ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಗೋರ್ ಕಡಲತೀರ: ವಿದೇಶಿ ಹಕ್ಕಿಗಳ ಚಿನ್ನಾಟ

ಚಳಿಗಾಲದ ವೇಳೆಗೆ ಯುರೋಪ್, ಮಂಗೋಲಿಯಾದಿಂದ ವಲಸೆ ಬರುವ ಪಕ್ಷಿಗಳು
Last Updated 28 ಜನವರಿ 2023, 19:31 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಕೊಕ್ಕರೆಗಳ ಓಡಾಟ ಜನರ ಕಣ್ಣಿಗೆ ಬೀಳುವುದು ಸಾಮಾನ್ಯ. ಅವುಗಳೊಟ್ಟಿಗೆ ಬಣ್ಣ ಬಣ್ಣದ ತಲೆಗಳ ಗಲ್ ಹಕ್ಕಿಗಳು ಈಗ ಕಾಣಿಸಿಕೊಳ್ಳುತ್ತಿವೆ.

ಕಡಲ ಅಲೆಗಳೊಂದಿಗೆ ಚಿನ್ನಾಟ ಆಡುವ ಹಕ್ಕಿಗಳನ್ನು ಪಕ್ಷಿಪ್ರಿಯರು ಕಣ್ತುಂಬಿಕೊಳ್ಳಲು ಕಡಲತೀರಕ್ಕೆ ಬರುತ್ತಾರೆ. ಮೀನುಗಾರಿಕೆ ನಡೆಸುವ ದೋಣಿಗಳ ಮೇಲೆ, ಕಡಲತೀರದ ಮರಳಿನಲ್ಲಿ ಸಾಲುಸಾಲಾಗಿ ಕುಳಿತ ಪಕ್ಷಿಗಳ ಸೊಬಗನ್ನು ವೀಕ್ಷಿಸಿ ಖುಷಿಪಡುತ್ತಾರೆ.

ವೈಜ್ಞಾನಿಕವಾಗಿ ‘ಗಲ್’ ಎಂದು ಕರೆಯಲ್ಪಡುವ ಕೊಕ್ಕರೆಯ ಜಾತಿಗೆ ಸೇರಿದ ಪಕ್ಷಿಗಳು ಗುಂಪುಗುಂಪಾಗಿ ಕಾಣಿಸಿಕೊಳ್ಳುತ್ತಿವೆ. ಕಂದು ಬಣ್ಣದ ತಲೆಯ ಗಲ್, ಕಪ್ಪು ತಲೆಯ ಗಲ್, ಪಾಲಾಸ್ ಗಲ್ ಬಗೆಯ ಪಕ್ಷಿಗಳು ಇಲ್ಲಿವೆ.

ಸಾಮಾನ್ಯವಾಗಿ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಆರಂಭದ ಹೊತ್ತಿಗೆ ಯುರೋಪ್ ಖಂಡದ ಪೂರ್ವಭಾಗ, ಮಂಗೋಲಿಯಾ ದೇಶಗಳಿಂದ ಈ ಪಕ್ಷಿಗಳು ಪಶ್ಚಿಮ ಕರಾವಳಿಗೆ ವಲಸೆ ಬರುತ್ತವೆ. ಕಾರವಾರ ಸೇರಿದಂತೆ ಜಿಲ್ಲೆಯ ಕರಾವಳಿ ತೀರಗಳಲ್ಲಿ ಅಲ್ಲಲ್ಲಿ ಇವುಗಳ ಗುಂಪು ಈ ಹೊತ್ತಿಗೆ ಕಾಣಿಸಿಕೊಳ್ಳುತ್ತದೆ.

‘ಕಡಲತೀರದಲ್ಲಿ ಹೊಸಬಗೆಯ ಪಕ್ಷಿಗಳ ಗುಂಪು ಚಳಿಗಾಲದ ವೇಳೆಗೆ ಕಾಣಿಸಿಕೊಳ್ಳುತ್ತದೆ. ನೀರಿನೊಂದಿಗೆ ಆಡುವ ಇವುಗಳ ಚಟುವಟಿಕೆ ಗಮನಿಸಲು ಖುಷಿ ಎನಿಸುತ್ತದೆ. ಬೆಳಿಗ್ಗೆ ಹೊತ್ತಲ್ಲಿ ಹೆಚ್ಚಿನ ಸಂಖ್ಯೆಯ ಹಕ್ಕಿಗಳು ಕಾಣಿಸಿಕೊಳ್ಳುತ್ತಿವೆ’ ಎನ್ನುತ್ತಾರೆ ನಿತ್ಯ ವಾಯುವಿಹಾರಕ್ಕೆ ಬರುವ ಕೆ.ಎಚ್.ಬಿ.ಕಾಲೊನಿಯ ನಿವಾಸಿ ಶಿವಾನಂದ ನಾಯ್ಕ.

‘ವಿದೇಶಿ ಹಕ್ಕಿಗಳು ಸಂತಾನೋತ್ಪತ್ತಿಗೆ ದೇಶದ ಲಡಾಖ್ ಪ್ರಾಂತ್ಯಕ್ಕೆ ವಲಸೆ ಬರುತ್ತವೆ. ಅಲ್ಲಿಗೆ ತೆರಳುವ ಮುನ್ನ ಚಳಿಗಾಲದ ಅವಧಿಯಲ್ಲಿ ಪಶ್ಚಿಮ ಕರಾವಳಿಯಲ್ಲಿ ಆಶ್ರಯ ಪಡೆದುಕೊಳ್ಳುತ್ತವೆ. ಗಲ್ ಜಾತಿಯ ಹಕ್ಕಿಗಳು ಇದರಲ್ಲಿ ಸೇರಿವೆ. ಕಡಲತೀರದಲ್ಲಿ ದೊರೆಯುವ ಮೃದ್ವಂಗಿ, ಮೀನುಗಳು, ಏಡಿಗಳನ್ನು ತಿಂದು ಇವು ಜೀವಿಸುತ್ತವೆ. ಸರಾಸರಿ ನಾಲ್ಕು ತಿಂಗಳ ಕಾಲ ಸ್ಥಳೀಯ ಪ್ರಭೇದಗಳ ಪಕ್ಷಿಗಳ ಜತೆಗೆ ಸಹಬಾಳ್ವೆ ನಡೆಸುತ್ತವೆ. ಅವುಗಳೊಟ್ಟಿಗೆ ಸೇರಿ ಬೇಟೆಯಾಡುವುದು ವಿಶೇಷ’ ಎನ್ನುತ್ತಾರೆ ಪ್ರಾಣಿಶಾಸ್ತ್ರ ಅಧ್ಯಯನಕಾರ ಅಮಿತ್ ಹೆಗಡೆ.

ಅಲೆಗಳ ಜತೆ ಪಕ್ಷಿಗಳ ಆಟ:

ಕಡಲ ಅಲೆಗಳೊಂದಿಗೆ ಆಡುವುದು ಗಲ್ ಪಕ್ಷಿಗಳ ವಿಶೇಷತೆ. ಇವುಗಳ ಗುಂಪು ಸಮುದ್ರದ ನೀರಿನಲ್ಲಿ ತೇಲಿದಂತೆ ದೂರದಿಂದ ಗೋಚರವಾಗುತ್ತದೆ.

‘ಸಮುದ್ರದ ಮೇಲ್ಮೈನಲ್ಲಿ ಬೀಸುವ ಗಾಳಿಯ ರಭಸವನ್ನು ತಡೆದುಕೊಳ್ಳುವ ಸಾಮರ್ಥ್ಯ ಗಲ್‍ಗಳಿಗೆ ಇರದು. ಗಾಳಿಯ ರಭಸ ತಪ್ಪಿಸಿಕೊಳ್ಳಲು ಅವು ಅಲೆಗಳ ಸಮೀಪದಲ್ಲಿ ಹಾರಾಡುತ್ತ ಸಾಗುತ್ತವೆ. ಇದರಿಂದ ದೂರದಿಂದ ಪಕ್ಷಿಗಳು ನೀರಿನ ಮೇಲೆ ಈಜುತ್ತ ಸಾಗಿದಂತೆ ಭಾಸವಾಗುತ್ತದೆ’ ಎನ್ನುತ್ತಾರೆ ಪ್ರಾಣಿಶಾಸ್ತ್ರ ಅಧ್ಯಯನಕಾರ ಅಮಿತ್ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT