ಮತ ಮಾರಿದರೆ ಪ್ರಶ್ನಿಸುವ ನೈತಿಕ ಹಕ್ಕಿಲ್ಲ

7
ಅಭ್ಯರ್ಥಿಗಳಿಂದ ದುಡ್ಡು ಪಡೆದು ಮತದಾನ ಮಾಡದಂತೆ ನ್ಯಾಯಾಧೀಶರ ಕಿವಿಮಾತು

ಮತ ಮಾರಿದರೆ ಪ್ರಶ್ನಿಸುವ ನೈತಿಕ ಹಕ್ಕಿಲ್ಲ

Published:
Updated:
Prajavani

ಕಾರವಾರ: ‘ಈಚಿನ ದಿನಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಹಣ ಖರ್ಚು ಮಾಡುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಅಭ್ಯರ್ಥಿಗಳು ಒಬ್ಬ ಮತದಾರನಿಗೇ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಇನ್ನು ದೇಶದಾದ್ಯಂತ ಲೆಕ್ಕಕ್ಕೇ ಸಿಗದಂತೆ ಎಷ್ಟು ಹಣ ವ್ಯಯಿಸಿರಲಿಕ್ಕಿಲ್ಲ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಜಿ.ಶಿವಶಂಕರೇಗೌಡ ವಿಷಾದ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಆಯೋಜಿಸಲಾದ ಮತದಾರರ ದಿನಾಚರಣೆ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. 

‘ನಿಮ್ಮ ಸುತ್ತಮುತ್ತ ಹಣ ಪಡೆದು ಮತ ಹಾಕುವವರು ಕಂಡುಬಂದರೆ ಅವರಿಗೆ ಹಾಗೆ ಮಾಡದಂತೆ ಮನವಿ ಮಾಡಿ. ಪ್ರತಿ ಮತಕ್ಕೂ ಮೌಲ್ಯವಿದೆ. ಅದನ್ನು ಹಣ ಪಡೆದುಕೊಂಡು ಮಾರಾಟ ಮಾಡಿದರೆ ಮೌಲ್ಯ ಕಳೆದುಕೊಳ್ಳುತ್ತದೆ. ಆಗ ಮತದಾರ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತಾನೆ’ ಎಂದು ವಿವರಿಸಿದರು.

ಕಾನೂನು ಪಾಲಿಸಿ: ‘ಕಾನೂನನ್ನು ಹೆಚ್ಚು ಉಲ್ಲಂಘಿಸುವ ಸಮಾಜಘಾತುಕರೇ ಮಾನವ ಹಕ್ಕುಗಳ ಬಗ್ಗೆ ಜಾಸ್ತಿ ಚರ್ಚಿಸುತ್ತಿದ್ದಾರೆ. ಕಾನೂನು ಪಾಲನೆ ಮಾಡುವವರಿಗೆ ತಮ್ಮ ಹಕ್ಕುಗಳು ಉಲ್ಲಂಘನೆಯಾಗುವ ಚಿಂತೆಯಿರುವುದಿಲ್ಲ. ಬೇರೆಯವರ ಹಕ್ಕುಗಳನ್ನು ಅವರು ಮೀರಲೂ ಮುಂದಾಗುವುದಿಲ್ಲ. ಸಮಾಜದ ಒಳಿತಿಗೆ ರೂಪಿಸಿರುವ ಕಾನೂನುಗಳನ್ನು ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಮಾತನಾಡಿ, ‘ಬದುಕು, ಬದುಕಲು ಬಿಡು ಎಂಬುದು ಎಲ್ಲ ಕಾನೂನುಗಳ ಧ್ಯೇಯವಾಗಿದೆ. ಮಾನವ ಹಕ್ಕುಗಳ ರಕ್ಷಣೆ ನ್ಯಾಯಾಲಯಗಳ ಕರ್ತವ್ಯವಾಗಿದೆ. ನಿಮ್ಮ ಹಕ್ಕುಗಳ ಉಲ್ಲಂಘನೆಯಾದರೆ ಕೂಡಲೇ ಪೊಲೀಸ್ ಠಾಣೆಗೆ ಅಥವಾ ನ್ಯಾಯಾಲಯದ ಗಮನಕ್ಕೆ ತರಬೇಕು. ಇದರಿಂದ ಕಾನೂನು ಪಾಲನೆ ಸಾಧ್ಯ’ ಎಂದು ಸಲಹೆ ನೀಡಿದರು. 

ಇದೇವೇಳೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ ಇಬ್ಬರು ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರವಾರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 122ರ (ನೈತಿಸಾವರ ಸರ್ಕಾರಿ ಶಾಲೆ) ಮತಗಟ್ಟೆ ಅಧಿಕಾರಿಯಾಗಿದ್ದ ನಾರಾಯಣ ತಿಮ್ಮಾ ಗುನಗಿ ಹಾಗೂ ಮತಗಟ್ಟೆ ಸಂಖ್ಯೆ 186ರ (ಹಲಗೇರಿ ಸರ್ಕಾರಿ ಶಾಲೆ) ವಿಜಯಲಕ್ಷ್ಮಿ ವೆಂಕಣ್ಣ ನಾಯಕ ಅವರು ಗೌರವ ಸ್ವೀಕರಿಸಿದರು. 

ಅಂಧ ಮತದಾರರಿಗೆ ಪ್ರಮಾಣ ಪತ್ರಗಳು ಹಾಗೂ ಯುವ ಮತದಾರರಿಗೆ ಗುರುತಿನ ಚೀಟಿಗಳನ್ನು ಹಸ್ತಾಂತರಿಸಲಾಯಿತು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಇದ್ದರು. ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಕಲ್ಪನಾ ಕೆರವಡಿಕರ್ ಸ್ವಾಗತಿಸಿದರು. ಪ್ರೊ.ವಿ.ವಿ.ಗಿರಿ ಕಾರ್ಯಕ್ರಮ ನಿರೂಪಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !