ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೊಯಿಡಾ | ಸೇತುವೆ ಮುಳುಗಡೆ: ಗ್ರಾಮಸ್ಥರು ಅತಂತ್ರ

ರಸ್ತೆಗಳನ್ನು ಆವರಿಸಿಕೊಂಡ ಸೂಪಾ ಜಲಾಶಯದ ಹಿನ್ನೀರು
ಜ್ಞಾನೇಶ್ವರ ದೇಸಾಯಿ
Published : 3 ಸೆಪ್ಟೆಂಬರ್ 2024, 5:17 IST
Last Updated : 3 ಸೆಪ್ಟೆಂಬರ್ 2024, 5:17 IST
ಫಾಲೋ ಮಾಡಿ
Comments

ಜೊಯಿಡಾ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಸೂಪಾ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಆಗುತ್ತಿದ್ದು, ಜಲಾಶಯ ಸಂಪೂರ್ಣವಾಗಿ ಭರ್ತಿಯಾಗುವ ಹಂತ ತಲುಪಿದೆ. ಇದರ ಪರಿಣಾಮ ಹಿನ್ನೀರು ಎಲ್ಲೆಡೆ ಆವರಿಸಿದೆ. ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆಗಳು ಜಲಾವೃತಗೊಂಡು ಹತ್ತಕ್ಕೂ ಹೆಚ್ಚು ಗ್ರಾಮಗಳ ಜನರು ಪರದಾಡುವಂತಾಗಿದೆ.

ಕಾಳಿ ನದಿಗೆ ಉಳವಿ-ಗೋವಾ ಗಡಿಯ ರಾಜ್ಯ ಹೆದ್ದಾರಿಯ ಕಾಳಪೆ ಗ್ರಾಮದಲ್ಲಿ ನಿರ್ಮಿಸಿದ ಸೇತುವೆಯ ಎರಡೂ ಬದಿಯಲ್ಲಿ ನೀರು ತುಂಬಿಕೊಂಡಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಇದರಿಂದ ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಗ್ಗಿ, ಬೊಂಡೇಲಿ, ಅಸುಳಿ, ಕರಂಜೆ, ದುದಮಳಾ, ಸಿಸೈ, ಮಾಯರೆ, ಕಡ್ನೆ, ಸೋಲಿಯೆ ಸೇರಿ ಸುತ್ತಮುತ್ತಲ ಗ್ರಾಮಗಳ ಜನರು ಗ್ರಾಮದಿಂದ ಹೊರಕ್ಕೆ ಬರಲು ಸಾಧ್ಯವಾಗುತ್ತಿಲ್ಲ.

‘ಕಾಳಪೆ ಸೇತುವೆ ಮುಳುಗಡೆಯಾಗಿದ್ದು, ಜನ ಬಜಾರಕುಣಂಗ, ಕ್ಯಾಸಲ್ ರಾಕ್‌ನಿಂದ ಜೊಯಿಡಾ, ಕುಂಬಾರವಾಡಾಕ್ಕೆ ಸಂಚರಿಸುತ್ತಾರೆ. ಕೆಲ ಕಡೆ ಕಾಲುಸಂಕದ ಮೂಲಕ ಹಳ್ಳ ದಾಟಬೇಕಿದೆ. 35 ಕಿ.ಮೀ ದೂರದ ಜೊಯಿಡಾಕ್ಕೆ 80 ಕಿ.ಮೀ ಸುತ್ತು ಬಳಸಿ, ಓಡಾಡಬೇಕಿದೆ’ ಎಂದು ದುದಮಳಾದ ಮಹಾದೇವ ಮಿರಾಶಿ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿಗ್ಗಿ ಭಾಗದ ಜನರ ಸಮಸ್ಯೆ ಗೊತ್ತಾಗಿದೆ. ದೋಣಿ ವ್ಯವಸ್ಥೆಗಾಗಿ ಜಿಲ್ಲಾಡಳಿತ ನೆರವು ಕೋರಲಾಗಿದೆ. ಗಣೇಶಗುಡಿ ರ‍್ಯಾಪ್ಟಿಂಗ್ ಅಸೋಸಿಯೇಷನ್ ಜೊತೆ ದೋಣಿಗಾಗಿ ಚರ್ಚೆ ನಡೆದಿದೆ.
ಮಂಜುನಾಥ ಮುನ್ನೊಳ್ಳಿ, ತಹಶೀಲ್ದಾರ್ ಜೊಯಿಡಾ

‘₹6 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಾಳಿ ನದಿ ಸೇತುವೆಯ ಎರಡೂ ಬದಿ ರಸ್ತೆ ಕಾಮಗಾರಿ ಸಮರ್ಪಕವಾಗಿಲ್ಲ. ಅವೈಜ್ಞಾನಿಕವಾಗಿ ಕಾಮಗಾರಿಯಿಂದ ಜಲಾಶಯ ಭರ್ತಿಯಾದ ಕೂಡಲೇ ರಸ್ತೆಗಳು ಜಲಾವೃತವಾಗುತ್ತವೆ’ ಎಂದರು.

‘ಗಣೇಶ ಚತುರ್ಥಿಗೆ ಸಾಮಾಗ್ರಿಗಳನ್ನು ತರಬೇಕು. ಮಾರುಕಟ್ಟೆಗೆ ಹೋಗಲು ಆಗುತ್ತಿಲ್ಲ. ದೂರದೂರದ ಊರುಗಳಲ್ಲಿ ವಾಸವಿರುವ ಸಂಬಂಧಿಕರು ಹಬ್ಬಕ್ಕೆ ಮನೆಗೆ ಬರುವುದು ಕಷ್ಟವಿದೆ’ ಎಂದು ಕರಂಜೆಯ ಅನಂತ ದೇಸಾಯಿ ಹೇಳಿದರು.

ಜೊಯಿಡಾ ತಾಲ್ಲೂಕಿನ ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಂಜೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೂಪಾ ಜಲಾಶಯದ ಹಿನ್ನೀರಿನಿಂದ ಮುಳುಗಡೆ ಆಗಿರುವುದು
ಜೊಯಿಡಾ ತಾಲ್ಲೂಕಿನ ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಂಜೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೂಪಾ ಜಲಾಶಯದ ಹಿನ್ನೀರಿನಿಂದ ಮುಳುಗಡೆ ಆಗಿರುವುದು
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನಲ್ಲಿ ನಿಂತ ನೀರಿನಲ್ಲಿ ವಾಹನ ಸಾಗುತ್ತಿರುವುದು
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನಲ್ಲಿ ನಿಂತ ನೀರಿನಲ್ಲಿ ವಾಹನ ಸಾಗುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT