ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಿ ನದಿ ಹಳೆಯು ಸೇತುವೆ ಕುಸಿತ: ಜೀವನೋಪಾಯಕ್ಕೆ ಅಡ್ಡಿಯಾದ ಅವಶೇಷ

ಸೇತುವೆ ಸುತ್ತಮುತ್ತ ಮೀನುಗಾರಿಕೆ ನಿಷೇಧ: ಸಂಚಾರಕ್ಕೂ ಸಮಸ್ಯೆ
Published : 15 ಆಗಸ್ಟ್ 2024, 7:06 IST
Last Updated : 15 ಆಗಸ್ಟ್ 2024, 7:06 IST
ಫಾಲೋ ಮಾಡಿ
Comments

ಕಾರವಾರ: ಇಲ್ಲಿನ ಕಾಳಿ ನದಿಯ ಹಳೆಯು ಸೇತುವೆ ಕುಸಿದು ಬಿದ್ದ ಬಳಿಕ ಸಂಚಾರ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸೇತುವೆಯ ಸುತ್ತಮುತ್ತ ಮೀನುಗಾರಿಕೆ ನಡೆಸುತ್ತಿದ್ದವರಿಗೆ ಹೊಟ್ಟೆಪಾಡಿನ ಚಿಂತೆ ಎದುರಾಗಿದೆ.

ಕಾಳಿ ನದಿಯ ಹಳೆಯ ಸೇತುವೆಯ ಮೇಲಿನಿಂದ ರಾತ್ರಿ ವೇಳೆ ಗಾಳಿ ಹಾಕಿ ಮೀನುಗಾರಿಕೆ ನಡೆಸಿ ಹತ್ತಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಸೇತುವೆಯ ತಳಭಾಗ, ಸುತ್ತಮುತ್ತ ಮೀನುಗಾರಿಕೆ ನಡೆಸುವದು ಹಲವು ಕುಟುಂಬಗಳಿಗೆ ಜೀವನೋಪಾಯವಾಗಿದೆ. ಅಳ್ವೆವಾಡಾ, ಗಾಬೀತವಾಡಾ, ತಾರಿವಾಡಾ, ನದಿವಾಡ ಸೇರಿದಂತೆ ಕೋಡಿಬಾಗ ಸುತ್ತಮುತ್ತಲಿನ ನೂರಾರು ಮೀನುಗಾರರು ನಿತ್ಯ ಇದೇ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ.

ಆದರೆ, ಆ.7 ರಂದು ತಡರಾತ್ರಿ ಸೇತುವೆ ಬಿದ್ದ ಬಳಿಕ ನದಿಯಲ್ಲಿ ಸೇತುವೆ ಅವಶೇಷಗಳು ಸಿಲುಕಿಕೊಂಡಿವೆ. ಇನ್ನೂ ಸುಮಾರು 200 ಮೀ.ನಷ್ಟು ಉದ್ದದ ಸೇತುವೆಯು ಕುಸಿಯುವ ಅಪಾಯದಲ್ಲಿದೆ. ಈ ಕಾರಣಕ್ಕೆ ಸೇತುವೆ ಸಮೀಪ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಲಾಗಿದೆ. ಮೀನು ದೊರೆಯಲು ಸೂಕ್ತವಾಗಿದ್ದ ಜಾಗದಲ್ಲಿ ಮೀನುಗಾರಿಕೆ ನಡೆಸಲು ಅಡ್ಡಿಯಾಗಿರವುದು ಮೀನುಗಾರರನ್ನು ಚಿಂತೆಗೆ ತಳ್ಳಿದೆ.

‘ಅಳ್ವೆವಾಡಾ ಭಾಗದ ಮೀನುಗಾರರಿಗೆ ಸಂಗಮ ಪ್ರದೇಶಕ್ಕೆ ಸಮೀಪದಲ್ಲಷ್ಟೆ ಮೀನುಗಾರಿಕೆ ನಡೆಸಲು ಆಗದು. ನಂದನಗದ್ದಾ, ಇನ್ನಿತರ ಪ್ರದೇಶದವರೆಗೂ ನದಿಯಲ್ಲಿ ತೆರಳಿ ಮೀನುಗಾರಿಕೆ ನಡೆಸಬೇಕಾಗುತ್ತದೆ. ಕಾಳಿ ಸೇತುವೆ ಕುಸಿದು ಬಿದ್ದಿರವುದರಿಂದ ಅತ್ತ ಸಾಗಲು ಸಾಧ್ಯವಾಗುತ್ತಿಲ್ಲ. ಸೇತುವೆ ಬಿದ್ದ ಜಾಗ ದಾಟಿ ಹೋಗಲು ಪೊಲೀಸರು ಬಿಡುತ್ತಿಲ್ಲ. ಇದರಿಂದ ಅಗತ್ಯ ಪ್ರಮಾಣದಲ್ಲಿ ಮೀನು ಸಿಗದೆ ಸಮಸ್ಯೆ ಉಂಟಾಗುತ್ತಿದೆ’ ಎನ್ನುತ್ತಾರೆ ಮೀನುಗಾರ ಸೂರಜ ಸಾರಂಗ.

‘ಪಾತಿ ದೋಣಿ ಮೂಲಕ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಕುಟುಂಬಗಳೇ ಕೋಡಿಬಾಗ ಪ್ರದೇಶದಲ್ಲಿ ಹೆಚ್ಚಿವೆ. ಸೇತುವೆ ಬಿದ್ದ ಬಳಿಕ ನದಿಯಲ್ಲಿ ಮೀನುಗಾರಿಕೆ ನಡೆಸಲು ಆತಂಕ ಉಂಟಾಗುತ್ತಿದೆ. ಗಾಳ ಹಾಕಿ ಮೀನು ಹಿಡಿಯಲು ಇದ್ದ ಆಸರೆಯನ್ನೂ ಕಳೆದುಕೊಂಡಿದ್ದೇವೆ’ ಎಂದು ನಾಗೇಶ ಮೇಥಾ ಹೇಳಿದರು. 

ಕಾಳಿ ನದಿಗೆ ಅಡ್ಡಲಾಗಿ ಬಿದ್ದಿರುವ ಸೇತುವೆ ಅವಶೇಷ
ಕಾಳಿ ನದಿಗೆ ಅಡ್ಡಲಾಗಿ ಬಿದ್ದಿರುವ ಸೇತುವೆ ಅವಶೇಷ
ಸುರಕ್ಷತೆ ದೃಷ್ಟಿಯಿಂದ ಕುಸಿದು ಬಿದ್ದ ಕಾಳಿ ಸೇತುವೆ ಕೆಳಭಾಗದಲ್ಲಿ ಮತ್ತು ಸುತ್ತಮುತ್ತ ಮೀನುಗಾರಿಕೆ ನಡೆಸದಂತೆ ದೋಣಿಗಳು ಸಂಚರಿಸದಂತೆ ಸೂಚಿಸಲಾಗಿದೆ.
–ಬಬಿನ್ ಬೋಪಣ್ಣ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ

ಸೇತುವೆ ಅವಶೇಷ ತೆರವಿಗೆ ಆಗ್ರಹ

‘ನದಿಗೆ ಕುಸಿದು ಬಿದ್ದಿರುವ ಕಾಳಿ ಸೇತುವೆಯ ಅವಶೇಷಗಳನ್ನು ಆದಷ್ಟು ಬೇಗನೆ ತೆರವುಗೊಳಿಸುವ ಜತೆಗೆ ಸೇತುವೆಯ ಉಳಿದುಕೊಂಡಿರು ಭಾಗವನ್ನೂ ಕೆಡವಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಮೀನುಗಾರಿಕೆ ನಡೆಸಲು ತೊಂದರೆ ಉಂಟಾಗಲಿದೆ. ಅಲ್ಲದೆ ಸೇತುವೆ ನೋಡುವ ಭರದಲ್ಲಿ ಜನರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ’ ಎಂದು ನದಿ ತಟದ ನಿವಾಸಿಗಳು ಒತ್ತಾಯಿಸಿದ್ದಾರೆ.

‘ಎನ್.ಎಚ್.ಎ.ಐನ ಉನ್ನತ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದು ಸೇತುವೆಯ ಅವಶೇಷ ತೆರವಿಗೆ ನಿರ್ದೇಶನ ನೀಡಿದ್ದಾರೆ. ಕೆಲ ದಿನಗಳಲ್ಲಿ ಅವಶೇಷ ತೆರವು ಮಾಡುವ ಜತೆಗೆ ಸೇತುವೆಯ ಉಳಿದ ಭಾಗವನ್ನೂ ತೆರವುಗೊಳಿಸಲು ಕ್ರಮವಹಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT