ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಮುಂದಡಿ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವವರಿಗೆ ಚಿತ್ತಾಕುಲಾ ಗ್ರಾ.ಪಂ. ಸಹಕಾರ
Last Updated 17 ನವೆಂಬರ್ 2021, 4:49 IST
ಅಕ್ಷರ ಗಾತ್ರ

ಕಾರವಾರ: ಸೌರ ವಿದ್ಯುತ್ ಉತ್ಪಾದಿಸಿ ಹೆಸ್ಕಾಂಗೆ ಮಾರಾಟ ಮಾಡಿ ಗಮನ ಸೆಳೆದಿರುವ ಚಿತ್ತಾಕುಲಾ ಗ್ರಾಮ ಪಂಚಾಯಿತಿ, ಈಗ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲು ಮುಂದಡಿಯಿಟ್ಟಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಡ ವಿದ್ಯಾರ್ಥಿಗಳಿಗೆಇದರಿಂದ ಅನುಕೂಲವಾಗಲಿದೆ.

ಗ್ರಾಮ ಪಂಚಾಯಿತಿ ಕಚೇರಿಯ ಸಮೀಪದಲ್ಲೇ ಹಳೆಯ ಗ್ರಂಥಾಲಯ ಕಟ್ಟಡವಿದೆ. ಅದರಲ್ಲೇ ಕಂಪ್ಯೂಟರ್‌ಗಳನ್ನು ಅಳವಡಿಸಿ ಹೈಸ್ಪೀಡ್ ಇಂಟರ್‌ನೆಟ್, ವೈಫೈ ಸೌಲಭ್ಯಗಳ ಸಂಪರ್ಕ ನೀಡಲಾಗುತ್ತಿದೆ. ಗ್ರಂಥಾಲಯದ ಕಪಾಟಿನಲ್ಲಿ ಹಳೆಯ ಪುಸ್ತಕಗಳಿದ್ದು, ಒಂದಷ್ಟು ಹೊಸ ಪುಸ್ತಕಗಳನ್ನೂ ಖರೀದಿಸಲಾಗುತ್ತಿದೆ.

‘ಕಾರವಾರ, ಸದಾಶಿವಗಡ, ಚಿತ್ತಾಕುಲಾ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಯು.ಪಿ.ಎಸ್‌.ಸಿ, ಕೆ.ಪಿ.ಎಸ್‌.ಸಿ, ಪೊಲೀಸ್, ಬ್ಯಾಂಕಿಂಗ್, ಶಿಕ್ಷಕರ ನೇಮಕಾತಿ ಅಥವಾ ಮತ್ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಸೂಕ್ತ ಸೌಲಭ್ಯಗಳಿಲ್ಲ. ಮನೆಯಲ್ಲಿ ಅನುಕೂಲ ಇರುವ ವಿದ್ಯಾರ್ಥಿಗಳಾದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ, ಬಡ ಕುಟುಂಬಗಳ ಮಕ್ಕಳಿಗೆ ಅಧ್ಯಯನ ಮಾಡಲು ಅವಕಾಶ ಸೀಮಿತವಾಗಿದೆ. ಇದನ್ನು ನಿವಾರಿಸಲು ಡಿಜಿಟಲ್ ಗ್ರಂಥಾಲಯವನ್ನು ಆರಂಭಿಸಲಾಗುತ್ತಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಾತಿ ಸೂರಜ್ ದೇಸಾಯಿ.

‘ಸದ್ಯಕ್ಕೆ ಮೂರು ಕಂಪ್ಯೂಟರ್‌ಗಳನ್ನು ಅಳವಡಿಸಲಾಗುತ್ತಿದೆ. ಹಣಕಾಸು ಮುಂದಿನ ದಿನಗಳಲ್ಲಿ ಹಳೆಯ ಕಟ್ಟಡವನ್ನು ನವೀಕರಣಗೊಳಿಸಿ, ಹೆಚ್ಚು ವಿದ್ಯಾರ್ಥಿಗಳು ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನಗಳನ್ನು ಅಳವಡಿಸಲಾಗುವುದು. ಅಲ್ಲದೇ ಗ್ರಂಥಾಲಯ ಕಟ್ಟಡಕ್ಕೆ ಆವರಣ ಗೋಡೆ ನಿರ್ಮಿಸಿ, ಹೊರಗೆ ಹುಲ್ಲಿನ ಹಾಸು ಬೆಳೆಸಲಾಗುವುದು. ಅಲ್ಲಿ ಹಿರಿಯ ನಾಗರಿಕರಿಗೆ ಓದಲು ಅನುಕೂಲವಾಗುವಂತೆ ಪೀಠೋಪಕರಣಗಳನ್ನು ಹಾಗೂ ಆಕರ್ಷಕವಾಗಿ ಕಾಣುವಂತೆ ಡಿಜಿಟಲ್ ಫಲಕವನ್ನು ಅಳವಡಿಸಲು ಯೋಜಿಸಲಾಗಿದೆ’ ಎಂದು ವಿವರಿಸುತ್ತಾರೆ.

‘ಈಗ ಗ್ರಂಥಾಲಯಕ್ಕೆ ಬರುವವರಲ್ಲಿ ಬಹುತೇಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವವರು ಇರುತ್ತಾರೆ. ಅವರಿಗೆ ಅಧ್ಯಯನಕ್ಕೆ ಬೇಕಾದ ಸಾಕಷ್ಟು ಪುಸ್ತಕಗಳು ಸ್ಥಳೀಯವಾಗಿ ಸುಲಭವಾಗಿ ಸಿಗುತ್ತಿಲ್ಲ. ಈ ರೀತಿ ಸಾರ್ವಜನಿಕ ಗ್ರಂಥಾಲಯದಲ್ಲಿ ವ್ಯವಸ್ಥೆ ಮಾಡಿದರೆ ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಗ್ರಾಮದ ಯುವಕ ಸಂತೋಷ್ ರಾಯ್ಕರ್.

₹ 5 ಲಕ್ಷ ಅನುದಾನ:

‘ಗ್ರಂಥಾಲಯದ ನವೀಕರಣದ ಯೋಜನೆಯನ್ನು ವಿವರಿಸಿದಾಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಆನಂದಕುಮಾರ ಬಾಲಪ್ಪನವರ ಸಹಮತ ವ್ಯಕ್ತಪಡಿಸಿದರು. ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ತಾಲ್ಲೂಕು ಪಂಚಾಯಿತಿಯ 14ನೇ ಹಣಕಾಸು ಯೋಜನೆಯಿಂದ ₹ 5 ಲಕ್ಷ ಅನುದಾನ ಮಂಜೂರು ಮಾಡಿಸಿದರು’ ಎಂದು ಸ್ವಾತಿ ಸೂರಜ್ ದೇಸಾಯಿ ಸಂತಸ ವ್ಯಕ್ತಪಡಿಸುತ್ತಾರೆ.

*

ಡಿಜಿಟಲ್ ಗ್ರಂಥಾಲಯ ಪೂರ್ಣಗೊಂಡ ಬಳಿಕ ಚಿತ್ತಾಕುಲಾ ಮಾತ್ರವಲ್ಲದೇ ಸುತ್ತಮುತ್ತಲಿನ ಯಾವುದೇ ಗ್ರಾಮ, ಕಾರವಾರದಿಂದ ಬೇಕಾದರೂ ವಿದ್ಯಾರ್ಥಿಗಳು ಬರಬಹುದು.

- ಸ್ವಾತಿ ಸೂರಜ್ ದೇಸಾಯಿ, ಚಿತ್ತಾಕುಲಾ ಗ್ರಾ.ಪಂ ಅಧ್ಯಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT