ಶುಕ್ರವಾರ, ಡಿಸೆಂಬರ್ 6, 2019
21 °C
ಕಾಂಗ್ರೆಸ್ ಮುಖಂಡ ವಿನಯಕುಮಾರ್ ಸೊರಕೆ ಅಭಿಮತ

ಮೌಲ್ಯ–ಅಮೌಲ್ಯದ ಹೋರಾಟ ಈ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಲ್ಲಾಪುರ ಕ್ಷೇತ್ರಕ್ಕೆ ನೂರಾರು ಕೋಟಿ ರೂಪಾಯಿ ಅನುದಾನ ನೀಡಿದ್ದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗುಣಗಾನ ಮಾಡಿಕೊಂಡು ತಿರುಗುತ್ತಿದ್ದ ಶಿವರಾಮ ಹೆಬ್ಬಾರ್, ಈಗ ಬಣ್ಣ ಬದಲಿಸಿ ಅವರನ್ನು ತೆಗಳುತ್ತಿರುವುದನ್ನು ಜನರು ಗಮನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ವಿನಯಕುಮಾರ್ ಸೊರಕೆ ಟೀಕಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅತಿವೃಷ್ಟಿಯಿಂದ ಪ್ರವಾಹ ಪರಿಸ್ಥಿತಿ ಎದುರಾದಾಗ ಮುಂಬೈ ಐಷಾರಾಮಿ ಹೋಟೆಲ್‌ನಲ್ಲಿ ಉಳಿದವರ ಸರಿ–ತಪ್ಪು ನಿಲುವಿನ ಬಗ್ಗೆ ತೀರ್ಮಾನಿಸುವ ಶಕ್ತಿ ಜನರಿಗಿದೆ. ಈ ಉಪಚುನಾವಣೆಯು ಮೌಲ್ಯ ಮತ್ತು ಅಮೌಲ್ಯ, ಸಜ್ಜನರು–ದುರ್ಜನರು, ಅರ್ಹರು–ಅನರ್ಹರ ನಡುವಿನ ಹೋರಾಟವಾಗಿದೆ. ಇಲ್ಲಿ ಸತ್ಯಕ್ಕೆ ಬೆಲೆ ಸಿಗುವ ವಿಶ್ವಾಸವಿದೆ’ ಎಂದರು.

ಶ್ರೀಪಾದ ಹೆಗಡೆ ಕಡವೆ, ರಾಮಕೃಷ್ಣ ಹೆಗಡೆ, ದಿನಕರ ದೇಸಾಯಿ, ಹರ್ಡೀಕರ್ ಮಂಜಪ್ಪರಂತಹ ಆದರ್ಶ ವ್ಯಕ್ತಿಗಳನ್ನು ಹೊಂದಿದ ಇತಿಹಾಸವಿರುವ ಜಿಲ್ಲೆಯಲ್ಲಿ ಉಪಚುನಾವಣೆಗೆ ಕಾರಣರಾದವರು ಹೆಬ್ಬಾರ್. ಸುಪ್ರೀಂ ಕೋರ್ಟ್ ಅನರ್ಹರು ಎಂದಿರುವ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದೆ. ಜನರೇ ಅವರನ್ನು ದುರ್ಜನರ ಪಟ್ಟಿಗೆ ಸೇರಿಸಿದ್ದಾರೆ. ಅನರ್ಹರು ಗೆಲ್ಲಬೇಕೇ ಅಥವಾ ಅರ್ಹರು ಗೆಲ್ಲಬೇಕೇ ಎಂಬುದನ್ನು ಜನರು ತೀರ್ಮಾನಿಸಬೇಕು ಎಂದು ಮಾರ್ಮಿಕವಾಗಿ ಹೇಳಿದರು. ಶಾಸಕರನ್ನು ಅನರ್ಹ ಮಾಡಿರುವ ಮಾಜಿ ಸ್ಪೀಕರ್ ರಮೇಶಕುಮಾರ್ ಕೂಡ ಪ್ರಚಾರದಲ್ಲಿ ಪಾಲ್ಗೊಳ್ಳುವರು ಎಂದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಯಲ್ಲಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಹೆಸರು ಬಳಸಿ ಅಪಪ್ರಚಾರ ಮಾಡಿರಬಹುದು. ಅವರು ರಾಹುಲ್ ಹೆಸರು ಮಾತ್ರವಲ್ಲ, ಮಹಾತ್ಮ ಗಾಂಧಿ ಹೆಸರು ಹೇಳಬಹುದು. ಗೋಡ್ಸೆಯನ್ನು ಮಹಾತ್ಮ ಎಂದು ಹೊಗಳಿ, ಮಹಾತ್ಮ ಗಾಂಧಿಯನ್ನು ತೆಗಳಿದವರು ಅವರು. ಅಂಥ ವ್ಯಕ್ತಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಿದೆ. ಅವರ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದಿಂದ ಬಂದಿರುವ ಕಾಮಗಾರಿಯನ್ನು 10 ವರ್ಷ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅಭಿವೃದ್ಧಿಯ ಯೋಚನೆ ಬಿಟ್ಟು, ಭಾವನಾತ್ಮಕ ವಿಚಾರ ಹೇಳಿಕೊಂಡು ಬಿಜೆಪಿ ಜನರನ್ನು ಮರುಳು ಮಾಡುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಕಾಂಗ್ರೆಸ್ ಪ್ರಮುಖರಾದ ಪಿ.ವಿ.ಮೋಹನ, ಅಬ್ದುಲ್ ಮಜೀದ್, ಜಿ.ಎನ್.ಹೆಗಡೆ, ಬಸವರಾಜ ದೊಡ್ಮನಿ, ಎಸ್.ಕೆ.ಭಾಗವತ, ಜಗದೀಶ ಗೌಡ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು