ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಸಸಿ ಪೋಷಣೆಯಲ್ಲಿ ಖುಷಿ ಕಾಣುವ ಯುವಕ

ಬಿ.ಎ. ಪದವೀಧರನ ಕೃಷಿಗಾಥೆ:ವರ್ಷಕ್ಕೆ ಸರಾಸರಿ 9 ಸಾವಿರ ಸಸಿ ಆರೈಕೆ
Last Updated 16 ಮಾರ್ಚ್ 2023, 21:30 IST
ಅಕ್ಷರ ಗಾತ್ರ

ಭಟ್ಕಳ: ಹೈಸ್ಕೂಲು ಓದುವ ವಯಸ್ಸಿನಲ್ಲಿ ಕೃಷಿ ಚಟುವಟಿಕೆ ಕಡೆ ಅಭಿರುಚಿ ಬೆಳೆಸಿಕೊಂಡ ಯುವಕ ಇಂದು ತನ್ನ 23ನೇ ವಯಸ್ಸಿನಲ್ಲಿ ಸಾವಿರಾರು ಅಡಿಕೆ ಸಸಿಗಳನ್ನು ಬೆಳೆಸಿ ರೈತರಿಗೆ ಮಾರಾಟ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ.

ತಾಲ್ಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಲಾನ್ ನಿವಾಸಿ ದೇವರಾಜ್ (ಪ್ರಥ್ವಿ) ಲಕ್ಷ್ಮಣ ನಾಯ್ಕ ತನ್ನ ವಿದ್ಯಾಭ್ಯಾಸದ ಜತೆಗೆ ಅಡಿಕೆ ಕೃಷಿಯಲ್ಲಿ ಸಾಧನೆ ಮಾಡಿದ ಯುವಕ. ಅಡಿಕೆ ಕೃಷಿಯ ಸಮಗ್ರ ಚಿತ್ರಣ ತೆರೆದಿಡುವ ಸಾಮರ್ಥ್ಯ ಹೊಂದಿರುವ ಅವರು ಬಿ.ಎ. ಪದವೀಧರ.

ಸ್ಥಳೀಯ ಹಾಗೂ ಹೈಬ್ರೀಡ್ ತಳಿಯ ಅಡಿಕೆ ಸಸಿಗಳನ್ನು ಕಸಿ ಮಾಡಿ ಬೆಳಸಿ, ಅವುಗಳನ್ನು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ಯುವಕ ಸ್ಥಳೀಯ ಅಡಿಕೆ ಸಸಿಗಳ ಪೋಷಣೆಯಿಂದ ಆಗುವ ಹೆಚ್ಚು ಅನುಕೂಲಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿ ಮಾರಾಟ ಮಾಡುತಿದ್ದಾರೆ.

ಭಟ್ಕಳ ಊರು, ಕುಮಟಾ ಮೂರೂರು, ಮಂಗಳ ಹಾಗೂ ಇಂಟರ್ ಮಂಗಳ ತಳಿ ಅಡಿಕೆಯನ್ನು ಕಸಿ ಮಾಡಿ ಸಸಿಗಳನ್ನು ಬೆಳೆಸುತ್ತಿದ್ದಾರೆ. 10ನೇ ತರಗತಿ ಓದುವ ಸಮಯದಲ್ಲಿ ನೂರು ಅಡಿಕೆಯನ್ನು ಕಸಿ ಮಾಡಿದ್ದರು. ಈಗ ವರ್ಷಕ್ಕೆ ಸರಾಸರಿ 9 ಸಾವಿರ ಸಸಿಗಳನ್ನು ಕಸಿ ಮಾಡಿ ಮಾರಾಟ ಮಾಡುತ್ತಿದ್ದಾರೆ.

‘ಹೈಬ್ರೀಡ್ ತಳಿಗಿಂತ ಭಟ್ಕಳ ಹಾಗೂ ಮೂರೂರು ತಳಿ ಸಸಿಗಳಿಂದ ಅತೀ ಹೆಚ್ಚು ಮತ್ತು ದೀರ್ಘ ಕಾಲದವರೆಗೆ ಇಳುವರಿ ಪಡೆಯಬಹುದು. ಮಂಗಳಾ ಹಾಗೂ ಇಂಟರ್ ಮಂಗಳಾ ತಳಿಗಳ ಸಸಿಗಳು ಶೀಘ್ರ ಫಲ ನೀಡಿದರೂ ಕ್ರಮೇಣ ಅದರ ಇಳುವರಿ ಕಡಿಯಾಗುತ್ತಾ ಹೋಗುತ್ತದೆ’ ಎನ್ನುತ್ತಾರೆ ದೇವರಾಜ್ ನಾಯ್ಕ.

‘ಅಡಿಕೆ ಸಸಿ ಬೆಳೆಸುವುದನ್ನು ಮೊದಲು ಹವ್ಯಾಸವಾಗಿ ಮಾಡಿಕೊಂಡಿದ್ದೆ. ಈಗ ಅದು ಜೀವನ ನಿರ್ವಹಣೆಗೂ ದಾರಿಮಾಡಿಕೊಟ್ಟಿದೆ. ತಾಲ್ಲೂಕಿನ ಬಹುತೇಕ ರೈತರು ಅಡಿಕೆ ಸಸಿಗಳನ್ನು ಖರೀದಿ ಮಾಡುತ್ತಿದ್ದಾರೆ. ಸಸಿಯ ಮಾರಾಟದ ಜತೆಗೆ ಅದರ ಬೆಳವಣಿಗೆಯ ಪ್ರತಿ ಹಂತದ ಬಗ್ಗೆಯೂ ರೈತರಿಗೆ ಮಾಹಿತಿ ನೀಡುತ್ತಿದ್ದೇನೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT