ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಹಣಿಗೆ ಆಧಾರ್ ಜೋಡಣೆ: ರೈತರು ಸಹಕರಿಸಲು ತಹಶೀಲ್ದಾರ್ ಸೂಚನೆ

Published 28 ಜೂನ್ 2024, 13:55 IST
Last Updated 28 ಜೂನ್ 2024, 13:55 IST
ಅಕ್ಷರ ಗಾತ್ರ

ಸಿದ್ದಾಪುರ: ‘ಸರ್ಕಾರ ರೈತರ ಪಹಣಿ ಪತ್ರದ ಜತೆಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಕಾರ್ಯ ನಡೆಸುತ್ತಿದ್ದು, ರೈತರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ತಹಶೀಲ್ದಾರ ಎಂ.ಆರ್. ಕುಲಕರ್ಣಿ ಹೇಳಿದರು.

ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರ ಪಹಣಿಯ ಜತೆಗೆ ಆಧಾರ್ ಜೋಡಣೆಯ ‘ಆಧಾರ್ ಸೀಡಿಂಗ್’ ಅಭಿಯಾನ ರಾಜ್ಯದಾದ್ಯಂತ ನಡೆಯುತ್ತಿದೆ. ತಾಲ್ಲೂಕಿನಲ್ಲಿ ಈವರೆಗೆ ಶೇ 60ರಷ್ಟು ಆಧಾರ್ ಸೀಡಿಂಗ್ ಪ್ರಕ್ರಿಯೆ ಮುಗಿದಿದ್ದು, ಇನ್ನುಳಿದ ಶೇ 40ರಷ್ಟು ಪೂರ್ಣಗೊಳ್ಳಬೇಕಿದೆ’ ಎಂದರು.‌

‘ಪಹಣಿ ಪತ್ರದ ಜತೆಗೆ ಆಧಾರ್ ಜೋಡಣೆಯಿಂದಾಗಿ ಪಹಣಿ ಪತ್ರದಲ್ಲಿ ಯಾವುದೇ ಬದಲಾವಣೆಯಾದರೂ ಕೂಡಲೇ ರೈತರಿಗೆ ಮಾಹಿತಿ ಪೂರೈಕೆಯಾಗುತ್ತದೆ. ಆಧಾರ್ ಸೀಡಿಂಗ್ ಕಾರ್ಯ ಪೂರ್ಣಗೊಳಿಸಲು ರೈತರ ಆಧಾರ್‌ ಕಾರ್ಡ್‌ಗೆ ಜೋಡಣೆಯಾದ ಮೊಬೈಲ್ ನಂಬರಿಗೆ ಒಟಿಪಿ ರವಾನಿಸಲಾಗುತ್ತದೆ. ಅದನ್ನು ಆಧಾರ್ ಸೀಡಿಂಗ್‌ನಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಲೆಕ್ಕಿಗರಿಗೆ ನೀಡಬೇಕಾಗುತ್ತದೆ. ಜನರು ಒಟಿಪಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮ ಲೆಕ್ಕಿಗರು ಆಧಾರ್ ಸೀಡಿಂಗ್ ಪ್ರಕ್ರಿಯೆಗಾಗಿ ಕರೆ ಮಾಡಿದಾಗ ಒಟಿಪಿ ನೀಡಿ ಆಧಾರ್ ಸೀಡಿಂಗ್ ಪೂರ್ಣಗೊಳಿಸಲು ಸಹಕರಿಸಬೇಕು’ ಎಂದು ತಿಳಿಸಿದರು.

‘ಮಳೆ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಮನೆಯ ಪಕ್ಕದಲ್ಲಿರುವ ಗುಡ್ಡಗಳ ಮಣ್ಣನ್ನು ತೆಗೆದರೆ ಮಳೆಗಾಲದಲ್ಲಿ ಅಪಾಯ ನಿಶ್ಚಿತ. ಆದ್ದರಿಂದ ಅನುಮತಿ ಇಲ್ಲದೆ ಮಣ್ಣನ್ನು ತೆಗೆಯಬಾರದು. ಮಳೆಗಾಲದಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬೇಕು’ ಎಂದರು.

‘ಜೂನ್ 29ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಶಂಕರ ಮಠದಲ್ಲಿ ಶಾಸಕರ ನೇತೃತ್ವದಲ್ಲಿ ‘ಜನಸ್ಪಂದನ’  ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕುಂದು– ಕೊರತೆಗಳನ್ನು ಪರಿಹರಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಉಪ ತಹಶೀಲ್ದಾರ್ ಸಂಗೀತಾ ಭಟ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT