ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ಉತ್ಸಾಹಕ್ಕೆ ವೇದಿಕೆಯಾದ ‘ಹೊಳಪು’

ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ನೂರಾರು ಸದಸ್ಯರು ಭಾಗಿ: ಸಂಭ್ರಮಕ್ಕೆ ಸಾಕ್ಷಿಯಾದ ಸ್ಪೀಕರ್, ಸಚಿವ
Last Updated 28 ಜನವರಿ 2023, 15:59 IST
ಅಕ್ಷರ ಗಾತ್ರ

ಕುಮಟಾ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಕಾವು ಏರುತ್ತಿದ್ದರೆ, ಉತ್ತರ ಕನ್ನಡದಲ್ಲಿ ಮಾತ್ರ ಪಕ್ಷಭೇದ ಮರೆತು ಜನಪ್ರತಿನಿಧಿಗಳು ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ತೊಡಗಿಕೊಂಡಿದ್ದರು. ರಾಜಕಾರಣ ಬಿಟ್ಟು ಸ್ಪರ್ಧಾ ಸ್ಫೂರ್ತಿ, ಉತ್ಸಾಹದೊಂದಿಗೆ ಇಲ್ಲಿನ ಮಹಾತ್ಮಗಾಂಧಿ ಮೈದಾನದಲ್ಲಿ ಒಟ್ಟುಗೂಡಿದ್ದರು.

ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಜನಪ್ರತಿನಿಧಿಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ‘ಹೊಳಪು’ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯಿತು. ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಪುರಸಭೆ ಮತ್ತು ನಗರಸಭೆಯ ಸದಸ್ಯರು ಹಾಗೂ ಅವರೊಟ್ಟಿಗೆ ಅಧಿಕಾರಿಗಳ ತಂಡ ಪಾಲ್ಗೊಂಡಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಜನಪ್ರತಿನಿಧಿಗಳ ಮೇಲೆ ಜನರು ಆಕ್ರೋಶಗೊಳ್ಳುವ ಸಂದರ್ಭದಲ್ಲಿ ಜನರಿಗೆ ಆಡಳಿತ ವ್ಯವಸ್ಥೆಯ ಸವಾಲುಗಳನ್ನು ಜನಪ್ರತಿನಿಧಿಗಳು ಮನವರಿಕೆ ಮಾಡಬೇಕಾಗಿದೆ’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವ ಜನಪ್ರತಿನಿಧಿಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ವಿಕೇಂದ್ರೀಕರಣ ವ್ಯವಸ್ಥೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ, ‘ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ನೆಪದಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಒಂದುಗೂಡಿಸಿದ ಕೀರ್ತಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಲ್ಲುತ್ತದೆ. ಕಾರ್ಯಕ್ರಮದ ಯಶಸ್ಸಿಗೆ ಸತತ ದುಡಿದ ಅವರ ಕತೃತ್ವ ಶಕ್ತಿಗೆ ಎಂಥವರೂ ಮೆಚ್ಚಬೇಕಾಗಿದೆ’ ಎಂದರು.

ಶಾಸಕಿ ರೂಪಾಲಿ ನಾಯ್ಕ ಕ್ರೀಡಾ ಧ್ವಜಾರೋಹಣ ಮಾಡಿದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಪಥಸಂಚಲನಕ್ಕೆ ಚಾಲನೆ ನೀಡಿದರು. ಭಟ್ಕಳ ಶಾಸಕ ಸುನೀಲ ನಾಯ್ಕ, ಜಿಲ್ಲಾಧಿಕಾರಿ ಪ್ರಭುಲಿಂಗ ಕಳವಳಿಕಟ್ಟಿ, ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ದನ್, ಉಪವಿಭಾಗಾಧಿಕಾರಿ ರಾಘವೇಂದ್ರ ಜಗಳಾಸರ, ತಹಶೀಲ್ದಾರ್ ವಿವೇಕ ಶೇಣ್ವಿ, ಡಿ.ಡಿ.ಪಿ.ಐ ಈಶ್ವರ ನಾಯ್ಕ, ತಾಲ್ಲೂಕು ಪಂಚಾಯ್ತಿ ಇಒ ನಾಗರತ್ನಾ ನಾಯಕ ಇದ್ದರು.

ಕುಮಟಾ ಪುರಸಭೆ ತಂಡ ಚಾಂಪಿಯನ್:

ಜನಪ್ರತಿನಿಧಿಗಳ ಜಿಲ್ಲಾಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕುಮಟಾ ಪುರಸಭೆ ಚಾಂಪಿಯನ್ ಪಟ್ಟ ಪಡೆದು ಟ್ರೋಫಿ ಎತ್ತಿ ಹಿಡಿಯಿತು. ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಉಪಾಧ್ಯಕ್ಷೆ ಸುಮತಿ ಭಟ್ಟ, ಮುಖ್ಯಾಧಿಕಾರಿ ಅಜಯ ಭಂಡಾರಕರ್ ಹಾಗೂ ಸದಸ್ಯರು ಬಹುಮಾನ ಸ್ವೀಕರಿಸಿದರು.

ಬಹುಮಾನ ವಿತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಉಡುಪಿ ಜಿಲ್ಲೆ ಹೊರತಾಗಿ ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲೂ ‘ಹೊಳಪು’ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಶಾಸಕ ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಒತ್ತಾಸೆಯ ಮೇರೆಗೆ ಇಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು. ಪಕ್ಷ ಬೇಧ ಮರೆತು ಪಾಲ್ಗೊಂಡಿದ್ದು ಕಾರ್ಯಕ್ರಮ ಸಾರ್ಥಕತೆ ಕಾಣುವಂತಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT