ಮಂಗಳವಾರ, ಸೆಪ್ಟೆಂಬರ್ 21, 2021
21 °C
ಕಳಚೆ, ತಳಕೆಬೈಲ್, ಕೊಡ್ಲಗದ್ದೆ, ಅರಬೈಲ್ ಸೇರಿದಂತೆ ಸುತ್ತಮುತ್ತ ವದಂತಿಗಳ ಸಾಲು

ಧರೆ ಕುಸಿದಾಗ... ದುರಂತಕ್ಕೆ ಕಾರಣ ಅರಿಯುವ ಕಾತರ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಭೂ ಕುಸಿತದಿಂದ ಇನ್ನಿಲ್ಲದಂತೆ ಹಾನಿಗೀಡಾಗಿರುವ ಕಳಚೆಯಲ್ಲಿ ಜನರ ವಾಸ್ತವ್ಯ ನಿನ್ನೆ ಮೊನ್ನೆಯದ್ದಲ್ಲ. ಶತಮಾನಗಳ ಕಾಲದಿಂದ ಅಲ್ಲಿ ಮನೆಗಳಿವೆ, ಕೃಷಿ ಇದೆ. ಇಷ್ಟು ವರ್ಷದಲ್ಲಿ ಆಗದಿರುವ ದುರಂತ, ಈ ವರ್ಷ ಯಾಕಾಯಿತು ಎಂಬುದೇ ಗ್ರಾಮಸ್ಥರೆಲ್ಲ ಪ್ರಶ್ನೆಯಾಗಿದೆ.

ಕಳಚೆಯಲ್ಲಿ ಅತಿ ಹೆಚ್ಚು ಹಾನಿಯಾಗಿದ್ದರೆ, ಅದರ ಸುತ್ತಮುತ್ತಲಿನ ತಳಕೆಬೈಲ್, ಕೊಡ್ಲಗದ್ದೆ, ಅರಬೈಲ್, ಹೆಗ್ಗಾರ, ಕೋಮಾರಕುಂಬ್ರಿ, ದಬ್ಬೇಸಾಲ್, ಡಬ್ಗುಳಿ, ತಾರಗಾರ, ಬೀಗಾರ್, ಬಾಗಿನಕಟ್ಟ ಹೀಗೆ ಹತ್ತಾರು ಮಜಿರೆಗಳಲ್ಲೂ ಭಾರಿ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದಿದೆ. ಜನ, ಜಾನುವಾರು, ಕೃಷಿ, ಅರಣ್ಯದ ಮೇಲೆ ಪರಿಣಾಮ ಬೀರಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪರಿಸರ ಬರಹಗಾರ ಶಿವಾನಂದ ಕಳವೆ ಅವರು ಹೇಳುವಂತೆ, ‘ಬೆಟ್ಟದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿದ್ದರಿಂದ ಹೀಗಾಯಿತು ಎಂದೂ ಹೇಳುತ್ತಾರೆ. ಗುಡ್ಡದ ಮೇಲಿನಿಂದ ಬರುವ ಅಸುರ ಜಲ (ಮಣ್ಣಿನ ಮೇಲಿನಿಂದ ನೈಸರ್ಗಿಕವಾಗಿ ಹರಿದು ಬರುವ ನೀರು) ಇಲ್ಲಿನವರ ಜೀವನ ಮೂಲ’ ಎಂದು ವಿವರಿಸುತ್ತಾರೆ.

‘ಬೆಟ್ಟದ ಮೇಲಿನಿಂದ ನೀರು ಸಣ್ಣ ಝರಿಗಳಲ್ಲಿ ಹರಿದು ಬರುತ್ತದೆ. ಅವುಗಳಿಗಾಗಿ ಸಣ್ಣ ಹೊಂಡಗಳನ್ನು ನಿರ್ಮಿಸಲಾಗಿದೆ. ಅದರಿಂದ ನೀರು ತೋಟಗಳಲ್ಲಿ ಇಂಗುತ್ತದೆ. ಮೇಲಿನ ಹೊಂಡದ ನೀರು, ಅದರ ಕೆಳಗಿನ ಹೊಂಡಕ್ಕೆ ಸಂಪರ್ಕ ಹೊಂದಿದೆ. ಈ ರೀತಿ ಹಂತ ಹಂತವಾಗಿ ಹರಿಯುವ ನೀರು, 10–12 ಕಿಲೋಮೀಟರ್ ದೂರದಲ್ಲಿ ಬೆಟ್ಟದ ಕೆಳಭಾಗದಲ್ಲಿರುವ ಕಾಳಿ ನದಿಯನ್ನು ಸೇರಲು ಹೆಚ್ಚು ಕಡಿಮೆ ಒಂದು ವರ್ಷ ತೆಗೆದುಕೊಳ್ಳುತ್ತದೆ’ ಎಂದು ವಿವರಿಸುತ್ತಾರೆ.

‘ಮೇಲ್ನೋಟಕ್ಕೆ ಗಮನಿಸಿದ ಪ್ರಕಾರ ಕೆರೆತೋಟ, ಮೂಲೆತೋಟದಲ್ಲೇ ಸುಮಾರು 120 ಎಕರೆ ಪ್ರದೇಶದಲ್ಲಿ ಬೀಳುವಷ್ಟು ಮಳೆ ಜುಲೈ 22, 23ರಂದು ಬಿದ್ದಿದೆ. ಇದರ ಪರಿಣಾಮವೇ ಇಲ್ಲಿ ರಸ್ತೆಯಲ್ಲಿ ಕಂದಕ ಏರ್ಪಟ್ಟಿರುವುದು. ಶುದ್ಧ ನೀರು ತೆಳುವಾಗಿರುವ ಕಾರಣ ವೇಗವಾಗಿ ಹರಿಯುತ್ತದೆ. ಆಗಲೇ ಒರತೆಯಿದ್ದ ಕಾರಣ, ನೀರಿಗೆ ಮತ್ತಷ್ಟು ವೇಗ ಸಿಕ್ಕಿ ತನ್ನ ಹರಿವಿನ ದಿಕ್ಕನ್ನು ಬದಲಿಸಿ ಕಣಿವೆಯಂತಿದ್ದ ರಸ್ತೆಯಲ್ಲಿ ಸಾಗಿತು. ಮಾನಿಕುಂಬ್ರಿ ಬಳಿ ಬೆಟ್ಟ ದುರ್ಬಲವಾಗಿತ್ತು. ವೇಗವಾಗಿ ಬಂದ ನೀರಿನ ಹೊಡೆತಕ್ಕೆ ಇಡೀ ಬೆಟ್ಟವೇ ಅಲುಗಾಡಿ ಬಿರುಕು ಬಿಟ್ಟಿರಬಹುದು’ ಎಂದು ಅವರು ವಿಶ್ಲೇಷಿಸುತ್ತಾರೆ.

ಗಣಿಗಾರಿಕೆಯಿಂದಲೂ ಪ್ರಭಾವ?:

ಕಳಚೆ ಹಾಗೂ ಸುತ್ತಮುತ್ತಲಿನ ಹಲವು ಪ್ರದೇಶಗಳು ಮ್ಯಾಂಗನೀಸ್ ಗಣಿಗಾರಿಕೆಯ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಕ್ಕೆ ಈ ಹಿಂದೆ ಒಳಗಾಗಿದ್ದವು. ಗಣಿಗಾರಿಕೆ ನಡೆಸಿದ್ದ ಕಂಪನಿಗಳು ಭಾರಿ ಪ್ರಮಾಣದಲ್ಲಿ ಕಂದಕ ತೋಡಿ ಅದಿರಿನ ನಿಕ್ಷೇಪವನ್ನು ಸಾಗಿಸಿದ್ದವು. ಇದರ ವಿರುದ್ಧ 1995ರಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಬಳಿಕ, ಸುಪ್ರೀಂಕೋರ್ಟ್ ಆದೇಶದಂತೆ 1997ರಲ್ಲಿ ಗಣಿಗಾರಿಕೆ ಸಂಪೂರ್ಣ ಸ್ಥಗಿತವಾಯಿತು ಎಂದು ಸ್ಥಳೀಯ ನಿವಾಸಿ ದತ್ತಾತ್ರೇಯ ಭಟ್ ಕಣ್ಣೀಪಾಲ ನೆನಪಿಸಿಕೊಳ್ಳುತ್ತಾರೆ.

ಆಗ ಯಂತ್ರಗಳನ್ನು ಬಳಸಿ ನಿರ್ಮಿಸಲಾಗಿದ್ದ ಬೃಹತ್ ಕುಳಿಗಳನ್ನು ಮತ್ತೆಲ್ಲಿಂದಲೋ ತಂದ ಮಣ್ಣನ್ನು ಹಾಕಿ ಭರ್ತಿ ಮಾಡಲಾಯಿತು. ಅರಣ್ಯ ಇಲಾಖೆಯವರು ಅದರ ಮೇಲೆ ಗಿಡಗಳನ್ನೂ ಬೆಳೆಸಿದರು. ಆದರೆ, ಮಣ್ಣು ನೈಸರ್ಗಿಕವಾಗಿ ಪಡೆದ ಹಿಡಿತವು ಮತ್ತೆ ಮರಳುವುದು ಕಷ್ಟ. ಇದರಿಂದಾಗಿ ನೀರು ಸದಾ ಇಂಗುತ್ತ ಮಣ್ಣು ಸಡಿಲವಾಗಿರಬಹುದು ಎಂಬುದು ಕೆಲವು ಗ್ರಾಮಸ್ಥರ ವಾದವಾಗಿದೆ.

ಇದರೊಂದಿಗೇ ಜುಲೈ 22ರಂದು ರಾತ್ರಿ ಮೇಘಸ್ಫೋಟವಾದ ಪರಿಣಾಮ ಭೂಮಿ ಅದುರಿತ್ತು. ಮಣ್ಣು ಸಡಿಲವಾಗಿದ್ದ ಕಡೆಯಲ್ಲೆಲ್ಲ ಕುಸಿದು ಬಿತ್ತು ಎಂಬ ವಾದವೂ ಇದೆ. ಭೂ ಕುಸಿತಕ್ಕೆ ನಿಖರವಾದ ಕಾರಣವನ್ನು ಅರಿಯಲು ಭೂ ವಿಜ್ಞಾನಿಗಳ ತಂಡವನ್ನು ಕಳುಹಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆ ತಂಡದ ಅಧ್ಯಯನದ ಮೇಲೆ ಈಗ ಎಲ್ಲರ ಗಮನವಿದೆ.

––––

* ಮ್ಯಾಂಗನೀಸ್ ಗಣಿಗಾರಿಕೆ, ಬುಲ್ಡೋಜರ್‌ಗಳಂಥ ಬೃಹತ್ ಯಂತ್ರಗಳ ಅತಿಯಾದ ಬಳಕೆ, ಅರಣ್ಯ ಇಲಾಖೆಯ ಅವೈಜ್ಞಾನಿಕ ಕ್ರಮಗಳೂ ಭೂಕುಸಿತಕ್ಕೆ ಕಾರಣವಾಗಿವೆ.

– ವೆಂಕಟ್ರಮಣ ಭಟ್, ವಜ್ರಳ್ಳಿ ನಿವಾಸಿ.

* ಕಳಚೆ ಹಾಗೂ ಸುತ್ತಮುತ್ತ ಇರುವ ಬೆಟ್ಟಗಳ ಮೇಲೆ ಎಲ್ಲೂ ಮಾನವ ನಿರ್ಮಿತ ಪ್ರಮಾದಗಳು ಭಾರಿ ಭೂ ಕುಸಿತಕ್ಕೆ ಕಾರಣವಾಗಿರಬಹುದು ಎಂದು ಕಾಣಲಿಲ್ಲ.

– ಶಿವಾನಂದ ಕಳವೆ, ಪರಿಸರ ಬರಹಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು