ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ ಕ್ಷೇತ್ರ: ಏರಿದ ಅಂತರ ಇಳಿಯಲೇ ಇಲ್ಲ...!

ಭಿಗಿ ಭದ್ರತೆಯ ನಡುವೆ ಶಿಸ್ತುಬದ್ಧವಾಗಿ ನಡೆದ ಮತ ಎಣಿಕೆ ಪ್ರಕ್ರಿಯೆ
Published 4 ಜೂನ್ 2024, 23:40 IST
Last Updated 4 ಜೂನ್ 2024, 23:40 IST
ಅಕ್ಷರ ಗಾತ್ರ

ಕಾರವಾರ: ನಸುಕಿನ ಜಾವ ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಕುಮಟಾ ಪಟ್ಟಣದಲ್ಲಿರುವ ಡಾ.ಎ.ವಿ.ಬಾಳಿಗಾ ಕಾಲೇಜಿಗೆ ನೂರಾರು ಸಂಖ್ಯೆಯಲ್ಲಿ ನೌಕರರರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ದೌಡಾಯಿಸಿದ್ದರು. ಲೋಕಸಭೆ ಚುನಾವಣೆಯ ಫಲಿತಾಂಶದ ಕುತೂಹಲದಲ್ಲಿ ಕಾರ್ಯಕರ್ತರಿದ್ದರೆ, ಮತ ಎಣಿಸುವ ಧಾವಂತದೊಂದಿಗೆ ನೌಕರರು ಬಂದಿದ್ದರು.‌

ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಂಡ ಎಣಿಕೆ ಪ್ರಕ್ರಿಯೆಯ ವಿವಿಧ ಹಂತದ ಕೆಲಸಗಳು ಮುಗಿಯುವಾಗ ಸಂಜೆ 7 ಗಂಟೆಯಾಗಿತ್ತು. ಈ ನಡುವಿನ ಅವಧಿಯಲ್ಲಿ 12.63 ಲಕ್ಷ ಮತಗಳನ್ನು ಎಣಿಸಿದ ನೂರಾರು ಸಿಬ್ಬಂದಿ ನಿರಾಳರಾದರೆ, ಗೆಲುವಿನ ಕೇಕೆ ಹಾಕಿದ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ಇನ್ನೊಂದೆಡೆ ಸೋತ ಬೇಸರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷೇತರ ಅಭ್ಯರ್ಥಿಗಳು ಕಂಡುಬಂದರು.

ಎಂಟು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಉತ್ತರ ಕನ್ನಡ ಕ್ಷೇತ್ರದ ಮತ ಎಣಿಕೆ ಬೆಳಿಗ್ಗೆ 7.30ಕ್ಕೆ ಸರಿಯಾಗಿ ಆರಂಭಗೊಂಡಿತು. ಆ ಹೊತ್ತಿಗೆ ಎಂಟೂ ಕ್ಷೇತ್ರಗಳಿಗೆ ಸಂಬಂಧಿಸಿದ ವಿದ್ಯುನ್ಮಾನ ಮತಯಂತ್ರಗಳು, ಅಂಚೆ ಮತ ಪತ್ರವನ್ನು ಒಳಗೊಂಡ ಪೆಟ್ಟಿಗೆಗಳಿರುವ ಭದ್ರತಾ ಕೊಠಡಿಯ ಬಾಗಿಲನ್ನು ಚುನಾವಣಾ ವೀಕ್ಷಕ ರಾಜೀವ ರತನ್, ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ ಸಮ್ಮುಖದಲ್ಲಿ ತೆರೆಯಲಾಯಿತು. ಬಳಿಕ ಒಂದೊಂದಾಗಿ ಯಂತ್ರಗಳನ್ನು ಎಣಿಕೆ ಕೊಠಡಿಯೊಳಗೆ ಸಾಗಿಸಲಾಯಿತು. 8 ಗಂಟೆ ವೇಳೆಗೆ ಮತಯಂತ್ರಗಳ ಮತ ಎಣಿಕೆ ಆರಂಭಗೊಂಡ ಬಳಿಕ ಕಾರ್ಯಕರ್ತರ ಕುತೂಹಲ ಹೆಚ್ಚುತ್ತ ಹೋಯಿತು.

ಆದರೆ, ಮೊದಲ ಸುತ್ತಿನಲ್ಲಿ 23,055 ಮತಗಳ ಮುನ್ನಡೆ ಪಡೆದ ಬಿಜೆಪಿ ಅಭ್ಯರ್ಥಿ ಕಾಗೇರಿ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಹಿಂದಿಕ್ಕಿ ಸಾಗಿದರು. 23 ಸುತ್ತುಗಳ ಮತ ಎಣಿಕೆಯವರೆಗೂ ಮುನ್ನಡೆ ಬಿಟ್ಟುಕೊಡದ ಅವರು ಪ್ರತಿ ಸುತ್ತಿನಲ್ಲಿಯೂ ಗೆಲುವಿನ ಅಂತರ ಹಿಗ್ಗಿಸಿಕೊಳ್ಳುತ್ತ ಸಾಗಿದರು.

ಸುಮಾರು ಐದು ತಾಸುಗಳ ಅವಧಿಯಲ್ಲಿಯೇ ಕ್ಷೇತ್ರ ವ್ಯಾಪ್ತಿಯ 1,977 ಮತಗಟ್ಟೆಗಳ ಮತ ಲೆಕ್ಕಾಚಾರದೊಂದಿಗೆ, ಅಂಚೆ ಮತಪತ್ರ, ವಿದ್ಯುನ್ಮಾನವಾಗಿ ರವಾನೆಯಾಗುವ ಅಂಚೆ ಬ್ಯಾಲೆಟ್ ಮತಗಳನ್ನೂ ಲೆಕ್ಕ ಹಾಕಲಾಯಿತು.

ಅಂಕಿ–ಅಂಶ

ಅಭ್ಯರ್ಥಿ;ಪಕ್ಷ;ಪಡೆದ ಮತ

ವಿಶ್ವೇಶ್ವರ ಹೆಗಡೆ ಕಾಗೇರಿ;ಬಿಜೆಪಿ;7,82,495

ಡಾ.ಅಂಜಲಿ ನಿಂಬಾಳ್ಕರ್;ಕಾಂಗ್ರೆಸ್;4,45,067

ಗಣಪತಿ ಹೆಗಡೆ;ಎಸ್.ಯು.ಸಿ.ಐ ಕಮ್ಯುನಿಸ್ಟ್;4,472

ವಿನಾಯಕ ನಾಯ್ಕ;ಕೆ.ಆರ್.ಎಸ್;1,263

ಸುನೀಲ ಪವಾರ;ಉತ್ತಮ ಪ್ರಜಾಕೀಯ;1,566

ಅರವಿಂದ ಗೌಡ;ಪಕ್ಷೇತರ;904

ಅವಿನಾಶ ಪಾಟೀಲ;ಪಕ್ಷೇತರ;773

ಕೃಷ್ಣ ಬಳೆಗಾರ;ಪಕ್ಷೇತರ;920

ಕೃಷ್ಣಾಜಿ ಪಾಟೀಲ;ಪಕ್ಷೇತರ;956

ಚಿದಾನಂದ ಹರಿಜನ;ಪಕ್ಷೇತರ;1,721

ನಾಗರಾಜ ಶಿರಾಲಿ;ಪಕ್ಷೇತರ;2,882

ನಿರಂಜನ ಸರ್ದೇಸಾಯಿ;ಪಕ್ಷೇತರ;4,169

ರಾಜಶೇಖರ ಹಂಡಲಗಿ;ಪಕ್ಷೇತರ;5,397

ನೋಟಾ;10,176

ಎಣಿಕೆಯಾದ ಅಂಚೆ ಮತಪತ್ರಗಳನ್ನು ತುಂಬಿಸಿದ ಪೆಟ್ಟಿಗೆಯನ್ನು ಸಿಬ್ಬಂದಿ ಭದ್ರತೆಯಲ್ಲಿ ಸಾಗಿಸಿದರು
ಎಣಿಕೆಯಾದ ಅಂಚೆ ಮತಪತ್ರಗಳನ್ನು ತುಂಬಿಸಿದ ಪೆಟ್ಟಿಗೆಯನ್ನು ಸಿಬ್ಬಂದಿ ಭದ್ರತೆಯಲ್ಲಿ ಸಾಗಿಸಿದರು
ಅಂಚೆ ಮತಪತ್ರಗಳ ಕೊನೆಯ ಸುತ್ತಿನ ಎಣಿಕೆ ಪ್ರಕ್ರಿಯೆ ನಡೆಯುವ ವೇಳೆ ಬೆರಳೆಣಿಕೆಯ ಎಣಿಕೆ ಏಜೆಂಟರು ಕುಳಿತಿದ್ದರು
ಅಂಚೆ ಮತಪತ್ರಗಳ ಕೊನೆಯ ಸುತ್ತಿನ ಎಣಿಕೆ ಪ್ರಕ್ರಿಯೆ ನಡೆಯುವ ವೇಳೆ ಬೆರಳೆಣಿಕೆಯ ಎಣಿಕೆ ಏಜೆಂಟರು ಕುಳಿತಿದ್ದರು
ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮತ ಎಣಿಕೆ ಕೇಂದ್ರ ಪ್ರವೇಶಿಸಲು ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಸಿಬ್ಬಂದಿ ಸರತಿಯಲ್ಲಿ ನಿಂತಿದ್ದರು
ಪ್ರಜಾವಾಣಿ ಚಿತ್ರಗಳು/ ದಿಲೀಪ್ ರೇವಣಕರ್
ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮತ ಎಣಿಕೆ ಕೇಂದ್ರ ಪ್ರವೇಶಿಸಲು ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಸಿಬ್ಬಂದಿ ಸರತಿಯಲ್ಲಿ ನಿಂತಿದ್ದರು ಪ್ರಜಾವಾಣಿ ಚಿತ್ರಗಳು/ ದಿಲೀಪ್ ರೇವಣಕರ್

ತಿರಸ್ಕೃತಗೊಂಡ 1110 ಮತಗಳು

ಅಗತ್ಯ ಸೇವೆಯ 16 ಇಲಾಖೆಗಳ ನೌಕರರಿಗೆ 85 ವರ್ಷ ಮೇಲ್ಪಟ್ಟ ವೃದ್ಧರಿಗೆ ಮತ್ತು ಅಂಗವಿಕಲ ಮತದಾರರಿಗೆ ಈ ಬಾರಿ ಅಂಚೆ ಮತ ಪತ್ರದ ಮೂಲಕ ಸೌಲಭ್ಯ ಕಲ್ಪಿಸಲಾಗಿತ್ತು. ದೇಶದ ಗಡಿ ಭಾಗದಲ್ಲಿರುವ ಸೈನಿಕರಿಗೆ ವಿದ್ಯುನ್ಮಾನವಾಗಿ ರವಾನೆಯಾಗುವ ಅಂಚೆ ಮತಪತ್ರದ ಮೂಲಕ ಮತದಾನದ ಸೌಲಭ್ಯ ಕಲ್ಪಿಸಲಾಗಿತ್ತು. ಕ್ಷೇತ್ರದಲ್ಲಿ ಒಟ್ಟು 7859 ಮತಗಳು ಚಲಾವಣೆಯಾಗಿದ್ದವು. ಮತ ಎಣಿಕೆ ವೇಳೆ ಕ್ರಮಬದ್ಧವಾಗಿ ಮತದಾನ ಮಾಡದ 1110 ಮತಗಳನ್ನು ತಿರಸ್ಕೃತಗೊಳಿಸಲಾಯಿತು.

ಇಳಿಕೆಯಾದ ‘ನೋಟಾ’ ಮತ

ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಬಳಿಕ ಹೆಚ್ಚು ಮತ ಗಳಿಸಿದ ‘ನೋಟಾ’ (ಮೇಲಿನ ಯಾರೂ ಸೂಕ್ತವಲ್ಲ) ಆಯ್ಕೆಯು ಈ ಬಾರಿಯೂ ಮೂರನೇ ಸ್ಥಾನ ಪಡೆಯಿತು. ಆದರೆ ಹಿಂದಿನ ಎರಡು ಚುನಾವಣೆಗಿಂತ ನೋಟಾ ಮತಗಳ ಪ್ರಮಾಣ ಕಡಿಮೆ ಬಿದ್ದಿತ್ತು. 2014ರ  ಚುನಾವಣೆಯಲ್ಲಿ 16277 2019ರ ಚುನಾವಣೆಯಲ್ಲಿ 16017 ಮತಗಳು ಬಿದ್ದಿದ್ದರೆ ಈ ಬಾರಿ 10176 ಮತ ಚಲಾವಣೆಯಾದವು. ಈ ಪೈಕಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಶ್ವೇಶ್ವರ ಹೆಗಡೆ ಅವರ ಸ್ವಕ್ಷೇತ್ರ ಶಿರಸಿಯಲ್ಲೇ 2002 ಮತಗಳು ಹಾಗೂ ಕುಮಟಾ ಕ್ಷೇತ್ರವೊಂದರಲ್ಲೇ 1706 ಮತಗಳು ಚಲಾವಣೆಯಾಗಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT