ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಚಿದ ದಶಕದ ಕೊಂಡಿ: ಸ್ವಾದಿ ದಿಗಂಬರ ಕ್ಷೇತ್ರದಲ್ಲಿ ನೀರವ ಮೌನ

Last Updated 23 ಮಾರ್ಚ್ 2023, 8:28 IST
ಅಕ್ಷರ ಗಾತ್ರ

ಶಿರಸಿ: ದಶಕದ ಹಿಂದೆ ಸ್ವಾದಿಯ ದಿಗಂಬರ ಜೈನ ಕ್ಷೇತ್ರದಲ್ಲಿ 22ನೇ ಪಟ್ಟಾಚಾರ್ಯವರ್ಯರಿಗೆ ಪಟ್ಟಾಭಿಷೇಕ ಮಾಡಿ, ಇಡೀ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದ್ದ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನದ ವಿಷಯ ತಿಳಿಯುತ್ತಿದ್ದಂತೆ ಇಡೀ ಮಠ ನೀರವ ಮೌನಕ್ಕೆ ಜಾರಿದೆ.

ತಾಲ್ಲೂಕಿನ ಸ್ವಾದಿ ಕ್ಷೇತ್ರದೊಂದಿಗೆ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವಿನಭಾವ ಸಂಬಂಧವಿತ್ತು. ಕ್ಷೇತ್ರದ 22ನೇ ಪಟ್ಟಾಚಾರ್ಯವರ್ಯ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕದ ನೇತೃತ್ವ ಕೂಡ ಅವರು ವಹಿಸಿದ್ದರು ಎಂಬುದು ವಿಶೇಷ.

ಜೈನ ಮಠದ 21ನೇ ಪಟ್ಟಾಚಾರ್ಯವರ್ಯರು ಮರಣ ಹೊಂದಿದ್ದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಉತ್ತಾರಾಧಿಕಾರಿ ನೇಮಕ ಮಾಡಲು ಮಠದ ಅಧಿಕಾರ ಹೊಂದಿರುವ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದರು. ಈ ಸಮಿತಿ ಸಮಸ್ತ ಜೈನ ಕ್ಷೇತ್ರಗಳಿಗೆ ಭೇಟಿ ನೀಡಿ ಅಂತಿಮವಾಗಿ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಮೂಲದ ಮಾಣಿಕ್ಯ ಸ್ವಾಮಿ ಸುಮತಿನಾಥ ಹಳ್ಳಿಯವರ ಅವರನ್ನು ಆಯ್ಕೆ ಮಾಡಿತ್ತು.

2013ರ ಫೆಬ್ರವರಿ ತಿಂಗಳಲ್ಲಿ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಅವರ ಪಟ್ಟಭಿಷೇಕ ನಡೆದಿತ್ತು. ಈ ವೇಳೆ ಸ್ವತಃ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಾಗಿಯಾಗಿದ್ದರು. ಸುಮಾರು 1 ತಿಂಗಳ ಕಾಲ ಸ್ವಾದಿಯಲ್ಲೇ ಉಳಿದು ನೂತನ ಸ್ವಾಮೀಜಿ ಅವರಿಗೆ ಮಾರ್ಗದರ್ಶನ ಮಾಡಿದ್ದರು. ನಂತರ ಸ್ವಾದಿ ಸ್ವಾಮೀಜಿ ಶ್ರವಣಬೆಳಗೊಳಕ್ಕೆ ತೆರಳಿದ ವೇಳೆ ಅದ್ಧೂರಿ ಸ್ವಾಗತ ಕೋರಿ ಸತ್ಕರಿಸಿದ್ದರು. ಪಟ್ಟಾಭಿಷೇಕದ ನಂತರ ಸ್ವಾದಿಯ ಕೂಷ್ಮಾಂಡಿನಿ ಅಮ್ಮನ ರಥ ಸಮರ್ಪಣೆ, ಉತ್ಸವಗಳಲ್ಲಿ ಚಾರುಕೀರ್ತಿ ಭಟ್ಟಾರಕರು ಸ್ವತಃ ಪಾಲ್ಗೊಂಡಿದ್ದರು. ಸ್ವಾದಿಯ ಸ್ವಾಮೀಜಿ ಅವರಿಗೆ ಧಾರ್ಮಿಕ, ವ್ಯಾವಹಾರಿಕ ವಿಷಯಗಳಲ್ಲಿ ಹೆಚ್ಚಿನ ಮಾರ್ಗದರ್ಶನ ಬೇಕಿದ್ದರೆ ಸಂಪರ್ಕಿಸುತ್ತಿದ್ದುದು ಶ್ರವಣಬೆಳಗೊಳದ ಸ್ವಾಮೀಜಿ ಅವರನ್ನಾಗಿತ್ತು. ಪ್ರಸ್ತುತ ದಶಕದ ನಂಟು ಕೊನೆಯಾಗಿದ್ದು, ಮಠದಲ್ಲಿ ನೀರವ ಮೌನ ಆವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT