ದಾಂಡೇಲಿ: ಮಳೆಗಾಲದಲ್ಲಿ ಸೋರಿಕೆಯ ಸಮಸ್ಯೆ, ಪ್ರಯಾಣಿಕರಿಗೆ ಕುಡಿಯಲು ನೀರು ಸಿಗದೆ ಪರದಾಟ, ಗಬ್ಬು ನಾರುವ ಶೌಚಾಲಯ, ವಾಹನ ನಿಲುಗಡೆಗೂ ಇಲ್ಲದ ಜಾಗ...ಹೀಗೆ ನಗರದ ಬಸ್ ನಿಲ್ದಾಣದ ಕೊರತೆಯ ಪಟ್ಟಿ ಬೆಳೆಯುತ್ತಲೇ ಸಾಗುತ್ತಿದೆ.
ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಪ್ರವಾಸೋದ್ಯಮ ನಗರ ದಾಂಡೇಲಿಗೆ ಸುಸಜ್ಜಿತವಾದ ಬಸ್ ನಿಲ್ದಾಣ ಇಲ್ಲ ಎಂಬ ಕೊರಗು ಮುಂದುವರೆದಿದೆ. ತಾಲ್ಲೂಕು ಕೇಂದ್ರವಾಗಿ ಐದು ವರ್ಷ ಕಳೆದರೂ ಈವರೆಗೆ ಸುಸಜ್ಜಿತ ನಿಲ್ದಾಣ ವ್ಯವಸ್ಥೆ ಕಲ್ಪಸದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನವೂ ವ್ಯಕ್ತವಾಗುತ್ತಿದೆ.
ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್ ನಿಲ್ದಾಣದಲ್ಲಿ ಜನ ದಟ್ಟಣೆ ಹೆಚ್ಚಾಗಿದೆ. ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾಗಿದೆ. ಕಳೆದ 7 ವರ್ಷದಲ್ಲಿ ₹2 ಕೋಟಿ ವೆಚ್ಚದಲ್ಲಿ ಕಾಂಪೌಂಡ್, ಶೌಚಾಲಯ ನೀರು ಹರಿದು ಹೋಗಲು ಪೈಪ್‍ಲೈನ್ ಬಿಟ್ಟರೆ ಇನ್ನುಳಿದಂತೆ ಯಾವುದೇ ಅಭಿವೃದ್ಧಿ ಬಸ್ ನಿಲ್ದಾಣ ಕಂಡಿಲ್ಲ ಎಂಬುದು ಜನರ ದೂರು.
‘ಸುಮಾರು 3 ಎಕರೆ ಜಾಗದಲ್ಲಿರುವ ನಿಲ್ದಾಣದಲ್ಲಿ ಪ್ರಯಾಣಿಕರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇಲ್ಲ. ಕ್ಯಾಂಟೀನ್ ವ್ಯವಸ್ಥೆಯೂ ಇಲ್ಲ. ಹೈಟೆಕ್ ಬಸ್ ನಿಲ್ದಾಣದ ಅಗತ್ಯವಿದ್ದರೂ ಈವರೆಗೆ ಇದ್ದ ನಿಲ್ದಾಣಕ್ಕೆ ಅಗತ್ಯ ಸೌಕರ್ಯ ಒದಗಿಸಿಲ್ಲ’ ಎನ್ನುತ್ತಾರೆ ಅಟಲ್‍ಜೀ ಅಭಿಮಾನಿ ಸಂಘಟನೆಯ ವಿಷ್ಣು ನಾಯರ್.
‘ಬೆಂಗಳೂರು, ಮೈಸೂರು, ಧಾರವಾಡ ಸೇರಿದಂತೆ ಮಹಾನಗರಗಳಿಗೆ ಹೆಚ್ಚಿನ ಜನರು ಪ್ರಯಾಣ ಬೆಳೆಸುತ್ತಾರೆ. ಪ್ರವಾಸಿಗರ ಸಂಚಾರವೂ ಈ ಭಾಗದಲ್ಲಿ ಹೆಚ್ಚಿರುವುದರಿಂದ ಮಹಾನಗರಗಳಿಗೆ ಬಸ್ ಸೌಕರ್ಯ ಹೆಚ್ಚಿಸಬೇಕು’ ಎನ್ನುತ್ತಾರೆ ಅವರು.
‘ದಾಂಡೇಲಿ ಪ್ರವಾಸಿ ತಾಣವಾಗಿ ದೇಶದ ಗಮನ ಸೆಳೆಯುತ್ತಿದೆ. ಅನೇಕ ಪ್ರವಾಸಿಗರು ದೂರದ ರಾಜ್ಯ, ಮಹಾನಗರಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಹಲವರು ಬಸ್‍ಗಳ ಮೂಲಕವೂ ಬರುತ್ತಾರೆ. ಬಸ್ ನಿಲ್ದಾಣದ ಸ್ಥಿತಿ ಕಂಡು ಮರಗುತ್ತಿದ್ದಾರೆ. ಉತ್ತಮ ಶೌಚಾಲಯ, ವಿಶ್ರಾಂತಿಗೃಹ, ಅತ್ಯಾಧುನಿಕ ಸೌಲಭ್ಯದ ಟಿಕೆಟ್ ಕೌಂಟರ್ ಸೇರಿದಂತೆ ಅಗತ್ಯ ಸೌಕರ್ಯದ ಹೈಟೆಕ್ ಬಸ್ ನಿಲ್ದಾಣ ಸ್ಥಾಪನೆಯ ಅಗತ್ಯವಿದೆ’ ಎಂಬುದು ಇಲ್ಲಿನ ಸಂಘಟನೆಗಳ ಆಗ್ರಹ.
Quote - ಮಳೆಗಾಲದಲ್ಲಿ ಚಾವಣಿ ಸೋರಿಕೆಯಾಗಿ ಸಮಸ್ಯೆಯಾಗುತ್ತಿರುವ ಕುರಿತು ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ. ದುರಸ್ತಿ ಕಾರ್ಯ ನಡೆಸುವ ಕುರಿತು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಲ್.ಟಿ.ರಾಥೋಡ್ ದಾಂಡೇಲಿ ಸಾರಿಗೆ ಘಟಕ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.