ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿ ನದಿಯಲ್ಲಿ ಜಲಕ್ರೀಡೆಗೆ ತಾತ್ಕಾಲಿಕ ನಿಷೇಧ

Last Updated 17 ಏಪ್ರಿಲ್ 2022, 14:04 IST
ಅಕ್ಷರ ಗಾತ್ರ

ಜೊಯಿಡಾ: ‘ಜಿಲ್ಲಾಡಳಿತದಿಂದ ಹೊಸ ಮಾರ್ಗಸೂಚಿ ಹಾಗೂ ಆದೇಶ ಬರುವ ತನಕ ತಾಲ್ಲೂಕಿನಲ್ಲಿ ಕಾಳಿ ನದಿಯಲ್ಲಿ ಯಾವುದೇ ರೀತಿಯ ಜಲಕ್ರೀಡೆಗಳನ್ನು ನಡೆಸಬಾರದು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.

ತಾಲ್ಲೂಕಿನ ಗಣೇಶಗುಡಿ ಸಮೀಪ ಗುರುವಾರ ಸಂಜೆ ಕಾಳಿ ನದಿಯಲ್ಲಿ ರ‍್ಯಾಫ್ಟಿಂಗ್ ನಡೆಯುವಾಗ ಅಪಾಯಕ್ಕೆ ಸಿಲುಕಿದ್ದ ದೋಣಿಯಿಂದ ಮಕ್ಕಳೂ ಸೇರಿದಂತೆ 12 ಜನರನ್ನು ರಕ್ಷಿಸಲಾಗಿತ್ತು. ಈ ಸಂಬಂಧ ಶನಿವಾರ ಸಂಜೆ ಗಣೇಶಗುಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ರೆಸಾರ್ಟ್ ಮಾಲೀಕರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಜಲಕ್ರೀಡೆಗಳಿಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲು ಕ್ರಮ ಕೈಗೊಂಡರು.

‘ಜಲಕ್ರೀಡೆಗಳನ್ನು ಪ್ರಾರಂಭಿಸುವ ಮೊದಲು ಆಯೋಜಕರು ಪರವಾನಗಿಯನ್ನು ನವೀಕರಿಸಿಕೊಳ್ಳಬೇಕು. ಆಯೋಜನಾ ಸಂಸ್ಥೆಯು ವಿಮೆ ಹಾಗೂ ಗೈಡ್‌ಗಳು ಪರವಾನಗಿ ಹೊಂದಿದ್ದರೆ ಮಾತ್ರ ರ್‍ಯಾಫ್ಟಿಂಗ್‌ಗೆ ಪರವಾನಗಿಯನ್ನು ನವೀಕರಿಸಲಾಗುವುದು. ಸುರಕ್ಷತಾ ಕ್ರಮಗಳನ್ನು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸದೆ ಯಾರು ಕೂಡ ಜಲಸಾಹಸ ಕ್ರೀಡೆಗಳನ್ನು ನಡೆಸಬಾರದು’ ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.

‘ಈ ಕುರಿತು ಶೀಘ್ರದಲ್ಲೇ ಅಧಿಕಾರಿಗಳ ಸಭೆ ನಡೆಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಗುರುವಾರ ರ್‍ಯಾಫ್ಟಿಂಗ್ ಸಂದರ್ಭ ಆಗಿರುವ ಘಟನೆಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು. ತಹಶೀಲ್ದಾರ್ ಸಂಜಯ ಕಾಂಬಳೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಈ ನಡುವೆ, ಆವೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶಗುಡಿಯಲ್ಲಿ ಕೆಲವು ರೆಸಾರ್ಟ್‌ನವರು ಜಲ ಸಾಹಸ ಕ್ರೀಡೆಗಳಲ್ಲಿ ಪಂಚಾಯಿತಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಗುರುವಾರವೂ ನಿಗದಿಗಿಂತ ಹೆಚ್ಚು ಪ್ರವಾಸಿಗರನ್ನು ರ್‍ಯಾಫ್ಟಿಂಗ್ ದೋಣಿಯಲ್ಲಿ ಕರೆದುಕೊಂಡು ಹೋಗಲಾಗಿದೆ. ಆಗ ಅವಘಡ ನಡೆದಿದೆ. ಹಾಗಾಗಿ ಕಾಳಿ ನದಿಯಲ್ಲಿ ಜಲ ಸಾಹಸ ಕ್ರೀಡೆಗಳನ್ನು ನಡೆಸಲು ಗ್ರಾಮ ಪಂಚಾಯಿತಿ ನೀಡಿದ ಎಲ್ಲ ಪ್ರಮಾಣ ಪತ್ರಗಳು ಮತ್ತು ಪರವಾನಗಿಗಳನ್ನು ಮುಂದಿನ ಆದೇಶದವರೆಗೆ ರದ್ದು ಪಡಿಸಿ ಗ್ರಾಮ ಪಂಚಾಯಿತಿಯಿಂದ ನೋಟಿಸ್ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT