ಸೋಮವಾರ, ಏಪ್ರಿಲ್ 6, 2020
19 °C
ಹಳಿಯಾಳದಲ್ಲಿ 12 ವರ್ಷಗಳಿಂದ ಗೂಡಂಗಡಿ ನಡೆಸುತ್ತಿರುವ ರತ್ನಾ ಚಲವಾದಿ

ಭಜ್ಜಿಯಿಂದ ಬದುಕು ರೂಪಿಸಿಕೊಂಡ ದಿಟ್ಟೆ

ಸಂತೋಷ ಹಬ್ಬು Updated:

ಅಕ್ಷರ ಗಾತ್ರ : | |

Prajavani

ಹಳಿಯಾಳ: ‘ಮಹಿಳೆಯೊಬ್ಬಳು ಆತ್ಮವಿಶ್ವಾಸದಿಂದ ತನ್ನ ಜೀವನದ ಬಗ್ಗೆ ಸ್ವಯಂ ನಿರ್ಧಾರ ತೆಗೆದುಕೊಂಡರೆ ಮಹಿಳಾ ಸಬಲೀಕರಣಕ್ಕೆ ಅರ್ಥ ದೊರೆತಂತೆ...’

ಇದು ಪಟ್ಟಣದ ಪುರಸಭೆ ಕಚೇರಿ ಬಳಿಯ ಪಾದಚಾರಿ ಮಾರ್ಗದ ಸಮೀಪ 12 ವರ್ಷಗಳಿಂದ ಚಹಾ ಅಂಗಡಿ ಇಟ್ಟು ಸ್ವಾವಲಂಬಿ ಜೀವನ ಸಾಗಿಸುತ್ತಿರುವ ರತ್ನಾ ಚಲವಾದಿಯ ದೃಢವಾದ ಮಾತು. 

ಚಹಾ, ಮಿರ್ಚಿ ಭಜ್ಜಿ, ಗಿರ್ಮಿಟ್‌ನಂತಹ ಖಾದ್ಯಗಳನ್ನು ತಯಾರಿಸುವ ಅವರಿಗೆ, ಅದರ ಮಾರಾಟದಿಂದ ಬರುವ ಆದಾಯವೇ ಜೀವನಾಧಾರ. ಪುಟ್ಟ ತಾಡಪತ್ರಿ ಹೊದಿಕೆ ಹೊಂದಿರುವ ಚಾವಣಿ ಮಾಡಿ ಅದರಲ್ಲಿ ತನ್ನ ತಳ್ಳುಗಾಡಿ ತಂದಿಟ್ಟುಕೊಂಡಿದ್ದಾರೆ.  ಪ್ರತಿದಿನ ಅಂಗಡಿ ತೆರೆದು ಖಾದ್ಯಗಳ ಮಾರಾಟವಾದರೆ ಮಾತ್ರ ಅಂದಿನ ದಿನ ಸಾಗುತ್ತದೆ

‘ಕೆಲವರು ಭಜ್ಜಿ, ಚಹಾ ಸೇವಿಸಿದ ನಂತರ ಪ್ರಾಮಾಣಿಕವಾಗಿ ಹಣವನ್ನು ಪಾವತಿಸುತ್ತಾರೆ. ಆದರೆ ಕೆಲವರು ಪಾವತಿಸದೇ ತೆರಳುತ್ತಾರೆ. ಪದೇ ಪದೇ ಕಾಡಿ ಬೇಡಿ ವಸೂಲಿ ಮಾಡಬೇಕಾಗುತ್ತದೆ’ ಎಂದು ಗದ್ಗದಿತರಾದರು.

‘ಶಾಸಕ ಆರ್.ವಿ.ದೇಶಪಾಂಡೆ ಸಚಿವರಾಗಿದ್ದಾಗ ಒಂದೆರಡು ಬಾರಿ ನಮ್ಮ ಗೂಡಂಗಡಿಗೆ ಭೇಟಿ ನೀಡಿ ಮಿರ್ಚಿ ಭಜ್ಜಿ, ಚುರುಮುರಿ ಸೇವಿಸಿದ್ದರು. ಅಂದು ನನ್ನ ಪರಿಸ್ಥಿತಿಯನ್ನು ಅರಿತು ಆಶ್ರಯ ಯೋಜನೆಯಲ್ಲಿ ಮನೆ ಮಂಜೂರು ಮಾಡಿದರು. ಹಾಗಾಗಿ ತಲೆ ಮೇಲೊಂದು ಸೂರಿದೆ. ಪುಟ್‌ಪಾತ್‌ನಿಂದ ಅಂಗಡಿಯನ್ನು ಯಾವಾಗ ತೆರವು ಮಾಡಿಸುತ್ತಾರೋ ಎಂಬ ಆತಂಕ ಸದಾ ಕಾಡುತ್ತಿರುತ್ತದೆ. ಅಂಗಡಿ ಬಾಡಿಗೆ ಪಡೆಯಲು ಲಕ್ಷಾಂತರ ರೂಪಾಯಿ ಮುಂಗಡ ಹಣ ಪಾವತಿಸಬೇಕು. ತಿಂಗಳಿಗೆ ಸಾವಿರಾರು ರೂಪಾಯಿ ಬಾಡಿಗೆ ಹಣವನ್ನೆಲ್ಲಿಂದ ತರಲಿ’ ಎಂದು ಪ್ರಶ್ನಿಸುತ್ತಾರೆ.

‘ಸಮಾಜದ ಮುಖ್ಯ ಕ್ಷೇತ್ರಗಳನ್ನು ಹೊರತಾಗಿ ಕೆಳ ಮಧ್ಯಮ ವರ್ಗದ ಮಹಿಳೆಯರಿಗೆ ಸಬಲೀಕರಣದ ಅಗತ್ಯವಿದೆ. ಮಹಿಳೆ ಸ್ವಂತ ಮುನ್ನಡೆಯುವ ಪರಿಸ್ಥಿತಿಯು ಸಮಾಜದಲ್ಲಿ ಸೃಷ್ಟಿಯಾಗಬೇಕು’ ಎಂದು ಆಶಯ ವ್ಯಕ್ತಪಡಿಸುತ್ತಾರೆ.

ಮಕ್ಕಳಿಗೆ ಶಿಕ್ಷಣದ ಬೆಳಕು: ‘ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ನೋಡಿಕೊಳ್ಳಬೇಕು. ಇಂಥ ಸಂದಿಗ್ಧ ಸ್ಥಿತಿಯಲ್ಲೇ ಒಬ್ಬ ಮಗನಿಗೆ ಎಂ.ಬಿ.ಎ ಪದವಿ ಶಿಕ್ಷಣ ಕೊಡಿಸಿದ್ದೇನೆ. ಮತ್ತೊಬ್ಬನಿಗೂ ಚೆನ್ನಾಗಿ ಶಿಕ್ಷಣ ನೀಡುತ್ತಿದ್ದೇನೆ. ಅಂಗಡಿ ಆರಂಭಿಸಿದ ಆರಂಭದಲ್ಲಿ ಬಹಳಷ್ಡು ನಿಂದನೆ, ಆರ್ಥಿಕ ತೊಂದರೆಗೆ ಒಳಗಾದೆ. ಆದರೂ ಎದೆಗುಂದದೆ ಕಷ್ಟ, ನೋವುಗಳ ಮಧ್ಯೆಯೇ ಛಲದಿಂದ ಮುಂದುವರಿಸಿದೆ’ ಎಂದು ರತ್ನಾ ಮುಗುಳ್ನಗುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)