ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿ ಬೆಳಚು ಸುಗ್ಗಿ: ಮಾಂಸಾಹಾರಿಗಳ ಸಂಭ್ರಮ

ಕುಮಟಾ ತಾಲ್ಲೂಕಿನ ಕೊಡಕಣಿ, ಕಿಮಾನಿಯಲ್ಲಿ ಹೇರಳವಾಗಿ ಲಭ್ಯ
Last Updated 13 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ಅಘನಾಶಿನಿ ನದಿಯ ಕೊಡಕಣಿ, ಕಿಮಾನಿ ಭಾಗದಲ್ಲಿ ಈ ವರ್ಷ ಕೊಂಚ ಜಾಸ್ತಿ ಪ್ರಮಾಣದಲ್ಲಿ ‘ಬಿಳಿ ಬೆಳಚು’ (ಮೆಟ್ರಿಕ್ಸ್ ಮೆಟ್ರಿಕ್ಸ್, ಮೆಟ್ರಿಕ್ಸ್ ಕಾಸ್ಟಾ) ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರುವಂತೆ ಮಾಡಿದೆ.

ಮಧ್ಯಮ ಪ್ರಮಾಣದಲ್ಲಿ ಉಪ್ಪಿನಂಶ ಇರುವ ನೀರಿನಲ್ಲಿ ಬಿಳಿ ಬೆಳಚು ಬೆಳಯತ್ತವೆ. ಒಂದು ಕೊಳಗ (ಸುಮಾರು 2 ಕೆ.ಜಿ.) ಬೆಳಚನ್ನು ₹ 100ರಂತೆ ಮಾರಾಟ ಮಾಡಲಾಗುತ್ತದೆ.

ಈ ಹಿಂದೆ ಊರಿನ ಮನೆಗಳಿಗೆ ಸಂಬಂಧಿಕರು ಬಂದಾಗ ವಿಶೇಷ ಅಡುಗೆಗೆ ಏನೂ ಇಲ್ಲದಿದ್ದರೆ ಗೃಹಿಣಿಯರು ಸಮೀಪದಲ್ಲೇ ಹರಿಯುವ ನದಿಗೆ ಹೋಗಿ ಅರ್ಧ ಗಂಟೆಯೊಳಗೆ ಒಂದು ಬುಟ್ಟಿ ಬೆಳಚು ತರುತ್ತಿದ್ದರು. ಅಂದು ಬಿಳಿ ಬೆಳಚಿನ ಬಾಜಿ, ಅನ್ನಕ್ಕೆ ಬಿಳಿ ಬೆಳಚಿನ ಸಾರು ಮಾಡಿದರೆ ಬಂದವರು ಖುಷಿಪಡುತ್ತಿದ್ದರು. ಬೆಳಚಿನ ಖಾದ್ಯ ತಿಂದವರು ಅದನ್ನು ಕೊಂಡೂ ಹೋಗುತ್ತಿದ್ದರು. ಇದರಲ್ಲಿ ಕಬ್ಬಿಣ, ಸತು, ಮ್ಯಾಗ್ನೇಷಿಯಂ, ಪ್ರೋಟಿನ್, ವಿಟಾಮಿನ್ ಬಿ-12 ಹೇರಳವಾಗಿವೆ. ಹಾಗಾಗಿ ‘ಬಡವರ ಸಂಪೂರ್ಣ ಆಹಾರ’ ಎಂದೇ ಕರೆಯಲಾಗುತ್ತದೆ.

‘ಈ ಭಾಗದಲ್ಲಿ ಮೊದಲು ಕಗ್ಗ ಜಾತಿಯ ಭತ್ತವನ್ನು ಹೇರಳವಾಗಿ ಬೆಳೆಯುತ್ತಿದ್ದರು. ಕಗ್ಗನಕ್ಕಿ ರೊಟ್ಟಿ-ಬೆಳಚಿನ ಬಾಜಿ, ಕಗ್ಗನಕ್ಕಿ ಗಂಜಿ-ಬೆಳಚಿನ ಕಟ್ನೀರು (ಬೆಳಚು ಬೇಯಿಸಿದಾಗ ಬರುವ ರಸ) ಸ್ಥಳೀಯರ ಆರೋಗ್ಯ ಕಾಪಾಡುತ್ತಿದ್ದವು. ನದಿಯಲ್ಲಿ ಉಸುಕು ತೆಗೆಯುವುದು ಅತಿಯಾಗಿದ್ದರಿಂದ ಬೆಳಚು ಬೆಳೆಯುವುದು ಅಪರೂಪವಾಗಿದೆ. ಕಗ್ಗ ಭತ್ತದ ಕೃಷಿಯಂತೂ ನಿಂತೇ ಹೋಗಿದೆ’ ಎನ್ನುತ್ತಾರೆ ಸರ್ಕಾರೇತರ ಸಂಸ್ಥೆ ‘ಐಕ್ಯ’ದ ಉಪಾಧ್ಯಕ್ಷ ನಾಗರಾಜ ನಾಯ್ಕ.

‘ನೈಸರ್ಗಿಕವಾಗಿ ಸಿಗುವ ಬೆಳಚು ಊರಿನ ಸಂಪತ್ತು ಎನ್ನುವ ಕಾಳಜಿ ಸ್ಥಳೀಯರಿಗೆ ಇರಬೇಕು. ಅದನ್ನು ಯಾರ‍್ಯಾರೋ ತೆಗೆದು ಮಾರಾಟ ಮಾಡಲು ಅವಕಾಶ ಕೊಡಬಾರದು. ದೊಡ್ಡ ಗಾತ್ರದ ಬೆಳಚು ಮಾತ್ರ ಆರಿಸಿ ಬಳಸಿದರೆ ಚಿಕ್ಕ ಗಾತ್ರದವು ಬೆಳೆಯಲು ಅನಕೂಲವಾಗುತ್ತದೆ’ ಎನ್ನುತ್ತಾರೆ ಅವರು.

‘ಬಿಳಿ ಬೆಳಚು ಮಿದುಳು ಆರೋಗ್ಯಕ್ಕೆ ಅತ್ಯುತ್ತಮ. ಹಾಗಾಗಿ ಅದನ್ನು ಪ್ಯಾಕ್ಡ್ ನ್ಯುಟ್ರಿಯಂಟ್ ಎನ್ನುತ್ತಾರೆ. ಜನವರಿ ನಂತರ, ಅದರ ಬೆಳವಣಿಗೆ ಆದ ನಂತರವೇ ನದಿಯಲ್ಲಿ ಆರಿಸಬೇಕು’ ಎನ್ನುವುದು ಭಾರತೀಯ ವಿಜ್ಞಾನ ಸಂಸ್ಥೆಯ ಕುಮಟಾ ಘಟಕದ ವಿಜ್ಞಾನಿ ಡಾ. ಎಂ.ಡಿ.ಸುಭಾಶ್ಚಂದ್ರ ಅವರ ಸಲಹೆ.

ಬೆಳಚು ₹ 1 ನಾಣ್ಯ!:

‘ಬಿಳಿ ಬೆಳಚಿನ ಮರಿ ಲಾರ್ವಾ ಸ್ಥಿತಿಯಲ್ಲಿ ತೇಲಿ ಹೋಗಿ ಹೆಚ್ಚು ಕೆಸರು ಇರುವ ಅನುಕೂಲಕರ ಜಾಗದಲ್ಲಿದ್ದು ಬೆಳೆಯುತ್ತವೆ. ಒಮ್ಮೆ ಲಾರ್ವಾ ಕುಳಿತರೆ ಎರಡು-ಮೂರು ವರ್ಷ ಬೆಳೆಯುತ್ತವೆ. ಅವು ನದಿ ನೀರನ್ನು ಶುದ್ಧೀಕರಿಸುವ ಫಿಲ್ಟರ್‌ನಂತೆ ಕೂಡ ಕೆಲಸ ಮಾಡುತ್ತವೆ. ಹಿಂದೆ ಬಡವರ ಆಹಾರವಾಗಿದ್ದ ಬೆಳಚು ಈಗ ಶ್ರೀಮಂತರ ಆಹಾರವಾಗಿದೆ. ಮಾರುಕಟ್ಟೆಯಲ್ಲಿ ಒಂದು ಬೆಳಚಿಗೆ ₹ 1 ಇದೆ. ಹಾಗಾಗಿ ಇದನ್ನು ₹ 1 ನಾಣ್ಯ ಎಂದೂ ಕರೆಯುತ್ತಾರೆ’ ಎಂದು ಕಡಲ ಜೀವಶಾಸ್ತ್ರಜ್ಞ ಡಾ. ಪ್ರಕಾಶ ಮೇಸ್ತ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT