ಭಾನುವಾರ, ಸೆಪ್ಟೆಂಬರ್ 15, 2019
26 °C
ಗಂಗಾವಳಿ ನದಿಯಲ್ಲಿ ಕಂಡುಕೇಳರಿಯದ ಭೀಕರ ಪ್ರವಾಹ ಉಂಟಾಗಿ ಒಂದು ತಿಂಗಳು

ಡೊಂಗ್ರಿ ಗ್ರಾ.ಪಂ. ಕಚೇರಿ ಸ್ಥಳಾಂತರಕ್ಕೆ ನಿರ್ಣಯ

Published:
Updated:
Prajavani

ಕಾರವಾರ: ಗಂಗಾವಳಿ ನದಿಯ ಪ್ರವಾಹದಿಂದ ತತ್ತರಿಸಿದ ಡೊಂಗ್ರಿ ಗ್ರಾಮ ಪಂಚಾಯ್ತಿ ಕಟ್ಟಡವನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲು ಗ್ರಾಮ ಪಂಚಾಯ್ತಿ ನಿರ್ಣಯ ಅಂಗೀಕರಿಸಿದೆ. ಕಲ್ಲೇಶ್ವರದಲ್ಲಿರುವ ಎತ್ತರದ ಪ್ರದೇಶದಲ್ಲಿ ಹೊಸ ಕಟ್ಟಡ ನಿರ್ಮಾಣ ಕುರಿತು ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಲಾಗಿದೆ. 

ಕಚೇರಿಯಲ್ಲಿದ್ದ ಶೇ 90ರಷ್ಟು ಕಾಗದಪತ್ರಗಳು ಐದು ದಿನ ನಿಂತಿದ್ದ ಪ್ರವಾಹದ ನೀರಿನಲ್ಲಿ ಸಂಪೂರ್ಣ ನಾಶವಾಗಿವೆ. ಅವುಗಳಲ್ಲಿ ಶೇ 75ರಷ್ಟು ಕಂಪ್ಯೂಟರ್‌ ಸರ್ವರ್‌ಗಳಿಂದ ಪಡೆದುಕೊಳ್ಳಬಹುದು. ಆದರೆ, ಉಳಿದ ಶೇ 25ರಷ್ಟು ಶಾಶ್ವತವಾಗಿ ಹಾಳಾಗಿವೆ. ಮುಂದೊಂದು ದಿನ ಇದೇ ರೀತಿಯ ಸನ್ನಿವೇಶ ಎದುರಾಗಬಾರದು ಎಂಬ ಕಾರಣಕ್ಕೆ ಕಚೇರಿಯನ್ನು ಸ್ಥಳಾಂತರಿಸಲು  ನಿರ್ಧರಿಸಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋಪಾಲಕೃಷ್ಭ ವೈದ್ಯ, ‘ನೆರೆಯಿಂದ ಗ್ರಾಮ ಪಂಚಾಯ್ತಿ ಕಟ್ಟಡಕ್ಕೆ ಅಷ್ಟೊಂದು ಹಾನಿಯಾಗಿಲ್ಲ. ಆದರೆ, ದಾಖಲೆಗಳು ಮತ್ತೊಮ್ಮೆ ಹಾಳಾಗಬಾರದು. ಸುಮಾರು 10 ಅಡಿ ಎತ್ತರದ ಮಹಡಿಯಲ್ಲಿ ಕಚೇರಿ ಮತ್ತು ಕಾಗದಪತ್ರಗಳನ್ನು ಇಡುವಂತೆ, ಕೆಳ ಅಂತಸ್ತಿನಲ್ಲಿ ವಾಹನ ನಿಲುಗಡೆ, ಗ್ರಾಮ ಸಭೆಗಳನ್ನು ನಡೆಸುವ ರೀತಿಯಲ್ಲಿ ಕಟ್ಟಡ ವಿನ್ಯಾಸ ಮಾಡಬೇಕು ಎಂದು ಸಭೆಯಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು’ ಎಂದು ತಿಳಿಸಿದರು.

‘ಈ ಬಾರಿ ಆಗಿರುವ ಸಮಸ್ಯೆಯಿಂದ ನಾವು ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳದಿದ್ದರೆ ನಮ್ಮನ್ನು ಮುಂದಿನ ಪೀಳಿಗೆ ಕ್ಷಮಿಸಲಿಕ್ಕಿಲ್ಲ. ಹೊಸ ಕಟ್ಟಡ ನಿರ್ಮಿಸುವುದಾದರೆ ಜಿಲ್ಲಾ ಪಂಚಾಯ್ತಿಯಿಂದಲೂ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ’ ಎಂದರು. 

ಗ್ರಾಮದಲ್ಲಿ ನೆರೆಯಿಂದ ಆಗಿರುವ ಹಾನಿಯ ಬಗ್ಗೆ ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆಯಿಂದ ಸಮೀಕ್ಷೆ ಮಾಡಿದ್ದಾರೆ. ಆದರೆ, ನಂತರ ಕೆಲವು ಮನೆಗಳು ಕುಸಿದ ಪ್ರಕರಣಗಳು ವರದಿಯಾದವು. ಇದೇರೀತಿ, ಕೆಲವು ಗ್ರಾಮಸ್ಥರ ಜಾನುವಾರು ಕಾಣೆಯಾಗಿರುವುದೂ ಆಮೇಲೆ ಅರಿವಿಗೆ ಬಂತು. ಹಾಗಾಗಿ ಸಮೀಕ್ಷೆಯ ಪಟ್ಟಿಯಲ್ಲಿ ಎಲ್ಲರ ಹೆಸರನ್ನೂ ಸೇರಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲೂ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ರಾಮನಗುಳಿ, ಕಲ್ಲೇಶ್ವರದಲ್ಲಿ ತೂಗುಸೇತುವೆ ಕೊಚ್ಚಿ ಹೋಗಿದೆ. ಅಲ್ಲಿಗೆ ತಾತ್ಕಾಲಿಕವಾಗಿ ದೋಣಿ ವ್ಯವಸ್ಥೆ ಕಲ್ಪಿಸುವುದೇ ಅಥವಾ ಸಣ್ಣ ಬಾರ್ಜ್‌ ನೀಡುವಂತೆ ಮನವಿ ಸಲ್ಲಿಸುವುದೇ ಎಂಬ ಬಗ್ಗೆಯೂ ಗ್ರಾಮಸ್ಥರ ಅನಿಸಿಕೆ ಪಡೆಯಲು ನಿರ್ಧರಿಸಲಾಯಿತು.

‘20 ವರ್ಷಗಳಾದರೂ ಪಹಣಿಯಾಗಿಲ್ಲ’: ‘ಕೊಡಸಳ್ಳಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನಿರಾಶ್ರಿತರಾದವರಿಗೆ ಡೊಂಗ್ರಿ ಭಾಗದಲ್ಲಿ ಪುನರ್ವಸತಿ ಮಾಡುವಾಗ ಅರಣ್ಯ ಇಲಾಖೆಯಿಂದ ಹೊರಗಿಟ್ಟ ಜಾಗವಿದೆ. ಆದರೆ, 20 ವರ್ಷಗಳೇ ಕಳೆದರೂ ಅದನ್ನು ಗ್ರಾಮ ಪಂಚಾಯ್ತಿಗಾಗಲೀ ಸರ್ಕಾರಕ್ಕಾಗಲೀ ಪಹಣಿ ಮಾಡಿಲ್ಲ. ಇದರಿಂದ ಅಲ್ಲಿ ಯಾವುದೇ ಕಟ್ಟಡ ಕಟ್ಟಬೇಕಿದ್ದರೂ ಕರ್ನಾಟಕ ವಿದ್ಯುಚ್ಛಕ್ತಿ ನಿಗಮದಿಂದ (ಕೆಪಿಸಿ) ಅನುಮತಿ ಪಡೆದೇ ಆಗಬೇಕು’ ಎಂದು ಗೋಪಾಲಕೃಷ್ಣ ವೈದ್ಯ ಬೇಸರಿಸಿದರು.

‘ಈ ಬಗ್ಗೆ ಕೆಪಿಸಿಯವರನ್ನು ಕೇಳಿದರೆ, ಎಲ್ಲ ದಾಖಲೆಗಳನ್ನೂ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಮುಂದೇನಾಯಿತು ಎಂದು ತಿಳಿಯುತ್ತಿಲ್ಲ. ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು’ ಎಂದು ಒತ್ತಾಯಿಸಿದರು. 

Post Comments (+)