ಕಾರವಾರ: ತಂಬಾಕಿಗೆ ಬೇಡಿಕೆ ಇಟ್ಟು ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಬ್ಬರು ತಾವೇ ಹಲ್ಲೆ ಮಾಡಿಕೊಂಡು ಗಾಯಗೊಂಡ ಘಟನೆಯ ಬಳಿಕ ಜಾಗೃತರಾಗಿರುವ ಕಾರಾಗೃಹ ಇಲಾಖೆ ಕೈದಿಗಳ ಮನಪರಿವರ್ತನೆಗೆ ವಿಶೇಷ ಕಾರ್ಯಾಗಾರ ನಡೆಸುವ ಜತೆಗೆ ಆಪ್ತಸಮಾಲೋಚನೆಗೊಳಪಡಿಸಲು ಮುಂದಡಿ ಇಟ್ಟಿದೆ.
ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಸದ್ಯ ಮೂರು ಮಂದಿ ಮಹಿಳೆಯರು ಸೇರಿದಂತೆ 145 ವಿಚಾರಣಾಧೀನ ಕೈದಿಗಳಿದ್ದಾರೆ. ಅವರ ಪೈಕಿ ತಂಬಾಕು, ಮದ್ಯ ವ್ಯಸನದ ಗೀಳು ಅಂಟಿಸಿಕೊಂಡಿರುವ ಕೈದಿಗಳನ್ನು ದುಶ್ಚಟದಿಂದ ಹೊರತರಲು ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕಾರಾಗೃಹ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸಿದೆ.
‘ಕೈದಿಗಳ ಮನಪರಿವರ್ತನೆಗೆ ಕಾರಾಗೃಹದಲ್ಲಿ ಪ್ರತಿ ವರ್ಷವೂ ಆಗಾಗ ಜಾಗೃತಿ ಕಾರ್ಯಾಗಾರ ಆಯೋಜಿಸಲಾಗುತ್ತಿತ್ತು. ಈಗ ಅದನ್ನು ಹೆಚ್ಚಿಸಲು ಮುಂದಾಗಿದ್ದೇವೆ. ಪ್ರತಿ ವಾರಕ್ಕೊಮ್ಮೆ ಆರೋಗ್ಯ ಸಂಬಂಧಿ ಕಾರ್ಯಾಗಾರ ಆಯೋಜಿಸುವ ಜತೆಗೆ ಕೈದಿಗಳ ವರ್ತನೆ ಆಧರಿಸಿ ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಿದ್ದೇವೆ’ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಹೇಮಲತಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈಚೆಗೆ ತಂಬಾಕು ಉತ್ಪನ್ನಕ್ಕೆ ಬೇಡಿಕೆ ಇಟ್ಟು ಕಾರಾಗೃಹದಲ್ಲಿ ಇಬ್ಬರು ಕೈದಿಗಳು ತಾವೇ ಹಲ್ಲೆ ಮಾಡಿಕೊಂಡು ಗಾಯಗೊಂಡ ಘಟನೆ ಬಳಿಕ ಎಲ್ಲ ಕೈದಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಅವರಿಗಾಗಿ ವಿಶೇಷ ಜಾಗೃತಿ ಕಾರ್ಯಾಗಾರ ನಡೆಸಿಕೊಡುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದರು.
‘ಕಾರಾಗೃಹದಲ್ಲಿರುವ ಕೈದಿಗಳ ಆರೋಗ್ಯ ತಪಾಸಣೆ ನಡೆಸುವ ಜತೆಗೆ ಅವರ ಮಾನಸಿಕ ಸ್ಥಿತಿಗತಿ ಅಭ್ಯಸಿಸಿ ಅಗತ್ಯ ಇದ್ದವರಿಗೆ ಆಪ್ತಸಮಾಲೋಚನೆ ನಡೆಸಲು ಇಲಾಖೆಯು ಸುತ್ತೋಲೆ ಹೊರಡಿಸಿದೆ. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಮನಃಶಾಸ್ತ್ರಜ್ಞರು, ಆಪ್ತಸಮಾಲೋಚಕರ ತಂಡವು ಕಾರಾಗೃಹಕ್ಕೆ ಆಗಾಗ ಭೇಟಿ ನೀಡಿ ಕೈದಿಗಳ ಮಾನಸಿಕ ಆರೋಗ್ಯದ ಕುರಿತು ಸಮಾಲೋಚಿಸುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ಪ್ರತಿಕ್ರಿಯಿಸಿದರು.
ಜಿಲ್ಲಾ ಕಾರಾಗೃಹಕ್ಕೆ ಬರುವ ಬಿಡುಗಡೆಯಾಗುವ ಕೈದಿಗಳ ಸಂಖ್ಯೆ ಏರುಪೇರಾಗುತ್ತಿರುತ್ತದೆ. ಪ್ರತಿ ಕೈದಿಯೂ ಮನಃಪರಿವರ್ತನೆ ಆಗುವ ರೀತಿಯಲ್ಲಿ ವಿಶೇಷ ಜಾಗೃತಿ ಕಾರ್ಯಾಗಾರವನ್ನು ನಡೆಸಲು ಉದ್ದೇಶಿಸಲಾಗಿದೆ.ಹೇಮಲತಾ ಜಿಲ್ಲಾ ಕಾರಾಗೃಹದ ಅಧೀಕ್ಷಕಿ
ಕಾರಾಗೃಹದಲ್ಲಿರುವ ಕೈದಿಗಳು ಅನಾರೋಗ್ಯಕ್ಕೆ ತುತ್ತಾದರೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈಗ ವೈದ್ಯರನ್ನೇ ಕಾರಾಗೃಹಕ್ಕೆ ಕಳಿಸಿ ಕೈದಿಗಳ ಆರೋಗ್ಯ ತಪಾಸಿಸಲು ಸೂಚನೆ ಬಂದಿದೆಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯಾಧಿಕಾರಿ
‘ಅಪರಾಧ ಕೃತ್ಯ ಎಸಗಿ ಕಾರಾಗೃಹ ಸೇರುವ ಕೈದಿಗಳ ಪೈಕಿ ದುಶ್ಚಟಕ್ಕೆ ಒಳಗಾದವರ ಸಂಖ್ಯೆ ಹೆಚ್ಚಿದೆ. ಬಂಧಿಯಾದವರಿಗೆ ಮಾದಕ ವಸ್ತು ಸಿಗದ ಕಾರಣಕ್ಕೆ ಒಮ್ಮೆಲೇ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುತ್ತಾರೆ. ಅಂಥವರನ್ನು ಒಮ್ಮೆಲೇ ನಿಯಂತ್ರಿಸುವುದು ಕಷ್ಟ. ನಿರಂತರವಾಗಿ ಅವರನ್ನು ಆಪ್ತಸಮಾಲೋಚನೆಗೆ ಒಳಪಡಿಸುತ್ತಲೇ ಅವರಿಗೆ ದುಶ್ಚಟದ ಅಪಾಯದ ಅರಿವು ಮೂಡಿಸಿ ಅವರನ್ನು ಸರಿದಾರಿಗೆ ತರಬೇಕಾಗುತ್ತದೆ’ ಎನ್ನುತ್ತಾರೆ ಆಪ್ತ ಸಮಾಲೋಚಕರೊಬ್ಬರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.