ಸೋಮವಾರ, ನವೆಂಬರ್ 30, 2020
21 °C
ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರ ತೀವ್ರ ಆಕ್ಷೇಪ

ಅನುಪಾಲನಾ ವರದಿ ಅಪೂರ್ಣ: ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಅನುಪಾಲನಾ ವರದಿಯು ಅಪೂರ್ಣವಾಗಿದೆ. ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗೆಗಿನ ಬೆಳವಣಿಗೆ ಕುರಿತು ಅಧಿಕಾರಿಗಳು ಮಾಹಿತಿ ಕೊಡುತ್ತಿಲ್ಲ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಹೀಗೆ ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯ ಆರಂಭದಲ್ಲಿ ಮಾತು ಆರಂಭಿಸಿದ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ, ‘ಕೊರೊನಾ ಕಾರಣದಿಂದ ಊರಿಗೆ ಮರಳಿದ ಹಲವು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕೆಲವೆಡೆ ಇಂಟರ್‌ನೆಟ್ ಸಂಪರ್ಕದ ಸಮಸ್ಯೆಯಿದೆ. ಅಂಥವರಿಗೆ ಗ್ರಾಮ ಪಂಚಾಯ್ತಿಗಳಲ್ಲಿರುವ ಇಂಟರ್‌ನೆಟ್ ಬಳಸಿಕೊಳ್ಳಲು ಷರತ್ತುಬದ್ಧ ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಜುಲೈ ತಿಂಗಳ ಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲಾ ಪಂಚಾಯ್ತಿಯಿಂದ ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಪತ್ರ ರವಾನೆಯಾಗಿದೆ. ಈ ಬಗ್ಗೆ ತಾಲ್ಲೂಕು ಪಂಚಾಯ್ತಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದೀರಿ. ಆದರೆ, ಹಲವು ಗ್ರಾಮ ಪಂಚಾಯ್ತಿಗಳಿಗೆ ಇದರ ಮಾಹಿತಿಯೇ ಇಲ್ಲ’ ಎಂದು ದೂರಿದರು. ಸದಸ್ಯರಾದ ಗಜಾನನ ಪೈ, ಶಿವಾನಂದ ಹೆಗಡೆ ಕಡತೋಕ, ಆಲ್ಬರ್ಟ್ ಡಿಕೋಸ್ತ ಇದಕ್ಕೆ ಧ್ವನಿಗೂಡಿಸಿದರು.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ ಮಾತನಾಡಿ, ‘ಕರ್ನಾಟಕ ನೀರಾವರಿ ನಿಗಮದವರು ಪರಿಶಿಷ್ಟ ಪಂಗಡದವರು ಇಲ್ಲದ ಜಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಜಿಲ್ಲಾ‍ ಪಂಚಾಯ್ತಿ ಸಿ.ಇ.ಒ ಅವರಿಗೆ ವರದಿ ನೀಡುವಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ನೀರಾವರಿ ನಿಗಮದ ಶಿಕಾರಿಪುರ ಶಾಖೆ ಹಾಗೂ ಜಂಟಿ ಕೃಷಿ ನಿರ್ದೇಶಕರಿಗೆ ತಿಳಿಸಲಾಗಿತ್ತು. ಆದರೆ, ಯಾರೂ ಹೋದಂತಿಲ್ಲ’ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ‘ತನಿಖೆ ನಡೆಸಲು ಆದೇಶ ಬಂದಿಲ್ಲ’ ಎಂದರು. ಈ ವಿಚಾರದಲ್ಲಿ ಹಲವು ಸದಸ್ಯರು ಆಕ್ಷೇಪಿಸಿದರು. ಈ ಬಗ್ಗೆ ಒಂದು ವಾರದಲ್ಲಿ ತಿಳಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

‘ಪಾವಿನಕುರ್ವದಲ್ಲಿ ಸಮುದ್ರದ ಬದಿಯಲ್ಲಿ ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅಡಿಪಾಯ ತೆಗೆದು ಕಾಮಗಾರಿ ನಿಲ್ಲಿಸಲಾಗಿದೆ. ಟೆಂಡರ್ ಆದ ಕಾಮಗಾರಿಯನ್ನು ಏಕಾಏಕಿ ಯಾಕೆ ತಡೆಹಿಡಿಯಲಾಗಿದೆ’ ಎಂದು ಶಿವಾನಂದ ಹೆಗಡೆ ಕಡತೋಕ ಪ್ರಶ್ನಿಸಿದರು.

ಈ ಬಗ್ಗೆ ಮಾತನಾಡಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ‘ಅದರ ವಿನ್ಯಾಸ ಬದಲಾಗಬೇಕಿದೆ’ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಿವಾನಂದ ಹೆಗಡೆ, ‘ಉಸುಕಿನ ಪ್ರದೇಶದಲ್ಲಿ ನಡೆಯುವ ಕಾಮಗಾರಿ ಎಂದು ಮೊದಲೇ ಗೊತ್ತಿರಲಿಲ್ಲವೇ? ಅದರ ವಿನ್ಯಾಸ ಕೊಟ್ಟವರು ಯಾರು ಮತ್ತು ಅದರ ಹಿನ್ನೆಲೆಯೇನು ಎಂಬ ಬಗ್ಗೆ 15 ದಿನಗಳಲ್ಲಿ ತನಿಖೆಯಾಗಬೇಕು. ಇಲ್ಲದಿದ್ದರೆ ಧರಣಿ ಕೂರುತ್ತೇನೆ’ ಎಂದು ಪಟ್ಟುಹಿಡಿದರು. ಸ್ಥಳ ಪರಿಶೀಲನೆ ಮಾಡುವುದಾಗಿ ಅಧಿಕಾರಿ ಉತ್ತರಿಸಿದರು.

ಧರಣಿಯ ಎಚ್ಚರಿಕೆ

‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ₹ 5 ಶುಲ್ಕವಿದೆ. ಆದರೆ, ಸಿದ್ದಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ₹ 20 ಶುಲ್ಕ ಪಡೆಯಲಾಗುತ್ತಿದೆ. ಇದನ್ನು ಕಡಿಮೆ ಮಾಡದಿದ್ದರೆ ಸ್ಥಳೀಯರೊಂದಿಗೆ ಜಿಲ್ಲಾ ಪಂಚಾಯ್ತಿ ಕಚೇರಿಯೆದುರು ಧರಣಿ ಕೂರುತ್ತೇವೆ’ ಎಂದು ಸದಸ್ಯೆ ಸುಮಂಗಲಾ ನಾಯ್ಕ ಎಚ್ಚರಿಕೆ ನೀಡಿದರು.

ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ, ‘ಸಭೆ ನಡೆಸಿ ತೀರ್ಮಾನಕ್ಕೆ ಬರಬೇಕು. ಶುಲ್ಕವನ್ನು ಕಡಿಮೆ ಮಾಡುವಂತೆ ರಕ್ಷಾ ಸಮಿತಿಗೆ ಆದೇಶ ಮಾಡಿ’ ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

ಮಾಸ್ಕ್‌ಗೆ ನಿರ್ಲಕ್ಷ್ಯ

ಜಿಲ್ಲಾ ಪಂಚಾಯ್ತಿ ಸಭೆಗೆ ಹಲವು ಸದಸ್ಯರು ಗೈರು ಹಾಜರಾಗಿದ್ದರು. ಭಾಗವಹಿಸಿದ್ದ ಹಲವರು ಮುಖಗವಸು ಧರಿಸುವುದನ್ನು ಮರೆತಿದ್ದರೆ, ಕೆಲವರ ಮುಖಗವಸು ಗಲ್ಲಕ್ಕೆ ಜಾರಿತ್ತು. ಕೆಲವರಷ್ಟೇ ಸಭೆಯುದ್ದಕ್ಕೂ ಮುಖಗವಸು ಧರಿಸಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾ ಪಂಚಾಯ್ತಿ ಆಡಳಿತ ವಿಭಾಗದ ಕಾರ್ಯದರ್ಶಿ ನಾಗೇಶ ರಾಯ್ಕರ್ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು