ಮಂಗಳವಾರ, ಏಪ್ರಿಲ್ 20, 2021
25 °C
ಕೃತ್ಯದಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡವರಿಗೆ ಪೊಲೀಸರ ಎಚ್ಚರಿಕೆ

ಆರೋಪಿಗಳ ಪಾಸ್‌ಪೋರ್ಟ್‌ ರದ್ದಿಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶಗಳಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಜಿಲ್ಲಾ ಪೊಲೀಸರು, ಕಾನೂನು ಪ್ರಕ್ರಿಯೆಗಳನ್ನು ಪಾಲಿಸದಿದ್ದರೆ ಪಾಸ್‌ಪೋರ್ಟ್ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಪರಾಧ ಪ್ರಕರಣಗಳನ್ನು ಎಸಗಿದ ಬಳಿಕ ಆರೋಪಿಗಳು ವಿದೇಶಗಳಿಗೆ ಪರಾರಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಪೊಲೀಸರು ಮುಂದಡಿಯಿಟ್ಟಿದ್ದಾರೆ. ಈ ರೀತಿಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಪೊಲೀಸರು ಅಭಿಯಾನವನ್ನೇ ಹಮ್ಮಿಕೊಂಡಿದ್ದಾರೆ. ಇದರ ಪರಿಣಾಮವಾಗಿ ವಿದೇಶದಲ್ಲಿದ್ದ ಭಟ್ಕಳದ ಇಬ್ಬರು ಸೇರಿದಂತೆ 40ಕ್ಕೂ ಹೆಚ್ಚು ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಈ ರೀತಿ ತಲೆ ಮರೆಸಿಕೊಂಡಿರುವ ಆರೋಪಿಗಳು ತಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆ ಎದುರಿಸಬೇಕು ಎಂದು ಪೊಲೀಸರು ತಾಕೀತು ಮಾಡಿದ್ದಾರೆ.

ಭಟ್ಕಳದ ಬಂದರು ರಸ್ತೆಯ ನಿವಾಸಿ, ಅಮೆರಿಕ ಪೌರತ್ವ ಪಡೆದು ಅಲ್ಲೇ ನೆಲೆಸಿದ್ದ ಇರ್ಷಾದ್ ಅಹಮ್ಮದ್ ಖಾಜಿಯಾ (51) ಎಂಬಾತನನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿದೆ. ಆತನ ವಿರುದ್ಧ ಮೂರು ಪ್ರಕರಣಗಳಿದ್ದು, ವಾರಂಟ್ ಕೂಡ ಜಾರಿಯಾಗಿತ್ತು. 10 ವರ್ಷಗಳಿಂದ ಅಲ್ಲಿದ್ದರೂ ಪೊಲೀಸರು ಆತನ ಚಲನವಲನದ ಮೇಲೆ ನಿಗಾ ಇಟ್ಟಿದ್ದರು. ಇದರ ಪರಿಣಾಮವಾಗಿ ಆತನ ಫೇಸ್‌ಬುಕ್ ಪೋಸ್ಟ್‌ಗಳನ್ನು ಗಮನಿಸಿ ಕಾರ್ಯಾಚರಣೆ ಮಾಡಿದರು. ಮಾರ್ಚ್ 9ರಂದು ಪುನಃ ಅಮೆರಿಕಕ್ಕೆ ಪ್ರಯಾಣಿಸುವ ಸಿದ್ಧತೆಯಲ್ಲಿದ್ದ ಆತನಿಗೆ ಮಾರ್ಚ್ 8ರಂದು ಕೋಳ ತೊಡಿಸಿದ್ದರು.

ಭಟ್ಕಳ ಮದೀನ ಕಾಲೊನಿಯ ಮೊಹಮ್ಮದ್ ಮೀರಾ ಕೋಲಾ (61) ವಿರುದ್ಧ 1995– 96ರಲ್ಲಿ ಕೌಟುಂಬಿಕ ಕಲಹ ಸಂಬಂಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತ 25 ವರ್ಷಗಳಿಂದಲೂ ದುಬೈನಲ್ಲಿದ್ದ. ಇತ್ತೀಚೆಗೆ ಭಟ್ಕಳಕ್ಕೆ ಬಂದಿದ್ದ ಆರೋಪಿಯನ್ನು ಮಾರ್ಚ್ 9ರಂದು ಪೊಲೀಸರು ಬಂಧಿಸಿದ್ದರು.

ಎಲ್ಲಿದ್ದರೂ ಬರಬೇಕು

‘ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಹೊರ ದೇಶ ಅಥವಾ ಹೊರರಾಜ್ಯಗಳಿಗೆ ಹೋಗಿರುವ ಆರೋಪಿಗಳು ಪ್ರಕರಣದ ವಿಚಾರಣೆ ಇದ್ದಾಗ ಸಂಬಂಧಿಸಿದ ಪೊಲೀಸ್‌ ಠಾಣೆಗೆ ಹಾಜರಾಗಬೇಕು. ತಮ್ಮ ವಿರುದ್ಧ ಪ್ರಕರಣದ ವಿಚಾರಣೆಯಲ್ಲಿ ಪಾಲ್ಗೊಳ್ಳಬೇಕು. ಇಲ್ಲದಿದ್ದರೆ ಅವರ ಪಾಸ್‍ಪೋರ್ಟ್ ರದ್ದು ಮಾಡಲು ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾ ‍‍ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಎಚ್ಚರಿಕೆ ನೀಡಿದ್ದಾರೆ.

ತಂತ್ರಜ್ಞಾನ ಅಭಿವೃದ್ಧಿ

ಹಳೆಯ ಅಪರಾಧ ಪ್ರಕರಣಗಳ ವಿಚಾರಣೆ ತಪ್ಪಿ ಹೋಗದಂತೆ ನೋಡಿಕೊಳ್ಳಲು ಜಿಲ್ಲಾ ‍ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಂತ್ರಾಂಶವೊಂದನ್ನು ಇಲಾಖೆಯ ಬಳಕೆಗೆ ಅಭಿವೃದ್ಧಿ ಮಾಡಿಸಿದ್ದಾರೆ.

ಪ್ರತಿ ಪೊಲೀಸ್ ಠಾಣೆಯ ಬೀಟ್‌ವಾರು ಅಪರಾಧ ಪ್ರಕರಣಗಳನ್ನು ಅದರಲ್ಲಿ ನಮೂದಿಸಲಾಗುತ್ತದೆ. ಆ ಪ್ರಕರಣಗಳ ತನಿಖೆಯ ಪ್ರಗತಿಯ ಮಾಹಿತಿಯೂ ಅದರಲ್ಲಿ ಲಭಿಸುತ್ತದೆ. ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆಯಾದರೂ ಪ್ರಕರಣದ ಸಮಗ್ರ ಮಾಹಿತಿ ಅಲ್ಲಿರುವ ಕಾರಣ ತನಿಖೆ ಮುಂದುವರಿಯಲು ಸಾಧ್ಯವಾಗುತ್ತದೆ. ಈ ರೀತಿ ನಾಲ್ಕು ತಿಂಗಳ ಅವಧಿಯಲ್ಲಿ ಹಳೆಯ 36 ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ.

ಈ ತಂತ್ರಾಂಶಕ್ಕೆ ರಾಜ್ಯ ‍ಪೊಲೀಸ್ ಮಹಾನಿರ್ದೇಶಕರು ಮೆಚ್ಚುಗೆ ಸೂಚಿಸಿದ್ದು, ರಾಜ್ಯದೆಲ್ಲೆಡೆ ಬಳಕೆ ಮಾಡಲು ಆಸಕ್ತಿ ತೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.