ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ ಸುತ್ತೋಲೆ ಸೃಷ್ಟಿಸಿದ ಗೊಂದಲ!

28ರಿಂದ ವಿ.ಟಿ.ಯು ಪರೀಕ್ಷೆ: ದಂಡ ಸಹಿತ ಶುಲ್ಕ ಪಾವತಿಸಲು 30ರವರೆಗೆ ಅವಕಾಶ
Last Updated 20 ಜನವರಿ 2021, 16:25 IST
ಅಕ್ಷರ ಗಾತ್ರ

ಕಾರವಾರ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿ.ಟಿ.ಯು) ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಯು ಜ.28ರಂದು ಪರೀಕ್ಷೆ ನಿಗದಿಯಾಗಿದೆ. ಆದರೆ, ದಂಡ ಸಹಿತ ಶುಲ್ಕ ಪಾವತಿಗೆ ಜ.30ರವರೆಗೆ ಅವಕಾಶ ನೀಡಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಈ ಮೊದಲು ಪರೀಕ್ಷಾ ಶುಲ್ಕವನ್ನು ಭರಿಸಲು ಜ.16 ಕೊನೆಯ ದಿನವೆಂದು ಸುತ್ತೋಲೆ ಹೊರಡಿಸಲಾಗಿತ್ತು. ಬಳಿಕ ಪರಿಷ್ಕೃತ ಸುತ್ತೋಲೆಯಲ್ಲಿ ಜ.21ಕ್ಕೆ ವಿಸ್ತರಿಸಲಾಗಿತ್ತು. ಅಲ್ಲದೇ ₹ 500 ದಂಡದೊಂದಿಗೆ ಶುಲ್ಕವನ್ನು ಜ.30ರೊಳಗೆ ಪಾವತಿಸಬಹುದು. ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಉಲ್ಲೇಖಿಸಲಾಗಿತ್ತು. ಹಾಗಾದರೆ, ಜ.28ರಂದು ಪರೀಕ್ಷೆ ಹಮ್ಮಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ ಎನ್ನುವುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.

‘ಪರೀಕ್ಷೆ ನಡೆದ ಬಳಿಕ ದಂಡ ಸಹಿತ ಶುಲ್ಕ ಪಾವತಿಸಲು ಹೇಗೆ ಸಾಧ್ಯವಾಗುತ್ತದೆ? ಜ.30ರವರೆಗೆ ದಂಡ ಸಹಿತ ಶುಲ್ಕ ಪಾವತಿಗೆ ಅವಕಾಶವಿದೆ ಎಂದರೆ ಪರೀಕ್ಷೆ ಮುಂದೂಡುತ್ತಾರೆ ಎಂದು ಭಾವಿಸಬೇಕೇ’ ಎನ್ನುವುದು ಕಾರವಾರದ ಎಂ.ಟೆಕ್ ವಿದ್ಯಾರ್ಥಿ ಶುಭಂ ಕಳಸ ಅವರ ಪ್ರಶ್ನೆಗಳಾಗಿವೆ.

‘ಶುಲ್ಕ ಪಾವತಿಸುವ ಅವಧಿಗೂ ಮೊದಲೇ ಪರೀಕ್ಷೆ ಹಮ್ಮಿಕೊಂಡರೆ, ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ಹೇಗೆ ಕೊಡುತ್ತಾರೆ? ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸಿದವರಿಗೆ ಹಾಗೂ ನಂತರ ಪಾವತಿಸಿದವರಿಗೆ ಪ್ರತ್ಯೇಕವಾಗಿ ಪರೀಕ್ಷೆ ಆಯೋಜಿಸುತ್ತಾರೆಯೇ? ಎರಡೆರಡು ರೀತಿಯ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುತ್ತಾರೆಯೇ’ ಎಂದೂ ಅವರು ಗೊಂದಲವನ್ನು ಮುಂದಿಟ್ಟಿದ್ದಾರೆ.

‘ಪರೀಕ್ಷೆಗೆ ಒಂದು ವಾರವೂ ಇಲ್ಲ. ನಾವು ಮಂಗಳೂರಿಗೆ ಹೋಗಿ ಪರೀಕ್ಷೆ ಬರೆಯಬೇಕು. ತನ್ನ ನಿರ್ಧಾರದ ಬಗ್ಗೆ ವಿ.ಟಿ.ಯು ಸ್ಪಷ್ಟವಾಗಿ ತಿಳಿಸಿದರೆ ನಾವು ಅಲ್ಲಿಗೆ ಹೋಗದಿರಬಹುದು. ಈ ರೀತಿಯ ಗೊಂದಲದಿಂದ ವಸತಿಯ ಸಮಸ್ಯೆಯೂ ಆಗುತ್ತದೆ. ಆದ್ದರಿಂದ ಈ ಬಗ್ಗೆ ವಿಶ್ವವಿದ್ಯಾಲಯದ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಯಾವುದೇ ಬದಲಾವಣೆಯಿಲ್ಲ’:

‘ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಒಂದೂವರೆ ತಿಂಗಳ ಹಿಂದೆಯೇ ವೇಳಾಪಟ್ಟಿ ರಚಿಸಲಾಗಿದ್ದು, ಪ್ರವೇಶಪತ್ರಗಳೂ ಸಿದ್ಧವಾಗುತ್ತಿವೆ. ಎಲ್ಲ ವಿದ್ಯಾರ್ಥಿಗಳನ್ನೂ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲಾಗಿದ್ದು, ಅವರ ಅರ್ಜಿಗಳನ್ನು ಕಳುಹಿಸುವುದು ಕಾಲೇಜುಗಳ ಜವಾಬ್ದಾರಿ’ ಎಂದು ವಿ.ಟಿ.ಯು ರಿಜಿಸ್ಟ್ರಾರ್ (ಪರೀಕ್ಷಾಂಗ) ಡಾ.ಬಿ.ಇ.ರಂಗಸ್ವಾಮಿ ಸ್ಪಷ್ಟಪಡಿಸಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಕಾರಣಾಂತರಗಳಿಂದ ಗಮನಿಸದ, ಅರ್ಜಿ ಸಲ್ಲಿಸಿದ್ದರೂ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದ ಪದವಿ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಈ ಸುತ್ತೋಲೆ ಹೊರಡಿಸಲಾಗಿದೆ. ಇದು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನ್ವಯವೇ ಆಗದು’ ಎಂದು ತಿಳಿಸಿದ್ದಾರೆ.

‘ಈ ರೀತಿಯ ಸಮಸ್ಯೆ ಎದುರಾದವರು ಸುಮಾರು 200 ವಿದ್ಯಾರ್ಥಿಗಳಿರಬಹುದು. ಅವರಿಗೂ ಯಾವುದೇ ತೊಂದರೆ ಆಗಬಾರದು ಎಂಬುದು ವಿಶ್ವವಿದ್ಯಾಲಯದ ಆಶಯವಾಗಿದೆ. ಈ ವಿಚಾರದಲ್ಲಿ ಯಾವುದೇ ಗೊಂದಲಗಳಿದ್ದರೂ ತಮ್ಮ ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT