ಶನಿವಾರ, ಫೆಬ್ರವರಿ 27, 2021
27 °C
ವೈಷಮ್ಯ ಬೆಳೆಸುತ್ತಿರುವ ಜಾಲವನ್ನು ಪತ್ತೆ ಹಚ್ಚಲು ಆಗ್ರಹ

ತನಿಖೆಗೆ ಸಂಪೂರ್ಣ ಸಹಕಾರ: ಘೋಟ್ನೇಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಳಿಯಾಳ: ‘ದಲಿತ ಸಂಘಟನೆಯ ಪ್ರಮುಖರು ನನ್ನ ಮೇಲೆ ಮಾಡಿರುವ ಆಪಾದನೆಯ ತನಿಖೆ ಮಾಡುವುದಾದರೆ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ದಲಿತರನ್ನು ನಿಂದಿಸಿದ ಬಗ್ಗೆ ಕೆಲವರು ಆರೋಪ ಮಾಡಿದ್ದನ್ನು ಪತ್ರಿಕೆಯಲ್ಲಿ ಓದಿದ್ದೇನೆ. ಈ ಆರೋಪ ಸತ್ಯವಾಗಿದ್ದಲ್ಲಿ ನನ್ನ ಮೇಲೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಲಿ. ಕೆಲವರು ಜಾತ್ಯತೀತ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರು ಸಹ ನನ್ನ ಜನಪ್ರಿಯತೆಯನ್ನು ಸಹಿಸುತ್ತಿಲ್ಲ. ಕಾಣದ ಕೈಗಳಂತೆ ಕೆಲಸ ಮಾಡುತ್ತಿರುವ ಬಗ್ಗೆ ನನಗೆ ಸಂಶಯವಿದೆ’ ಎಂದರು.

‘ನನ್ನ ರಾಜಕೀಯ ಜೀವನದಲ್ಲಿ ಈವರೆಗೂ 15–20 ಪ್ರಕರಣಗಳು ದಾಖಲಾಗಿವೆ. ಎಲ್ಲವನ್ನೂ ನಾನು ಜಯಿಸಿದ್ದೇನೆ. ನನಗೂ ಕಾನೂನಿನ ಅರಿವಿದೆ. ಸಂವಿಧಾನ ಬದ್ಧವಾದ ಕಾನೂನಿಗೆ ಪ್ರತಿಯೊಬ್ಬರೂ ತಲೆ ಬಾಗಲೇಬೇಕು. ಯಾವುದೇ ಜಾತಿಯ ಮೇಲೆ ಅನ್ಯಾಯವಾದರೆ ನಾವು ಸಹಿಸುವುದಿಲ್ಲ. ಆದರೆ, ಹಳಿಯಾಳದಲ್ಲಿ ಕೆಲವರು ಮಧ್ಯವರ್ತಿ ಏಜೆಂಟರು ಅನ್ಯಜಾತಿ ಮತ್ತು ಕೋಮಿನ ಯುವಕ, ಯುವತಿಯರ ಮದುವೆ ಮಾಡಿಸುತ್ತಿದ್ದಾರೆ. ಇದರಿಂದ ವೈಷಮ್ಯಗಳು ಉಂಟಾಗುತ್ತಿವೆ. ಇದರ ಹಿಂದೆ ಇರುವ ಜಾಲವನ್ನು ಪತ್ತೆ ಹಚ್ಚಬೇಕು. ನಾನೂ ಇದಕ್ಕೆ ಸಿದ್ಧನಿದ್ದೇನೆ. ಪೊಲೀಸ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿ’ ಎಂದು ಹೇಳಿದರು.

‘ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ್ ಅವರ ವಿರುದ್ಧ ದಲಿತ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿ 22 ದಿನಗಳಾಗಿವೆ. ಆದರೂ ಅವರನ್ನು ಬಂಧಿಸಿಲ್ಲ. ಅಂತರ್ಜಾತಿ ವಿವಾಹವೊಂದಕ್ಕೆ ಸಂಬಂಧಿಸಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಯುವಕ ಮತ್ತು ಯುವತಿಗೆ ಕೌನ್ಸೆಲಿಂಗ್ ನಡೆಯುತ್ತಿತ್ತು. ಅಲ್ಲಿಗೆ ಬಂದಿದ್ದ ಅವರು ಅಲ್ಲಿದ್ದವರನ್ನು ಮನಬಂದಂತೆ ನಿಂದಿಸಿದ್ದರು’ ಎಂದು ದಲಿತಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು