ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ‘ಖಾತ್ರಿ’ಯಡಿ ಇಕೊ ಪಾರ್ಕ್ ಅಭಿವೃದ್ಧಿ

ಕಾರವಾರ ತಾಲ್ಲೂಕಿನ ಚೆಂಡಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲಿ ನಿರ್ಮಾಣ
Last Updated 20 ನವೆಂಬರ್ 2022, 6:45 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಚೆಂಡಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ‘ಇಕೊ ‍ಪಾರ್ಕ್’ ತಲೆಯೆತ್ತಲಿದೆ. ಪಾಲಕರಿಗೆ ಹಾಗೂ ಮಕ್ಕಳಿಗೆ ಸಮಯವನ್ನು ಲವಲವಿಕೆಯಿಂದ ಕಳೆಯಲು ಪೂರಕವಾಗುವಂತೆ ವಿವಿಧ ಸೌಲಭ್ಯಗಳನ್ನು ಅಳವಡಿಸಲಾಗುತ್ತಿದೆ.

ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಐದು ಗುಂಟೆ ಜಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಭರದಿಂದ ಸಾಗಿದೆ. ₹ 10 ಲಕ್ಷ ವೆಚ್ಚದ ಕಾಮಗಾರಿ ಇದಾಗಿದ್ದು, ಶೇ 85ರಷ್ಟು ಪೂರ್ಣಗೊಂಡಿದೆ. ಶೇ 15ರಷ್ಟು ಮಾನವ ದಿನಗಳ ಬಳಕೆ ಬಾಕಿಯಿದೆ. ಅದೂ ಇನ್ನೆರಡು ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆಂಡಿಯಾ ಗ್ರಾಮವು ಕಾರವಾರ ನಗರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಕಾರವಾರವನ್ನು ಹೊರತು ಪಡಿಸಿದರೆ ನಡುವೆ ಎಲ್ಲೂ ಮಕ್ಕಳಿಗೆ ಮನೋರಂಜನೆ ನೀಡುವಂಥ, ಆಟವಾಡುವಂಥ ಉದ್ಯಾನಗಳಿಲ್ಲ. ಈ ಕೊರತೆಯನ್ನು ನೀಗಲು ಕಾಮಗಾರಿ ಸಹಕಾರಿಯಾಗಲಿದೆ.

‘ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿತ್ಯವೂ ಬರುವ ಹಲವಾರು ಪಾಲಕರೊಂದಿಗೆ ಸಣ್ಣ ಮಕ್ಕಳೂ ಇರುತ್ತಾರೆ. ವೈದ್ಯರ ಭೇಟಿಗೆಂದು ಕಾಯುವ ಸಂದರ್ಭದಲ್ಲಿ ಮಕ್ಕಳಿಗೆ ಸಮಯ ಕಳೆಯುವುದು ದೊಡ್ಡ ಸವಾಲಾಗುತ್ತದೆ. ಇದರಿಂದ ಪಾಲಕರೂ ಬೇಸರಗೊಳ್ಳುತ್ತಾರೆ. ಹಾಗಾಗಿ ಅವರನ್ನು ಹೆಚ್ಚು ಗಮನದಲ್ಲಿ ಇಟ್ಟುಕೊಂಡು ಆಸ್ಪತ್ರೆಯ ಸಮೀಪದಲ್ಲೇ ಇಕೊ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಚೆಂಡಿಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ್ವರ ಕೆ.ತೆಂಡೂಲ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ಯಾನದ ಸುತ್ತಲೂ ಆವರಣ ಗೋಡೆ ನಿರ್ಮಾಣ ಮಾಡಲಾಗಿದೆ. ಅದರ ಒಳಗೆ ಒಂದು ಜಾರುಬಂಡಿ, ಒಂದು ಗೋಲ, ಜೋಕಾಲಿಗಳನ್ನು ಮಕ್ಕಳಿಗಾಗಿ ಅಳವಡಿಸಲಾಗಿದೆ. ಪಾಲಕರಿಗೆ ಅನುಕೂಲವಾಗುವಂತೆ ನಾಲ್ಕು ಬೆಂಚ್‌ಗಳನ್ನು ಇಡಲಾಗಿದೆ. ಉದ್ಯಾನದ ಒಂದು ಭಾಗದಲ್ಲಿ ಮುಂದಿನ ಮಳೆಗಾಲ, ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ವಿವಿಧ ಸೌಲಭ್ಯ:

ಚೆಂಡಿಯಾ ಗ್ರಾಮ ಪಂಚಾಯಿತಿಯು ‘ಅಮೃತ ಗ್ರಾಮ’ ಯೋಜನೆಗೆ ಆಯ್ಕೆಯಾಗಿದೆ. ಗ್ರಾಮದ ಶಾಲೆಗಳಿಗೆ ಆವರಣ ಗೋಡೆ, ಶೌಚಾಲಯ ನಿರ್ಮಾಣ, ನೀರಿನ ಸೌಲಭ್ಯ, ಸೌರ ಬೀದಿ ದೀಪಗಳ ಅಳವಡಿಕೆಯಂಥ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಇದರಿಂದ ಇಡೀ ಗ್ರಾಮಕ್ಕೆ ಅನುಕೂಲವಾಗಲಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ್ವರ ತೆಂಡೂಲ್ಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT