ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಪ್ರಯಾಣಿಕರಿಂದ ದೂರವಾದ ಬಸ್ ತಂಗುದಾಣ

Published 20 ನವೆಂಬರ್ 2023, 5:56 IST
Last Updated 20 ನವೆಂಬರ್ 2023, 5:56 IST
ಅಕ್ಷರ ಗಾತ್ರ

ಕಾರವಾರ: ಮಹಿಳೆಯರಿಗೆ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆ ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಆದರೆ, ಬಸ್‍ಗಾಗಿ ಕಾಯಲು ಮಹಿಳೆಯರು, ಇತರ ಪ್ರಯಾಣಿಕರಿಗೆ ಸೂಕ್ತ ತಂಗುದಾಣ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ನಿರ್ಲಕ್ಷ್ಯ ಹೆಚ್ಚಿದೆ ಎಂಬುದು ಜನರ ದೂರು.

ಇದಕ್ಕೆ ನಿದರ್ಶನ ಎಂಬಂತಿದೆ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿರುವ ತಂಗುದಾಣಗಳ ಇಂದಿನ ದುಸ್ಥಿತಿ. ನೂರಾರು ತಂಗುದಾಣಗಳು ಪಾಳುಬಿದ್ದ ಕಟ್ಟಡವಾಗಿದ್ದು, ಜಾನುವಾರುಗಳ ವಾಸದ ಅಡ್ಡೆಯಾಗಿ ಮಾರ್ಪಟ್ಟಿದೆ. ಅಗತ್ಯವಿರುವ ಕಡೆಯಲ್ಲಿ ತಂಗುದಾಣ ನಿರ್ಮಿಸಿಕೊಡಿ ಎಂಬ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ.

ಕಾರವಾರ–ಭಟ್ಕಳ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಲುವಾಗಿ ಹತ್ತಾರು ತಂಗುದಾಣಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಬೆರಳೆಣಿಕೆಯಷ್ಟು ತಂಗುದಾಣ ಮಾತ್ರ ಮರುನಿರ್ಮಾಣವಾಗಿದೆ. ಬಹುತೇಕ ಕಡೆಯಲ್ಲಿ ತೆಂಗಿನ ಮಡಿಲಿನ ಚಪ್ಪರವೇ ಪ್ರಯಾಣಿಕರ ಪಾಲಿಗೆ ‘ಆಸರೆ’ಯಾಗಿದೆ.

ಹಳಿಯಾಳ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿರುವ ಬಸ್ ತಂಗುದಾಣಗಳು ಸೂಕ್ತ ನಿರ್ವಹಣೆ ಇಲ್ಲದೆ ಕಸ ಕಡ್ಡಿಗಳಿಂದ ತುಂಬಿವೆ. ಅನೇಕ ಬಸ್ ತಂಗುದಾಣನಗಳಿದ್ದರೂ  ನೆಪ ಮಾತ್ರಕ್ಕೆ ಇದ್ದು ತಂಗುದಾಣದಲ್ಲಿ ಯಾವುದೇ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ,ಸ್ವಚ್ಛತೆ ಇಲ್ಲದಿರುವುದರಿಂದ ಜನರು ತಂಗುದಾಣದ ಹೊರಗಡೆ ಕುಳಿತು ಬಸ್‍ಗೆ ಕಾಯುವ ಸ್ಥಿತಿ ಎದುರಾಗಿದೆ.

ಬಾಣಸಗೇರಿದಂತೆ ಹಲವೆಡೆ ತಂಗುದಾಣಗಳು ದ್ವಿಚಕ್ರ ವಾಹನ ಸವಾರರಿಗೆ ವಾಹನ ನಿಲುಗಡೆ ಮಾಡುವ ತಾಣವಾಗಿಯೂ ಮಾರ್ಪಟ್ಟಿದೆ. ಶಾಸಕ ಆರ್.ವಿ.ದೇಶಪಾಂಡೆ ಪ್ರಯತ್ನದಿಂದ ವಿವಿಧ ಕಂಪನಿಗಳ ಮುಖಾಂತರ ಸಾಮಾಜಿಕ ಹೊಣೆಗಾರಿಕೆ ಅಡಿ ಗ್ರಾಮೀಣ, ಪಟ್ಟಣ ಭಾಗದಲ್ಲಿ ನಿರ್ಮಿಸಿದ್ದ ತಂಗುದಾಣಗಳ ಆಸನಗಳು ಕಿತ್ತು ಹೋಗಿವೆ. ಪಟ್ಟಣದ ವಿವಿಧಡೆ ಬಸ್‌ ತಂಗುದಾಣಗಳನ್ನು ನಿರ್ಮಿಸಿದ್ದರೂ ತಂಗೂದಾಣಗಳ ಆಸನಗಳನ್ನು ಕಿತ್ತಿರುವುದು ಕಾಣಬರುತ್ತಿದೆ.

‘ಗ್ರಾಮದ ತಂಗುದಾಣ ಶಿಥಿಲಾವಸ್ಥೆಗೆ ತಲುಪಿರುವ ಬಗ್ಗೆ ಗ್ರಾಮ ಪಂಚಾಯಿತಿಯ ಗಮನಕ್ಕೆ ತರಲಾಗಿದೆ. ಆದರೆ ದುರಸ್ತಿಗೆ ಯಾವ ಕ್ರಮವೂ ಆಗಿಲ್ಲ. ತಂಗುದಾಣ ಬಳಕೆಗೂ ಹಿಂದೇಟು ಹಾಕಬೇಕಾದ ಸ್ಥಿತಿ ಇದೆ’ ಎಂದು ಬಿ.ಕೆ.ಹಳ್ಳಿ ಗ್ರಾಮದ ಪರಶುರಾಮ ಜೈವಂತ ಮಿರಾಶಿ ಹೇಳಿದರು.

ಯಲ್ಲಾಪುರ ತಾಲ್ಲೂಕಿನ ಉಮ್ಮಚ್ಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಾರೇಹಳ್ಳಿ ಮತ್ತು ಭರಣಿ ಕತ್ರಿಯ ಬಸ್ ತಂಗುದಾಣ ಪ್ರಯಾಣಿಕರು ಕುಳಿತುಕೊಳ್ಳಲಾಗದ ಸ್ಥಿತಿಯಲ್ಲಿದೆ.

ತಾರೇಹಳ್ಳಿ ಬಸ್ ತಂಗುದಾಣದಲ್ಲಿ ಚಾವಣಿಗೆ ಅಡಿಯಾಗಿ ಹಾಕಿದ ಜಂತಿ ಮುರಿದು ಬಿದ್ದ ಸ್ಥಿತಿಯಲ್ಲಿದೆ. ಭರಣಿ ಕತ್ರಿಯ ಬಸ್ ನಿಲ್ಣಾಣದ ಚಾವಣಿಯ ಪ್ಲಾಸ್ಟರ್ ಕಳಚಿ ಬೀಳುತ್ತಿದ್ದು ಕಬ್ಬಿಣದ ಸರಳುಗಳು ಕಾಣುತ್ತಿವೆ. ಇಂತದ್ದೇ ಸ್ಥಿತಿ ತಾಲ್ಲೂಕಿನ ಹತ್ತಾರು ಕಡೆಗಳಲ್ಲಿ ಕಾಣಸಿಗುತ್ತದೆ.

ಮುಂಡಗೋಡ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಹಲವು ಕಡೆ ಬಸ್‌ ತಂಗುದಾಣಗಳಿಲ್ಲ. ಕೆಲವೆಡೆ ಇದ್ದರೂ ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಅಂತಹ ಕಡೆಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳದೆ ರಸ್ತೆ ಬದಿಯೇ ನಿಂತು ಬಸ್‌ಗಳಿಗಾಗಿ ಕಾಯುತ್ತಿರುತ್ತಾರೆ.

ಇಂದೂರ, ಕಾವಲಕೊಪ್ಪ, ಕೊಪ್ಪ ಸೇರಿದಂತೆ ಕೆಲವೆಡೆ ಸುಸಜ್ಜಿತ ಬಸ್‌ ತಂಗುದಾಣಗಳಿಗೆ ಬೇಡಿಕೆಯಿದೆ. ಕಾತೂರ, ಪಾಳಾ ಗ್ರಾಮದ ತಂಗುದಾಣಗಳ ನಿರ್ವಹಣೆಗೆ ಒತ್ತಾಯ ಕೇಳಿಬರುತ್ತಿದೆ.

‘ಇಂದೂರ ಗ್ರಾಮದಲ್ಲಿ ಬಸ್‌ ನಿಲ್ದಾಣ ಇಲ್ಲದೇ ಜನರು ತೀವ್ರ ತೊಂದರೆ ಪಡುತ್ತಿದ್ದಾರೆ. ಜನರು ಅಂಗಡಿ ಕಟ್ಟೆಗಳ ಮೇಲೆ ಕುಳಿತುಕೊಳ್ಳುವುದು, ಮರದ ನೆರಳಿನಡಿ ನಿಂತು ಬಸ್‌ಗಳಿಗಾಗಿ ಕಾಯುತ್ತಿರುತ್ತಾರೆ. ನಿತ್ಯವೂ ನೂರಾರು ವಿದ್ಯಾರ್ಥಿಗಳು ಈ ಊರಿಂದ ತೆರಳುತ್ತಾರೆ. ಬಸ್‌ ನಿಲ್ದಾಣದ ಬೇಡಿಕೆಗೆ ಸೂಕ್ತವಾಗಿ ಸ್ಪಂದನೆ ಸಿಗುತ್ತಿಲ್ಲ’ ಎಂದು ಗ್ರಾಮಸ್ಥ ಯಮನಪ್ಪ ಹೇಳುತ್ತಾರೆ.

ಹೊನ್ನಾವರ ತಾಲ್ಲೂಕಿನ ಹಲವೆಡೆ ಬಸ್ ತಂಗುದಾಣ ನಿರ್ಮಿಸಬೇಕೆಂಬುದು ಜನರ ಬೇಡಿಕೆ. ಆದರೆ ಅದಕ್ಕೆ ಮನ್ನಣೆ ಸಿಗುತ್ತಿಲ್ಲ. ಇದ್ದ ತಂಗುದಾಣಗಳನ್ನೂ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ತೋರಲಾಗುತ್ತಿರುವ ಆರೋಪಗಳು ಇವೆ.

ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾಗಿರುವ ತಂಗುದಾಣಗಳಿಗೆ ರೇಲಿಂಗ್ಸ್ ಕೂಡ ಅಳವಡಿಸಿರುವುದರಿಂದ ಬಿಡಾಡಿ ದನಗಳು ಒಳಗೆ ಪ್ರವೇಶಿಸುತ್ತಿಲ್ಲ. ಆದರೆ, ಬೀದಿ ನಾಯಿ, ಕುಡುಕರ ಹಾವಳಿ ಮಾತ್ರ ಇಲ್ಲಿ ತಪ್ಪಿಲ್ಲ. ಬೆರಳೆಣಿಕೆಯ ತಂಗುದಾಣಗಳಲ್ಲಿ ಸಾರ್ವಜನಿಕರೇ ಸ್ವಚ್ಛತೆ ಕಾಪಾಡಿಕೊಂಡಿದ್ದಾರೆ. ಚಿಕ್ಕನಕೋಡ ಗೋವಿಂದಮೂರ್ತಿ ದೇವಸ್ಥಾನಕ್ಕೆ ಸಮೀಪದ ಬಸ್ ತಂಗುದಾಣವನ್ನು ಸ್ಥಳೀಯರೇ ಸೇರಿ ದುರಸ್ತಿ ಮಾಡಿದ್ದು ಅಲ್ಲಿ ಸ್ವಚ್ಛತೆ ಕೂಡ ಇದೆ.

ಜೊಯಿಡಾ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿರುವ ಬಸ್ ತಂಗುದಾಣಗಳು ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿವೆ. ಕೆಲವು ಕಡೆ ತಂಗುದಾಣಕ್ಕೆ ಚಾವಣಿಯೆ ಇಲ್ಲವಾಗಿದೆ.

ಉಳವಿ, ಕುಂಬಾರವಾಡ, ಪೋಟೊಲಿ, ನಾಗೋಡಾ, ಕಾಳಸಾಯಿ, ಗಾಂಗೋಡಾ, ಕಾರ್ಟೊಳಿ ಹಾಗೂ ಜಗಲಪೇಟದಲ್ಲಿ ಸುಸಜ್ಜಿತ ಬಸ್ ತಂಗುದಾಣದ ಅವಶ್ಯಕತೆ ಇದ್ದರೂ ನಿರ್ಮಾಣದ ಕೆಲಸ ನಡೆದಿಲ್ಲ. ಬಾಡಪೋಲಿ ಬಸ್ ನಿಲ್ದಾಣದ ಗೋಡೆಗಳು  ಕುಸಿದು ಎರಡು ವರ್ಷ ಕಳೆದಿದ್ದು ಹಲವು ಬಾರಿ ಅಣಶಿ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದರೂ ದುರಸ್ತಿ ಕಾರ್ಯ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇಲ್ಲಿನ ಸಂತೋಷ ವೇಳಿಪ, ಬಾಬು ದೇಸಾಯಿ.

ಬಹುತೇಕ ಕಡೆಗಳಲ್ಲಿ ಬಸ್ ತಂಗುದಾಣ ಸುತ್ತ ಮುತ್ತಲು ಗಿಡ ಗಂಟಿಗಳು ಬೆಳೆದಿವೆ. ಜೊಯಿಡಾ, ರಾಮನಗರ ಹಾಗೂ ಜಗಲಪೇಟ  ಅಕ್ಕಪಕ್ಕದ  ಕೆಲವು ಬಸ್ ತಂಗುದಾಣಗಳು ಕುಡುಕರ ಅಡ್ಡೆಗಳಾಗಿದ್ದು ಅವುಗಳು ಸ್ವಚ್ಛತೆ ಇಲ್ಲದೆ ಬಳಲುತ್ತಿವೆ.

‘ಗ್ರಾಮ ಪಂಚಾಯ್ತಿ ವತಿಯಿಂದ ದುರಸ್ತಿ ಮಾಡಲು ಸಾಧ್ಯವಿರುವ ಬಸ್ ತಂಗುದಾಣಗಳನ್ನು ದುರಸ್ತಿ ಮಾಡಲಾಗುವುದು’ ಎಂದು ತಾಲ್ಲೂಕು ಪಂಚಾಯ್ತಿ ಇಒ ಆನಂದ ಬಡಕುಂದ್ರಿ ಹೇಳುತ್ತಾರೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ರವಿ ಸೂರಿ, ವಿಶ್ವೇಶ್ವರ ಗಾಂವ್ಕರ್, ಜ್ಞಾನೇಶ್ವರ ದೇಸಾಯಿ.

ಯಲ್ಲಾಪುರ ತಾಲ್ಲೂಕಿನ ತಾರೇಹಳ್ಳಿ ಗ್ರಾಮದ ಬಸ್ ತಂಗುದಾಣದ ಚಾವಣಿಗೆ ಅಳವಡಿಸಿದ್ದ ಮರದ ಜಂತಿ ಮುರಿದು ಬಿದ್ದಿದೆ
ಯಲ್ಲಾಪುರ ತಾಲ್ಲೂಕಿನ ತಾರೇಹಳ್ಳಿ ಗ್ರಾಮದ ಬಸ್ ತಂಗುದಾಣದ ಚಾವಣಿಗೆ ಅಳವಡಿಸಿದ್ದ ಮರದ ಜಂತಿ ಮುರಿದು ಬಿದ್ದಿದೆ
ಗೋಕರ್ಣ ಬಸ್ ನಿಲ್ದಾಣದಲ್ಲಿರುವ ಕುಡಿಯುವ ನೀರಿನ ಘಟಕ ಶುಚಿತ್ವ ಇಲ್ಲದಿರುವುದು
ಗೋಕರ್ಣ ಬಸ್ ನಿಲ್ದಾಣದಲ್ಲಿರುವ ಕುಡಿಯುವ ನೀರಿನ ಘಟಕ ಶುಚಿತ್ವ ಇಲ್ಲದಿರುವುದು
ಜೊಯಿಡಾ ತಾಲ್ಲೂಕಿನ ಬಾಡಪೋಲಿ ಬಸ್ ತಂಗುದಾಣ ನಿರ್ವಹಣೆ ಇಲ್ಲದೆ ದುಸ್ಥಿತಿಯಲ್ಲಿದೆ
ಜೊಯಿಡಾ ತಾಲ್ಲೂಕಿನ ಬಾಡಪೋಲಿ ಬಸ್ ತಂಗುದಾಣ ನಿರ್ವಹಣೆ ಇಲ್ಲದೆ ದುಸ್ಥಿತಿಯಲ್ಲಿದೆ
ಸ್ವಚ್ಛತೆ ಸಪ್ತಾಹ ನಡೆದಾಗಲೊ ಅಥವಾ ಇನ್ಯಾವುದೋ ವಿಶೇಷ ಸಂದರ್ಭದಲ್ಲಿ ಮಾತ್ರ ಬಸ್ ತಂಗುದಾಣ ಶುಚಿಗೊಳಿಸುವ ಪರಿಪಾಠವಿದೆ. ಅದರ ಬದಲು ನಿತ್ಯವೂ ತಂಗುದಾಣ ಶುಚಿಗೊಳಿಸುವ ಕೆಲಸ ನಡೆಯಬೇಕು
ವಿ.ವಿ.ರೆಡ್ಡಿ ಹಳಿಯಾಳ ವಕೀಲ
ತಾರೇಹಳ್ಳಿ ಹಾಗೂ ಭರಣಿ ಕತ್ರಿ ಬಸ್ ನಿಲ್ದಾಣದಲ್ಲಿ ಆಗಿರುವ ಅವ್ಯವಸ್ಥೆಯನ್ನು ದುರಸ್ತಿ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು
ಗಣಪತಿ ಹಾಸ್ಪುರ ಗ್ರಾಮಸ್ಥ
ಕಳೆದ ವರ್ಷ ತೊಪ್ಪಲಕೇರಿ ಹಾಗೂ ಕವಲಕ್ಕಿಯಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿದೆ. ಹೊಸ ತಂಗುದಾಣಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ
ರಾಘವೇಂದ್ರ ನಾಯ್ಕ ಎಇಇ ಪಂಚಾಯತ್ ರಾಜ್ ಎಂಜಿನಿಯರಿಂಗ್ ಹೊನ್ನಾವರ ವಿಭಾಗ
ಹೆದ್ದಾರಿ ವಿಸ್ತರಣೆಗೆ ತೆರವುಗೊಂಡಿರುವ ತಂಗುದಾಣಗಳನ್ನು ಮರುನಿರ್ಮಿಸಿಕೊಡದ ಪರಿಣಾಮ ಚೆಂಡಿಯಾ ತೊಡೂರು ಸೇರಿ ಬಹುತೇಕ ಕಡೆ ಜನರು ನೆರಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡು ತಂಗುದಾಣವಾಗಿ ಬಳಸುವ ಸ್ಥಿತಿ ಇದೆ. ಕೂಡಲೆ ತಂಗುದಾಣ ನಿರ್ಮಾಣವಾಗಬೇಕು.
ನರೇಂದ್ರ ತಳೇಕರ್ ಅಮದಳ್ಳಿ ಗ್ರಾಮಸ್ಥ
ಶುಚಿಯೊಂದಿಗೆ ಕಂಗೊಳಿಸುವ ತಂಗುದಾಣಗಳು
ಕಳೆದೆರಡು ತಿಂಗಳಿನಿಂದೀಚೆ ಶಿರಸಿ ತಾಲ್ಲೂಕಿನ ಬಹುತೇಕ ಬಸ್ ತಂಗುದಾಣಗಳು ಮಾದರಿ ಎಂಬಂತೆ ಕಂಗೊಳಿಸುತ್ತಿವೆ. ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ಬಸ್ ತಂಗುದಾಗಳಿದ್ದು ಎಲ್ಲವೂ ಸುಣ್ಣಬಣ್ಣ ಹೊಂದಿ ಸ್ವಚ್ಛವಾಗಿವೆ. ಗಾಂಧಿ ಜಯಂತಿಗೂ ಮುನ್ನ ಕೈಗೊಂಡ ಸ್ವಚ್ಛತಾ ಅಭಿಯಾನದ ಪರಿಣಾಮ ಇದಾಗಿದೆ. ಶಕ್ತಿ ಯೋಜನೆ ನಂತರ ಮಹಿಳೆಯರ ಬಸ್ ಪ್ರಯಾಣ ಹೆಚ್ಚಿದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಸ್ವಚ್ಛತೆ ಕಾರ್ಯ ನಡೆದಿತ್ತು. ‘ಇತ್ತೀಚಿನ ವರ್ಷಗಳಲ್ಲಿ ಬಸ್ ತಂಗುದಾಣ ಶುಭ್ರವಾಗಿ ಇರುವುದು ಇದೇ ಮೊದಲಾಗಿದೆ. ಕುಟುಂಬ ಸಹಿತ ಇಲ್ಲಿ ಬರಲು ಅಸಹ್ಯ ಉಂಟಾಗದು’ ಎನ್ನುತ್ತಾರೆ ಹುಲೇಕಲ್‍ನ ಪ್ರವೀಣ ಹೆಗಡೆ. ‘ಬಸ್ ತಂಗುದಾಣಗಳ ಸ್ವಚ್ಛತೆಯ ಜವಾಬ್ದಾರಿ ಆಯಾ ಗ್ರಾಮ ಪಂಚಾಯ್ತಿಗೆ ವಹಿಸಲಾಗಿತ್ತು. ಎಲ್ಲೆಡೆ ಅಚ್ಚುಕಟ್ಟಾಗಿ ಸೂಚನೆ ಪಾಲನೆಯಾಗಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಪ್ರಭಾರಿ ಇಒ ಸತೀಶ ಹೆಗಡೆ.
ದುರ್ನಾತ ಬೀರುವ ಗೋಕರ್ಣ ಬಸ್ ನಿಲ್ದಾಣ
ಪ್ರಸಿದ್ಧ ಪ್ರವಾಸಿ ಕ್ಷೇತ್ರ ಗೋಕರ್ಣದ ಬಸ್ ನಿಲ್ದಾಣದ ಸ್ಥಿತಿಯಂತೂ ಶೋಚನೀಯವಾಗಿದೆ. ನಿಲ್ದಾಣದ ಆವರಣ ಗಬ್ಬು ನಾರುತ್ತಿದೆ. ಕೈ ಮುಖ ತೊಳೆಯಲು ಸ್ಥಳ ಗುರುತಿಸಿದ್ದರೂ ನಲ್ಲಿಗೆ ನೀರಿನ ಸಂಪರ್ಕವಿಲ್ಲದೇ ಗುಟ್ಕಾ ಉಗಿಯುವ ಸ್ಥಳವಾಗಿ ಪರಿವರ್ತಿತವಾಗಿದೆ. ಬಸ್ ನಿಲ್ದಾಣದಲ್ಲಂತೂ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಸೇರಿದಂತೆ ಕಸದ ರಾಶಿಯೇ ಕಾಣ ಸಿಗುತ್ತದೆ. ‘ಶೌಚಾಲಯದಲ್ಲಂತೂ ಸ್ವಚ್ಛತೆಯೇ ಮಾಯವಾಗಿದೆ. ನಿರ್ವಹಣೆಗೆ ಹಣ ತೆಗೆದುಕೊಂಡರೂ ಕೆಲವೊಮ್ಮೆ ಗಬ್ಬು ವಾಸನೆ ಬರುತ್ತದೆ. ಅದಕ್ಕೆ ಪೂರೈಕೆಯಾಗುವ ನೀರು ತೆರೆದ ಬಾವಿಯಿಂದ ಪೂರೈಕೆಯಾಗುತ್ತಿದ್ದು ಬಾವಿಯೂ ಸ್ವಚ್ಛತೆ ಹೊಂದಿಲ್ಲ’ ಎನ್ನುತ್ತಾರೆ ಸ್ಥಳೀಯ ರೋಹಿದಾಸ ಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT