ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳ್ಳಿಗರಿಗೆ ವಿದ್ಯುತ್ ವ್ಯತ್ಯಯದ ಕಿರಿಕಿರಿ

ಬಿರು ಬೇಸಿಗೆ: ಇದ್ದೂ ಇಲ್ಲದಂತಾದ ನೀರಾವರಿ ಸೌಲಭ್ಯ
Last Updated 8 ಮೇ 2022, 15:18 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಈಚೆಗೆ ಪದೇ ಪದೇ ವಿದ್ಯುತ್ ನಿಲುಗಡೆ ಉಂಟಾಗುತ್ತಿರುವ ದೂರುಗಳಿವೆ. ಈ ಸಮಸ್ಯೆಯಿಂದ ರೈತರು, ಉದ್ದಿಮೆದಾರರಿಗೆ ತೊಂದರೆ ಉಂಟಾಗುತ್ತಿದೆ.

ತೋಟಗಳಲ್ಲಿ ಹನಿ ನೀರಾವರಿ ಸೌಲಭ್ಯ ಹೊಂದಿದ್ದರೂ ವಿದ್ಯುತ್ ವ್ಯತ್ಯಯದ ಕಾರಣ ಪಂಪ್‍ಸೆಟ್ ಕಾರ್ಯನಿರ್ವಹಿಸುತ್ತಿಲ್ಲ. ಸೌಲಭ್ಯ ಇದ್ದೂ ಇಲ್ಲದಂತಾಗಿದೆ.

ವಾನಳ್ಳಿ, ಜಡ್ಡಿಗದ್ದೆ, ಹುಲೇಕಲ್, ಮಂಜುಗುಣಿ, ಬಂಡಲ, ಹನುಮಂತಿ, ಸಂಪಖಂಡ ಸೇರಿದಂತೆ ಹಲವು ಕಡೆಗಳಲ್ಲಿ ಸಮಸ್ಯೆ ಬಿಗಡಾಯಿಸಿದೆ. ಮದುವೆ, ಮುಂಜಿ, ಶುಭ ಸಮಾರಂಭಗಳು ನಡೆಯುವ ಪ್ರಮಾಣ ಹೆಚ್ಚಿದ್ದು ಅಲ್ಲಿಯೂ ಸಮಸ್ಯೆ ತಲೆದೋರುತ್ತಿದೆ.

‘ಅನಿಯಮಿತ ವಿದ್ಯುತ್ ವ್ಯತ್ಯಯದಿಂದ ಶುಭ ಸಮಾರಂಭಗಳಿಗೆ ಜನರೇಟರ್ ಹೊಂದಿಸಿಕೊಳ್ಳಬೇಕಾಗುತ್ತಿದೆ. ಹೆಚ್ಚು ಕಾರ್ಯಕ್ರಮಗಳಿರುವ ಕಾರಣ ಹಳ್ಳಿಗಳಲ್ಲಿ ಬಾಡಿಗೆಗೆ ಜನರೇಟರ್ ಕೂಡ ಸಿಗುತ್ತಿಲ್ಲ’ ಎನ್ನುತ್ತಾರೆ ದಿನೇಶ ನಾಯ್ಕ.

ಲೋಡ್ ಶೇಡ್ಡಿಂಗ್ ಇಲ್ಲ ಎಂದು ಹೇಳುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಅಪರೂಪವಾಗುತ್ತಿದೆ. ಕೆಲವೇ ತಾಸು ಕರೆಂಟ್ ನೀಡಿ, ದಿನದ ಬಹುತೇಕ ಹೊತ್ತು ನಿಲುಗಡೆ ಮಾಡಲಾಗುತ್ತಿದೆ’ ಎಂದು ಆರೋಪಿಸುತ್ತಾರೆ ಕೊಡ್ನಗದ್ದೆ ಗ್ರಾಮ ಪಂಚಾಯ್ತಿ ಸದಸ್ಯ ಪ್ರವೀಣ ಹೆಗಡೆ ಮಣ್ಮನೆ.

‘ಹವಾಮಾನ ವೈಪರೀತ್ಯದ ಪರಿಣಾಮ ಕೃಷಿ ಚಟುವಟಿಕೆ ಮೇಲೆ ಬೀರುತ್ತಿದೆ. ಕೃಷಿ ಭೂಮಿಗೆ ಹೆಚ್ಚು ನೀರು ಹಾಯಿಸಬೇಕಾಗಿರುವುದರಿಂದ ಸಮಪರ್ಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಜನಸಾಮಾನ್ಯರು, ರೈತರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸಬೇಕು’ ಎಂದು ಒತ್ತಾಯಿಸಿದರು.

‘ಮೇ 5ರಿಂದ ಟ್ರಾನ್ಸಫಾರ್ಮರ್ ನಿರ್ವಹಣೆ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ. ನಿರ್ವಹಣೆ ವೇಳೆ ಕೆಲವು ಕಡೆ ವ್ಯತ್ಯಯ ಉಂಟಾಗಿರಬಹುದು. ಈಚೆಗೆ ಸುರಿದ ಗಾಳಿ ಮಳೆಯಿಂದ ಅನಾಹುತ ಉಂಟಾಗಿಯೂ ಸಮಸ್ಯೆ ಎದುರಾಗಿತ್ತು. ಗ್ರಾಮೀಣ ಭಾಗಕ್ಕೆ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗುತ್ತಿದೆ’ ಎಂದು ಹೆಸ್ಕಾಂ ಎಇಇ ನಾಗರಾಜ ಪಾಟೀಲ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT