ಶನಿವಾರ, ಜನವರಿ 18, 2020
19 °C
ಭತ್ತ, ಅಡಿಕೆ, ಬಾಳೆಗೆ ಹಾನಿ, ಆತಂಕದಲ್ಲಿ ಜನರ ಸಂಚಾರ

ಕುಮಟಾ: ಪಟ್ಟಣದಲ್ಲೇ ಕಾಡು ಹಂದಿ ಹಾವಳಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ಪಟ್ಟಣದ ವಿವೇಕನಗರ, ಮಣಕಿ ಭಾಗದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ಜನರು ಭಯದಿಂದ ಓಡಾಡುವಂತಾಗಿದೆ.

ವಿವೇಕನಗರ ನಿವಾಸಿ ಗಣತಿ ಹೆಬ್ಬಾರ ಎನ್ನುವವರಿಗೆ ಈಚೆಗೆ ಎದುರಾದ ಹಂದಿ ದಾಳಿ ಮಾಡಲು ಯತ್ನಿಸಿತ್ತು. ಅವರ ತೋಟದ ಬಾಳೆ, ಅಡಿಕೆ ಗಿಡಗಳನ್ನು ತಿಂದು ಹಾನಿ ಮಾಡಿದೆ. ಸ್ಥಳೀಯರಾದ ಸುಶೀಲಾ ಮುಕ್ರಿ ಎನ್ನುವವರ ಕಟಾವಿಗೆ ಬಂದ ಭತ್ತದ ಪೈರನ್ನು ನಾಶ ಮಾಡಿದೆ.

ಹಂದಿಗಳ ಹಿಂಡಿನಲ್ಲಿ ಮರಿಗಳೂ ಇರುವುದರಿಂದ ತಾಯಿ ಹಂದಿಯು ಜನರ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಕಾಡು ಹಂದಿಯನ್ನು ಕೊಲ್ಲುವುದು ಕಾನೂನು ಬಾಹಿರವಾಗುತ್ತದೆ. ಹಾಗಾಗಿ ಅಸಹಾಯರಾಗಿದ್ದೇವೆ ಎನ್ನುತ್ತಾರೆ ರೈತರು.

‘ನಮ್ಮ ಮನೆಯ ಬಳಿ ಬೆಟ್ಟದಲ್ಲಿ ಮರಿ ಹಾಕಿದ್ದ ಕಾಡು ಹಂದಿ, ನನ್ನ ಮೇಲೆ ದಾಳಿ ಮಾಡಲು ಬಂತು. ನಾನು ಹೇಗೋ ತಪ್ಪಿಸಿಕೊಂಡೆ. ತೋಟದ ಎಳೆಯ ಬಾಳೆ ಹಾಗೂ ಅಡಿಕೆ ಸಸಿಗಳನ್ನು ತಿಂದು ಹಾಕಿದೆ’ ಎಂದು ಗಣಪತಿ ಹೆಬ್ಬಾರ ತಿಳಿಸಿದರು.

‘ಮಣಕಿಯಲ್ಲಿ ಮೂರು ಎಕರೆ ಕೃಷಿ ಜಮೀನು ಬಾಡಿಗೆ ಪಡೆದು ಬೆಳೆದ ಭತ್ತದ ಪೈರಿನ ಶೇ 50ರಷ್ಟನ್ನು ಕಾಡುಹಂದಿ ನಾಶ ಮಾಡಿದೆ. ಅದರ ಕಾಟದಿಂದ ಕೃಷಿಯಲ್ಲಿ ಆಸಕ್ತಿ ಹೊರಟು ಹೋಗುತ್ತಿದೆ’ ಎಂದು ಪ್ರಗತಿಪರ ಕೃಷಿಕ ಹೆಗಡೆ ಗ್ರಾಮದ ತಿಮ್ಮಪ್ಪ ಮುಕ್ರಿ ತಿಳಿಸಿದರು.

ಕುಮಟಾ ವಲಯ ಅರಣ್ಯ ಅಧಿಕಾರಿ ಪ್ರವೀಣ ನಾಯಕ ಪ್ರತಿಕ್ರಿಯಿಸಿ, ‘ಕಾಡು ಹಂದಿಯನ್ನು ಹತ್ಯೆ ಮಾಡುವುದು ವನ್ಯಜೀವಿ ಕಾನೂನು ಪ್ರಕಾರ ಅಪರಾಧವಾಗುತ್ತದೆ. ಕಾಡು ಹಂದಿ ಬೆಳೆ ನಾಶ ಮಾಡಿದರೆ ರೈತರಿಗೆ ಪರಿಹಾರ (ಎಕ್ಸ್‌ಗ್ರೇಶಿಯಾ) ನೀಡುವ ಹೊಸ ಯೋಜನೆ ಜಾರಿಗೆ ಬಂದಿದೆ. ಈಗಾಗಲೇ ಕೆಲವು ರೈತರಿಗೆ ಪರಿಹಾರ ವಿತರಿಸಲಾಗಿದೆ’ ಎಂದರು.

‘ರೈತರು ಹಾನಿಗೊಳಗಾದ ತಮ್ಮ ಜಮೀನಿನ ಪಹಣಿ ಇಟ್ಟು ಅರಣ್ಯ ಇಲಾಖೆಗೆ ಅರ್ಜಿ ಕೊಡಬೇಕು. ಇಲಾಖೆಯು ಫೋಟೊ ಮತ್ತು ವಿಡಿಯೊ ಚಿತ್ರೀಕರಣ ಮಾಡಿ ಯೋಜನೆಯ ತಂತ್ರಾಂಶಕ್ಕೆ ಅಳವಡಿಸುತ್ತದೆ. ಅದು ಪರಿಹಾರ ಮೊತ್ತವನ್ನು ನಿಗದಿಪಡಿಸುತ್ತದೆ. ಆ ಪ್ರಕಾರ ರೈತರಿಗೆ ಪರಿಹಾರ ನೀಡಬಹುದಾಗಿದೆ’ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು