕ ಗೋವಾ, ಬೆಂಗಳೂರು ಮುಂತಾದ ನಗರಗಳಲ್ಲಿ ಉದ್ಯೋಗ ಪಡೆಯುತ್ತಾರೆ. ಅವರಿಗೆ ಪೂರಕವಾದ ತರಬೇತಿಯನ್ನು ಉತ್ತರ ಕನ್ನಡದಲ್ಲೇ ಕೊಡಿಸುವ ಸಾಧ್ಯತೆಗಳನ್ನೂ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಲಾಗಿದೆ.

‘ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ, ವಿಮಾನ ನಿಲ್ದಾಣ ಸ್ಥಾಪನೆ, ಬಂದರು ಅಭಿವೃದ್ಧಿ, ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ಸ್ಥಾಪನೆಯಾಗುತ್ತಿದೆ. ಜೊತೆಗೆ, ಪ್ರವಾಸೋದ್ಯಮ ಕ್ಷೇತ್ರವೂ ಅಭಿವೃದ್ಧಿಯಾಗುತ್ತದೆ. ಇವುಗಳಿಗೆ ಪೂರಕವಾಗಿ ಅಗತ್ಯವಿರುವ ಕೌಶಲಗಳನ್ನು ಪಟ್ಟಿ ಮಾಡಲು ತಿಳಿಸಲಾಗಿದೆ. ಜಿಲ್ಲಾಡಳಿತದಿಂದ ಏನೆಲ್ಲ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂಬುದನ್ನು ಅಧ್ಯಯನ ಮಾಡಲು ಸೂಚಿಸಲಾಗಿದೆ’ ಎಂದೂ ಡಿ.ಸಿ. ಮುಲ್ಲೈ ಮುಗಿಲನ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT