ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕನ್ನಡ: ಅರಣ್ಯದಲ್ಲಿ ಹಣ್ಣಿನ ಗಿಡಗಳ ನಾಟಿ

ವನ್ಯಪ್ರಾಣಿಗಳ ಹಾವಳಿ ನಿಯಂತ್ರಿಸಲು ಹೊಸ ಪ್ರಯತ್ನ
Last Updated 20 ಜೂನ್ 2020, 13:00 IST
ಅಕ್ಷರ ಗಾತ್ರ

ಶಿರಸಿ: ರೈತರ ತೋಟದ ಪಟ್ಟಿ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡುವ ಮೂಲಕ ವನ್ಯಜೀವಿ ಹಾವಳಿಯಿಂದ ಕೃಷಿ ಬೆಳೆ ನಷ್ಟವಾಗುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಮುಂದಾಗಿದೆ. ಗ್ರಾಮ ಅರಣ್ಯ ಸಮಿತಿಗಳ ಮೂಲಕ ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ.

ಗ್ರಾಮ ಅರಣ್ಯ ಸಮಿತಿ ಹಾಗೂ ಅರಣ್ಯ ಇಲಾಖೆ ಜಂಟಿ ಆಶ್ರಯದಲ್ಲಿ ತಾಲ್ಲೂಕಿನ ಕಾಗೇರಿಯಲ್ಲಿ ಈ ಕಾರ್ಯಕ್ರಮಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಚಾಲನೆ ನೀಡಿದರು. ಕೆನರಾ ಅರಣ್ಯ ವೃತ್ತದಲ್ಲಿ ಈವರೆಗೆ ಸುಮಾರು ₹ 35 ಕೋಟಿ ಮೊತ್ತವನ್ನು ಗ್ರಾಮ ಅರಣ್ಯ ಸಮಿತಿಗಳಿಗೆ ನೀಡಲಾಗಿದೆ. ಪಾಲಿಸಿದರೆ ಪಾಲು ಯೋಜನೆಯಲ್ಲಿ ಸಿಗುವ ಈ ಲಾಭಾಂಶವು, ಗ್ರಾಮೀಣ ಅಭಿವೃದ್ಧಿಗೆ ಅನುಕೂಲವಾಗಿದೆ. ಅರಣ್ಯೀಕರಣವೂ ಇದರಿಂದ ಸಾಧ್ಯವಾಗುತ್ತದೆ ಎಂದು ಕಾಗೇರಿ ಹೇಳಿದರು.

ಕಾಗೇರಿ, ಬರಗಾರ, ಕಾನಮೂಲೆ ಗ್ರಾಮಗಳನ್ನೊಗೊಂಡು ರಚಿತವಾದ ಕಾಗೇರಿ ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು. ಸಮಿತಿ ಸದಸ್ಯರಿಗೆ ಉಚಿತವಾಗಿ ಗಿಡಗಳನ್ನು ವಿತರಿಸಲಾಯಿತು. ಸಮಿತಿಯ ಸದಸ್ಯರಲ್ಲಿ ಅನಾರೋಗ್ಯಕ್ಕೊಳಗಾದವರಿಗೆ ₹ 10ಸಾವಿರ, ಗೋಬರ್ ಗ್ಯಾಸ್ ಘಟಕ ಅನುಷ್ಠಾನಕ್ಕೆ ₹ 25ಸಾವಿರ, ಮೂರು ಗ್ರಾಮಗಳ ಕೃಷಿ ಸಂಘಗಳಿಗೆ ತಲಾ ₹ 99,500 ನೆರವು ನೀಡಲಾಯಿತು.

‘ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡಿದರೆ, ಆಹಾರ ಹುಡುಕಿಕೊಂಡು ತೋಟಕ್ಕೆ ಬರುವ ಮಂಗ, ಅಳಿಲು, ಇತರ ಪ್ರಾಣಿಗಳ ಹಾವಳಿ ಕಡಿಮೆಯಾಗಬಹುದು. ಪ್ರತಿ ಎಕರೆಯಲ್ಲಿ 15 ಜಾತಿಯ 100ರಷ್ಟು ಹಣ್ಣಿನ ಗಿಡಗಳನ್ನು ಬೆಳೆಸಲಾಗುತ್ತದೆ. ಇವುಗಳಲ್ಲಿ ಮುಖ್ಯವಾಗಿ ಪೇರಲೆ, ಮುರುಗಲು, ಮಾವು, ಸೀತಾಫಲ ಒಳಗೊಂಡಿವೆ’ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ತಾಲ್ಲೂಕು ಪಂಚಾಯ್ತಿ ಸದಸ್ಯ ನಾಗರಾಜ ಶೆಟ್ಟಿ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಪರಮೇಶ್ವರ ಹೆಗಡೆ, ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶಕುಮಾರ್, ಎಸಿಎಫ್ ರಘು, ಆರ್‌ಎಫ್‌ಒ ಅಮಿತ್ ಚೌವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT