
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಕಳೆದ ಒಂದು ದಶಕದಿಂದ ಅನುಸರಿಸಿಕೊಂಡು ಬಂದಿರುವ ಸ್ಥಿರ ಆರ್ಥಿಕ ನೀತಿಗಳ ಮುಂದುವರಿಕೆ ಈ ಬಜೆಟ್‌ನಲ್ಲಿ ಎದ್ದು ಕಾಣುತ್ತಿದ್ದು, ಇದು 2047ರ ವೇಳೆಗೆ ಭಾರತವನ್ನು ‘ವಿಕಸಿತ ರಾಷ್ಟ್ರ’ವನ್ನಾಗಿ ಮಾಡುವ ಭದ್ರ ಬುನಾದಿಯಾಗಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೊಸ ಚೈತನ್ಯ ನೀಡಿದೆ. ರೈತರ ಆದಾಯ ಹೆಚ್ಚಿಸಲು ಅಧಿಕ ಮೌಲ್ಯದ ಬೆಳೆಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ
ಬಜೆಟ್‍ನಲ್ಲಿ ಜನತೆಗೆ ಗಮನಾರ್ಹ ಕೊಡುಗೆಗಳನ್ನು ನೀಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಧ್ಯಮವರ್ಗ ಹಾಗೂ ಬಡವರು ಸೇರಿದಂತೆ ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ನಿಂತಿದೆ. ಕ್ಯಾನ್ಸರ್ ಹಾಗೂ ಇತರ ಕಾಯಿಗೆಗಳ ಔಷಧಿಗಳು, ಮೊಬೈಲ್ ಮತ್ತಿತರ ದರಗಳ ಇಳಿಕೆ ಶ್ಲಾಘನೀಯ ಕ್ರಮವಾಗಿದೆ. ಮೀನುಗಾರಿಕೆ, ಪಶು ಸಂಗೋಪನೆ, ಗೋಡಂಬಿ ಬೆಳೆಗೆ ಬೆಂಬಲ, ತೆಂಗು ಬೆಳೆಗಾರರಿಗೆ ಉತ್ತೇಜನದ ಲಾಭ ನಮ್ಮ ಜಿಲ್ಲೆಗೂ ಆಗಲಿದೆ.ರೂಪಾಲಿ ನಾಯ್ಕ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ
ಕೇಂದ್ರ ಬಜೆಟ್‍ನಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ತಕ್ಷಣಕ್ಕೆ ನಿವಾರಿಸುವ ಯಾವುದೇ ಪರಿಹಾರ ಸೂಚಿಸಿಲ್ಲ. ರೈತರಿಗೆ ಬೆಂಬಲ ಬೆಲೆ, ಸಾಲಮನ್ನಾ, ನೀರಾವರಿ ಯೋಜನೆಗಳಿಗೆ ಸ್ಪಷ್ಟ ಹಾಗೂ ಪರ್ಯಾಯ ಹಣಕಾಸು ವ್ಯವಸ್ಥೆ ಕಾಣುತ್ತಿಲ್ಲ. ಪರ್ಯಟನಾ ವಿಭಾಗಕ್ಕೆ ಹೆಚ್ಚು ಅನುದಾನ ಮೀಸಲಿಟ್ಟಿದ್ದರೂ ನಮ್ಮ ರಾಜ್ಯಕ್ಕೆ ಒಂದೇ ಒಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಪ್ರಸ್ತಾಪ ಇಲ್ಲ.ಕೆ.ಶಂಭು ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ
ಭದ್ರತಾ ವಹಿವಾಟು ತೆರಿಗೆಯನ್ನು ಶೇ 0.02ನಿಂದ ಶೇ 0.05ಗೆ ಏರಿಕೆ ಮಾಡಿರುವುದು ಶೇರು ಮಾರುಕಟ್ಟೆಯ ಹೂಡಿಕೆ ಮೇಲೆ ಅಡ್ಡ ಪರಿಣಾಮ ಬೀರಬಹುದು. ಇದರಿಂದ ಕ್ರಿಪ್ಟೊ ಕರೆನ್ಸಿ ಸೇರಿದಂತೆ ವಿದೇಶಿ ಮಾರುಕಟ್ಟೆಗಳಲ್ಲಿ ಹೂಡಿಕೆ ಹೆಚ್ಚಬಹುದು. ಇದು ನೇರವಾಗಿ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆಜಗದೀಶ ಬಿರ್ಕೋಡಿಕರ್ ಕಾರವಾರ, ತೆರಿಗೆ ಸಲಹೆಗಾರ
ಕೇಂದ್ರ ಬಜೆಟ್ ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ನಾಶಗೊಳಿಸಲು ರೂಪಿಸಿರುವ ಒಂದು ವಂಚನೆಯ ನೀಲನಕ್ಷೆ. ಡಿಜಿಟಲ್ ಮೂಲಸೌಕರ್ಯ ಎಂಬ ಸರ್ಕಾರದ ವಾದವು ಭ್ರಮೆಯಾಗಿದೆ. ಮೂಲಭೂತ ಸೌಕರ್ಯಗಳೇ ಇಲ್ಲದ ಗ್ರಾಮೀಣ ಭಾರತದ ಲಕ್ಷಾಂತರ ವಿದ್ಯಾರ್ಥಿಗಳ ವಾಸ್ತವವನ್ನು ಇದು ನಿರ್ಲಕ್ಷಿಸಿದೆ.ಶಶಿಕಲಾ ಮೇಟಿ, ಎಐಡಿಎಸ್ಒ ಜಿಲ್ಲಾ ಸಂಚಾಲಕಿ
ಕರ್ನಾಟಕ ಕರಾವಳಿಯಲ್ಲಿ ಟ್ರೆಕ್ಕಿಂಗ್ ಮಾರ್ಗ ಅಭಿವೃದ್ಧಿ ಯೋಜನೆ ಬಜೆಟ್‍ನಲ್ಲಿ ಘೋಷಿಸಿರುವುದು, ಪ್ರವಾಸೋಧ್ಯಮದ ಬೆಳೆವಣಿಗೆಗೆ ಉತ್ತೇಜನ ಸಿಗಬಹುದು. ಇದರಿಂದ ಜಿಲ್ಲೆಯ ಕರಾವಳಿ ಭಾಗದ ಅಭಿವೃದ್ಧಿಗೆ ಅನುಕೂಲ ಆಗಬಹುದು.ಗೋವಿಂದ ಗೌಡ ಗೋಕರ್ಣ, ಹೋಟೆಲ್ ಉದ್ಯಮಿ
ಕೇಂದ್ರ ಸರ್ಕಾರದ ಬಜೆಟ್ ಸ್ವಾವಲಂಬನೆ ಸಾಧಿಸುವ ಬಜೆಟ್ ಆಗಿದೆ. ಕೃತಕ ಬುದ್ದಿಮತ್ತೆ, ರಾಜ್ಯದ ಕರಾವಳಿ ಪ್ರವಾಸೋದ್ಯಮ, ಆಯುರ್ವೇದ ಕ್ಷೇತ್ರಗಳಿಗೆ ಉತ್ತೇಜನ ನೀಡಲಾಗಿದೆ. ಇವುಗಳ ಜತೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದರೆ ಇನ್ನಷ್ಟು ಅನುಕೂಲ ಆಗುತ್ತಿತ್ತು.ಜಿ.ಜಿ.ಹೆಗಡೆ ಕಡೇಕೊಡಿ, ವ್ಯಾಪಾರಸ್ಥರ ಸಂಘದ ಶಿರಸಿ ಘಟಕದ ಅಧ್ಯಕ್ಷ
ದೇಶದ ಕನಸನ್ನು ಸಾಕಾರಗೊಳಿಸುವ ಮತ್ತು ಅಭಿವೃದ್ಧಿ ಪಥದ ಬಜೆಟ್ ಆಗಿದೆ. ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತಕ್ಕೆ ಪೂರಕ ಬಜೆಟ್. ಖೇಲೋ ಇಂಡಿಯಾ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಹಾಗೂ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಯುವ ಮತ್ತು ನಾರಿ ಶಕ್ತಿಗೆ ಪೇರಕರವಾಗಿದೆ.ಗುರುಮಠಪತಿ ದಾಂಡೇಲಿ, ಸಾಮಾಜಿಕ ಕಾರ್ಯಕರ್ತ
ಬಜೆಟ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ. ವಿದೇಶಿ ಯಾತ್ರೆಗೆ ಇದ್ದ ಟಿಸಿಎಸ್ ಮೊತ್ತವನ್ನು ಇಳಿಸಿರುವುದರಿಂದ ವಿದೇಶ ಪ್ರವಾಸ ಪ್ಯಾಕೇಜ್ ಅಗ್ಗವಾಗಲಿದೆ.ಸತೀಶ ಹೆಬ್ಬಾರ ಯಲ್ಲಾಪುರ, ಉದ್ಯಮಿ
ಇಂದಿನ ಯುವ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅದನ್ನು ನಿಯಂತ್ರಿಸಲು ಮದ್ಯ ಮತ್ತು ಸಿಗರೇಟ್ ದರ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಅದು ಅವಶ್ಯಕವಾಗಿತ್ತು. ಉದ್ಯೋಗ ಸೃಷ್ಟಿಗೆ ಹೊಸ ಯೋಜನೆಗಳು ಬೇಕಿತ್ತು. ದೇಶ ಸಾಲದ ಮೇಲಿನ ಅವಲಂಬನೆ ಮುಂದುವರಿದಿದೆ.ರಾಘವೇಂದ್ರ ದೇಸಾಯಿ ಜೊಯಿಡಾ, ಉಪನ್ಯಾಸಕ
ಸರಳ ಪ್ರತ್ಯಕ್ಷ ತೆರಿಗೆ ನೀತಿ, ಮೂಲಸೌರ‍್ಯ ಅಭಿವೃದ್ಧಿ, ಕೃಷಿ, ವೈದ್ಯಕೀಯ, ಉನ್ನತ ಶಿಕ್ಷಣದ ಮೂಲಕ ಕೌಶಲ್ಯ ಮತ್ತು ಆವಿಷ್ಕಾರ, ಖಾಸಗಿ ವಲಯದ ಭಾಗವಹಿಸುವಿಕೆ ಉತ್ತೇಜಕಗಳು, ಪ್ರವಾಸೋದ್ಯಮದಲ್ಲಿ ಉದ್ಯೋಗಾವಕಾಶಗಳಿಗೆ ಬಜೆಟ್ ಪ್ರಮುಖ ಆದ್ಯತೆ ನಿಡಿದೆ. ರಕ್ಷಣೆ, ರೈಲ್ವೆ, ಮೂಲಸೌಕರ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಷೇರುಗಳು ಮಾರುಕಟ್ಟೆ ಆಕರ್ಷಣೆ ಪಡೆಯುವ ನಿರಿಕ್ಷೆ ಇದೆ.ರೋಹಿತ್ ಡಿಸಿಲ್ವಾ ಹೊನ್ನಾವರ, ಉಪನ್ಯಾಸಕ
ಮೆಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ ಮಹಾ ಮೋಸ. ಇಡೀ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಅರ್ಪಿಸಿ, ಈ ಬಜೆಟ್‍ನಲ್ಲಿ ರೈತರ ಕೃಷಿ ಬದಲಾಗಿ ಕಂಪನಿ ಕೃಷಿ ಮಾಡಲು ಹೊರಟಿದ್ದಾರೆ. ಕಿಸಾನ್ ನಿಧಿ ಹೆಚ್ಚಿಸಿಲ್ಲ. ಗ್ರಾಮೀಣ ಯುವ ಜನರಿಗೆ ಉದ್ಯೋಗ ಕೊಡುವ ಯಾವುದೇ ನಿರ್ದಿಷ್ಟ ಯೋಜನೆ ಇಲ್ಲ. ಸದ್ಯ ಲಭ್ಯವಿರುವ ಅವಕಾಶಗಳು ಕೂಡಾ ಕುಸಿತವಾಗಲಿದೆ.ಶಾಂತಾರಾಮ ನಾಯಕ ಅಂಕೋಲಾ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ
ಅಪಘಾತ ಪರಿಹಾರ ಬಡ್ಡಿ ಮೊತ್ತ ತೆರಿಗೆ ಮುಕ್ತವಾಗಿರುವುದು ಜನ ಸಾಮಾನ್ಯರಿಗೆ ತೀರಾ ಅನುಕೂಲ. ಸಣ್ಣ , ಮಧ್ಯಮ ಉದ್ಯಮಿಗಳ ಖರೀದಿಗೆ ಟಿಆರ್‌ಇಡಿಎಸ್ ಪ್ಲಾಟ್ ಫಾರ್ಮ್ ಕಡ್ಡಾಯ ಮಾಡಿರುವುದು ಉದ್ಯಮಗಳ ರಕ್ಷಣೆಗೆ ಹೊಸ ಬೆಳವಣಿಗೆ.ಗುರುರಾಜ ಶೆಟ್ಟಿ ಕುಮಟಾ, ಉದ್ಯಮಿ
ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಬಹಳಷ್ಟು ನಿರೀಕ್ಷೆಗಳಿದ್ದವು. ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆಗಳಿಲ್ಲ. ಹೊಸ ತೆರಿಗೆ ನೀತಿಯನ್ನು ಏ.1ರಿಂದ ಜಾರಿ ಮಾಡಲು ಹೊರಟಿರುವುದು ಸ್ವಾಗತಾರ್ಹ. ಸಾಮಾನ್ಯ ಜನರ ಮೇಲೆ ಹೊರೆಯಾಗದ ಬಜೆಟ್ ಇದಾಗಿದೆ.ನಾಗಭೂಷಣ ಹೆಗಡೆ ಮುಂಡಗೋಡ, ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.