ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಮೆರೆದ ಯುವಕನಿಗೆ ಸನ್ಮಾನ

ಗಾಯಾಳುವನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದ ರವಿಪ್ರಕಾಶ್
Last Updated 5 ಏಪ್ರಿಲ್ 2021, 2:52 IST
ಅಕ್ಷರ ಗಾತ್ರ

ಅಂಕೋಲಾ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ತನ್ನ ಬೈಕ್ ಮೇಲೆ ಸುಮಾರು 40 ಕಿ.ಮೀ ದೂರದಿಂದ ಕರೆತಂದು ಮಾನವೀಯತೆ ಮೆರೆದ ಯುವಕನನ್ನು ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸನ್ಮಾನಿಸಿ ಗೌರವಿಸಿದರು.

ಶನಿವಾರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಹೆಬ್ಬುಳ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತಕ್ಕೀಡಾದ ಯುವಕರು ಸಹಾಯಕ್ಕಾಗಿ ಅದೇ ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರಲ್ಲಿ ಮನವಿ ಮಾಡಿದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಬೆಳಗಾವಿಯಿಂದ ಗೋಕರ್ಣಕ್ಕೆ ಇದೇ ಮಾರ್ಗದ ಮೂಲಕ ತೆರಳುತ್ತಿದ್ದ ಆಂಧ್ರಪ್ರದೇಶ ದ ಕರ್ನೂಲ್ ನ ಯುವಕ ರವಿಪ್ರಕಾಶ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕನನ್ನು ಮತ್ತೊಂದು ಯುವಕನ ಸಹಾಯ ಪಡೆದು ತನ್ನ ಬೈಕ್ ಮೇಲೆ ಕೂರಿಸಿಕೊಂಡು ತಾಲೂಕಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ರವಿಪ್ರಕಾಶನ ಸಮಯಪ್ರಜ್ಞೆ ಮೆಚ್ಚಿದ ಅಂಕೋಲಾ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ರಾತ್ರಿ ಗೋಕರ್ಣಕ್ಕೆ ತೆರಳಿ ಆತನನ್ನು ಠಾಣೆಗೆ ಕರೆಸಿಕೊಂಡು ಸನ್ಮಾನಿಸಿದರು.

ಯುವಕ ರವಿಪ್ರಕಾಶ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದು ಮಹಾರಾಷ್ಟ್ರದ ಪುಣೆಯ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕನ್ಸ್ಟ್ರಕ್ಷನ್ ಮ್ಯಾನೇಜ್‌ಮೆಂಟ್‌ ಅಂಡ್ ರೀಸರ್ಚ್ ಕಾಲೇಜಿನಲ್ಲಿ ರಿಯಲ್ ಎಸ್ಟೇಟ್ ಮತ್ತು ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಪುಣೆಯಿಂದ ಹೊರಟು ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳಾದ ಗೋಕರ್ಣ ಮುರುಡೇಶ್ವರ ಉಡುಪಿ ಪಟ್ಟಣವನ್ನು ವೀಕ್ಷಿಸಿ ಬಳ್ಳಾರಿ ಮೂಲಕ ಹುಟ್ಟೂರು ಆಂಧ್ರಪ್ರದೇಶದ ಕರ್ನೂಲಿಗೆ ತೆರಳುವ ಉದ್ದೇಶದಿಂದ ಬಂದಿದ್ದರು. ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಕೃಷ್ಣಾನಂದ ನಾಯಕ ಪಿಎಸ್ಐ ಇಸಿ ಸಂಪತ್ ಪಿಎಸ್ಐ ಪ್ರೇಮನಗೌಡ ಪಾಟೀಲ್, ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ರವಿಪ್ರಕಾಶ ಅವರನ್ನು ಗೌರವಿಸಿ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT