ಗುರುವಾರ , ಮೇ 19, 2022
24 °C
ಉತ್ತರ ಕನ್ನಡದಲ್ಲಿ ಫಲಾನುಭವಿಗಳಿಗೆ ತೊಡಕಾದ ನಿಯಮ

‘ಮಾತೃಪೂರ್ಣ’: ಕಲಾಪದಲ್ಲಿ ಚರ್ಚೆಯಾದರೂ ಇಲ್ಲ ವಿನಾಯಿತಿ!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವ ‘ಮಾತೃಪೂರ್ಣ’ ಯೋಜನೆಗೆ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗುತ್ತಿಲ್ಲ. ಫಲಾನುಭವಿಗಳು ಆಹಾರ ಸೇವಿಸಲು ಅಂಗನವಾಡಿ ಕೇಂದ್ರಕ್ಕೇ ಬರಬೇಕು ಎಂಬ ನಿಯಮವು ಇದಕ್ಕೆ ತೊಡಕಾಗಿದೆ.

ಗುಡ್ಡಗಾಡು ಪ್ರದೇಶಗಳಿರುವ ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಪೌಷ್ಟಿಕ ಆಹಾರವನ್ನು ಫಲಾನುಭವಿಗಳ ಮನೆಗೇ ಪೂರೈಸುವ ‍ಪ್ರಸ್ತಾವವು ಈ ಹಿಂದೆ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಯೋಜನೆಯಲ್ಲಿರುವ ನಿಯಮಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ, ವಿಧಾನಸಭೆಯಲ್ಲಿ ಮಾರ್ಚ್ 25ರಂದು ನಡೆದ ಕಲಾಪದಲ್ಲಿ ಕೂಡ ಚರ್ಚೆಯಾಗಿತ್ತು. 

ಕಾಂಗ್ರೆಸ್ ಸದಸ್ಯ ಟಿ.ಡಿ. ರಾಜೇಗೌಡ ಸಭೆಯ ಗಮನ ಸೆಳೆದಿದ್ದರು. ಮಧ್ಯಾಹ್ನ ಊಟಕ್ಕಾಗಿ ಮನೆಯಿಂದ ಮೂರು, ನಾಲ್ಕು ಕಿಲೋಮೀಟರ್ ದೂರದ ಅಂಗನವಾಡಿಗೆ ಬರಬೇಕಾದ ಸ್ಥಿತಿಯ ಬಗ್ಗೆ ವಿವರಿಸಿದ್ದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ನಿಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಆಗ ಪ್ರತಿಕ್ರಿಯಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌, ಎರಡೂ ಜಿಲ್ಲೆಗಳಲ್ಲಿ ಪೌಷ್ಟಿಕ ಆಹಾರಗಳನ್ನು ಫಲಾನುಭವಿಗಳ ಮನೆಗಳಿಗೇ ಪೂರೈಸುವ ಪ್ರಸ್ತಾವವು ಸರ್ಕಾರದ ಮುಂದಿದೆ ಎಂದು ತಿಳಿಸಿದ್ದರು. ನಂತರ ಕೆಲವು ಕಡೆ ಪ್ರಾಯೋಗಿಕವಾಗಿ ಫಲಾನುಭವಿಗಳ ಮನೆಗಳಿಗೇ ಅಂಗನವಾಡಿಗಳಿಂದ ಆಹಾರ ಪೂರೈಸಲಾಯಿತು. ಆದರೆ, ಅದರ ಸಾಗಣೆ ವೆಚ್ಚವು ಆಹಾರ ತಯಾರಿಕಾ ವೆಚ್ಚಕ್ಕಿಂತ ಅಧಿಕವಾದ ಕಾರಣ ನಿಲ್ಲಿಸಲಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ.

‘ಫಲಾನುಭವಿಗಳ ಮನೆಗಳಿಗೆ ಆಹಾರ ಸಾಗಣೆಯ ವೆಚ್ಚವು ಅಧಿಕವಾದರೆ ಅದಕ್ಕೆ ಅನುದಾನ ಒದಗಿಸಬೇಕು. ಅದರ ಹೊರತು ಸಮಸ್ಯೆಯನ್ನು ಮುಂದುವರಿಸಬಾರದು. ಬಿರು ಬೇಸಿಗೆ ಬಂದರೂ ಸರ್ಕಾರವು ನಿಯಮ ಬದಲಿಸಿ ಆದೇಶಿಸಿಲ್ಲ. ಗರ್ಭಿಣಿಯರು, ಬಾಣಂತಿಯರು ಸುಡು ಬಿಸಿಲಿನಲ್ಲಿ ಹೋಗಲು ಸಾಧ್ಯವೇ? ಇದರಿಂದ ಜಿಲ್ಲೆಯ ಅನೇಕ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಯೋಜನೆಯ ಫಲ ಸಿಗುತ್ತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಫಲಾನುಭವಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಶೇ 68ರಷ್ಟು ಪ್ರಗತಿ:

‘ಮಾತೃಪೂರ್ಣ’ ಯೋಜನೆಯಡಿ ಉತ್ತರ ಕನ್ನಡದಲ್ಲಿ, ಈ ವರ್ಷ ಮಾರ್ಚ್ ಕೊನೆಯ ವೇಳೆಗೆ ಒಟ್ಟು 22,380 ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ನೀಡುವ ಗುರಿ ಹೊಂದಲಾಗಿತ್ತು. ಅದರಲ್ಲಿ 15,224 ಮಂದಿಗೆ ಯೋಜನೆಯ ಲಾಭ ತಲುಪಿದೆ. ಅವರ ಪೈಕಿ 2,631 ಅಂಗನವಾಡಿ ಕಾರ್ಯಕರ್ತೆಯರು ಮತ್ತು 2,458 ಅಂಗನವಾಡಿ ಸಹಾಯಕಿಯರು ಒಳಗೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಶೇ 68ರಷ್ಟು ಮಾತ್ರ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.

ಪ್ರತಿ ಫಲಾನುಭವಿಗೆ ದಿನವೊಂದಕ್ಕೆ ಒಟ್ಟು ₹ 21 ವೆಚ್ಚದಲ್ಲಿ ಪೌಷ್ಟಿಕ ಆಹಾರವನ್ನು ಪೂರೈಸಲಾಗುತ್ತದೆ. 150 ಗ್ರಾಂ ಅಕ್ಕಿ, 20 ಗ್ರಾಂ ಹಾಲು, ಒಂದು ಮೊಟ್ಟೆ, 40 ಗ್ರಾಂ ತರಕಾರಿ, 26 ಗ್ರಾಂ ತೊಗರಿಬೇಳೆ, 10 ಗ್ರಾಂ ಸಾಂಬಾರು ಮಸಾಲೆ, 10 ಗ್ರಾಂ ತಾಳೆ ಎಣ್ಣೆ, ಮೂರು ಗ್ರಾಂ ಉಪ್ಪು ಹಾಗೂ 10 ಗ್ರಾಂ ಶೇಂಗಾ ಬೀಜ ಆಹಾರದಲ್ಲಿ ಒಳಗೊಂಡಿರುತ್ತವೆ.

-----

* ಜಿಲ್ಲೆಯ ಭೌಗೋಳಿಕ ಸನ್ನಿವೇಶಗಳಿಗೆ ಅನುಗುಣವಾಗಿ ನಿಯಮದಲ್ಲಿ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಶೀಘ್ರವೇ ಆದೇಶ ಬರುವ ನಿರೀಕ್ಷೆಯಿದೆ.

- ಶ್ಯಾಮಲಾ ಸಿ.ಕೆ. ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು