ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಯಕರ್ತರ ‘ಕೈ’ಗೆ ಅಧಿಕಾರ: ಸಿದ್ಧತೆ

ನಿಗಮ, ಮಂಡಳಿಯಲ್ಲಿ ಅವಕಾಶ ಸಿಗದವರ ಮೂಗಿಗೆ ತುಪ್ಪ ಸವರಲು ಯತ್ನ
ಗಣಪತಿ ಹೆಗಡೆ
Published 30 ಜನವರಿ 2024, 5:09 IST
Last Updated 30 ಜನವರಿ 2024, 5:09 IST
ಅಕ್ಷರ ಗಾತ್ರ

ಕಾರವಾರ: ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ ನೀಡಲು ಸಿದ್ಧತೆ ನಡೆಸಿದೆ. ಅದರ ಭಾಗವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾ ಪ್ರಾಧಿಕಾರ, ಸಮಿತಿಗೆ ಜಿಲ್ಲಾಮಟ್ಟದಲ್ಲಿ ‘ಪ್ರಭಾವಿ’ ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಲು ಪಕ್ಷದ ಜಿಲ್ಲಾ ಘಟಕವು ಮುಂದಾಗಿದೆ.

ಈಚೆಗಷ್ಟೆ 36 ಶಾಸಕರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಲಾಗಿದ್ದು, ಜಿಲ್ಲೆಯ ಪೈಕಿ ಕಾರವಾರದ ಶಾಸಕ ಸತೀಶ ಸೈಲ್ ಅವರಿಗೆ ಸ್ಥಾನ ನೀಡಲಾಗಿದೆ. ಕೆಲವೇ ದಿನಗಳಲ್ಲಿ 39 ಕಾರ್ಯಕರ್ತರ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದ್ದು, ಜಿಲ್ಲೆಯ ಯಾರಿಗೆ ಅವಕಾಶ ಸಿಗಬಹುದು ಎಂಬ ಚರ್ಚೆ ಜೋರಾಗಿದೆ.

ಅದರ ನಡುವೆಯೇ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಚಿಸಲು ಸರ್ಕಾರ ನಿರ್ಧರಿಸಿದ್ದು ನಿಗಮ, ಮಂಡಳಿಗಳಲ್ಲಿ ಸ್ಥಾನ ನೀಡಲಾಗದವರಿಗೆ ಇಲ್ಲಿ ಅವಕಾಶ ನೀಡಲು ಕಾಂಗ್ರೆಸ್ ಮುಂದಾಗಿದೆ.

‘ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿ ರಚಿಸಲು ಸರ್ಕಾರ ಆದೇಶಿಸಿದೆ. ಅವುಗಳಿಗೆ ನೇಮಕ ಮಾಡಲು ಸದಸ್ಯರ ಪಟ್ಟಿ ಶಿಫಾರಸ್ಸು ಮಾಡಲು ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ಸೂಕ್ತರನ್ನು ಆಯ್ಕೆ ಮಾಡಲು ಸಚಿವರು, ಶಾಸಕರ ಜತೆ ಚರ್ಚಿಸಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯ ಮಟ್ಟದ ಪ್ರಾಧಿಕಾರಕ್ಕೆ ಜಿಲ್ಲೆಯಿಂದ ತಲಾ ಒಬ್ಬ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಅವರೇ ಜಿಲ್ಲಾ ಮಟ್ಟದ ಪ್ರಾಧಿಕಾರಕ್ಕೆ ಅಧ್ಯಕ್ಷರೂ ಆಗಲಿದ್ದಾರೆ. ಅವರ ಹೊರತಾಗಿ ಐದು ಮಂದಿ ಉಪಾಧ್ಯಕ್ಷ, 15 ಮಂದಿ ಸದಸ್ಯರು ಪ್ರಾಧಿಕಾರದಲ್ಲಿ ಇರಲಿದ್ದಾರೆ. ತಾಲ್ಲೂಕು ಹಂತದ ಸಮಿತಿಯಲ್ಲಿ ಜಿಲ್ಲಾಮಟ್ಟದ ಪ್ರಾಧಿಕಾರದ ಸದಸ್ಯರೊಬ್ಬರು ಅಧ್ಯಕ್ಷರಾಗಿರಲಿದ್ದು, ಅವರ ಹೊರತಾಗಿ 14 ಸದಸ್ಯರು ಇರಲಿದ್ದಾರೆ’ ಎಂದು ವಿವರಿಸಿದರು.

‘ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡದೇ, ವರಿಷ್ಠರ ಹಂತದಲ್ಲಿ ಲಾಬಿ ನಡೆಸುವವರಿಗೆ ನಿಗಮ ಮಂಡಳಿಗೆ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ ಎಂಬುದೇ ಬೇಸರದ ಸಂಗತಿ. ಚುನಾವಣೆಗೆ ಕೆಲಸ ಮಾಡಲು ಕಾರ್ಯಕರ್ತರನ್ನು ಹುರಿದುಂಬಿಸುವ ಸಲುವಾಗಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಚಿಸಿ ಅವಕಾಶ ನೀಡಲಾಗುತ್ತಿದೆ’ ಎಂದು ಕಾಂಗ್ರೆಸ್‍ನ ಹಿರಿಯ ಕಾರ್ಯಕರ್ತರೊಬ್ಬರು ಬೇಸರ ತೋಡಿಕೊಂಡರು.

ಸಚಿವರು ಶಾಸಕರ ಜತೆಗೆ ಚರ್ಚಿಸಿ ಪಕ್ಷಕ್ಕೆ ನಿಷ್ಠರಾಗಿದ್ದುಕೊಂಡು ಕೆಲಸ ಮಾಡಿದ ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯತ್ವಕ್ಕೆ ಶಿಫಾರಸು ಮಾಡಲಾಗುವುದು.
ಸಾಯಿ ಗಾಂವಕರ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ನಿಗಮ ಮಂಡಳಿ: ರೇಸ್‍ನಲ್ಲಿ ಸಾಯಿ ಪಾಟೀಲ್ ಆಳ್ವಾ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಹುದ್ದೆಗೆ ಎರಡನೇ ಹಂತದಲ್ಲಿ ಬಿಡುಗಡೆಯಾಗುವ ಪಟ್ಟಿಯಲ್ಲಿ ಸ್ಥಾನ ಪಡೆಯಲು ಹಲವರು ಪ್ರಯತ್ನ ನಡೆಸಿದ್ದಾರೆ. ಅವರಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ ಮುಂಡಗೋಡಿನ ವಿ.ಎಸ್.ಪಾಟೀಲ ನಿವೇದಿತ್ ಆಳ್ವಾ ಮುಂಚೂಣಿಯಲ್ಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ. ‘ಪಕ್ಷದ ಚುಕ್ಕಾಣಿ ಹಿಡಿದ ಸಾಯಿ ಗಾಂವಕರ ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಲ್ಲ. ಉಳಿದಿಬ್ಬರು ಪ್ರಭಾವಿಗಳಾಗಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾಗಿದ್ದಾರೆ. ಹೀಗಾಗಿ ಅವಕಾಶ ನೀಡುವ ಸಾಧ್ಯತೆ ಕಡಿಮೆ’ ಎಂದು ಕಾಂಗ್ರೆಸ್ ರಾಜ್ಯ ಘಟಕದ ಪದಾಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT