ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಾಲ ಮೀರಿದ ನೀರಾವರಿ ಸಾಲ: ರೈತರ ಅಸಹಾಯಕ ನುಡಿ

ಬೆಳೆ ರಕ್ಷಣೆಗೆ ಕೊಳವೆಬಾವಿ ಕೊರೆಸುತ್ತಿರುವ ರೈತರು
Published 18 ನವೆಂಬರ್ 2023, 4:46 IST
Last Updated 18 ನವೆಂಬರ್ 2023, 4:46 IST
ಅಕ್ಷರ ಗಾತ್ರ

ಶಿರಸಿ: ‘ಬೆಳೆ ಬೆಳೆಯಲು ಮಾಡಿರುವ ಸಾಲಕ್ಕಿಂತ ಬೆಳೆ ಉಳಿಸಿಕೊಳ್ಳಲು ಮಾಡಿದ ನೀರಾವರಿ ಸಾಲವೇ ಹೆಚ್ಚಿದೆ’ ಎಂಬುದು ಉತ್ತರ ಕನ್ನಡ ಜಿಲ್ಲೆಯ ಬಯಲು ಹಾಗೂ ಅರೆ ಬಯಲುಸೀಮೆ ತಾಲ್ಲೂಕುಗಳ ಬಹುತೇಕ ರೈತರ ಅಸಹಾಯಕ ನುಡಿಯಾಗಿದೆ. 

ಜಿಲ್ಲೆಯ ಬನವಾಸಿ ಹೋಬಳಿ, ಮುಂಡಗೋಡ, ಹಳಿಯಾಳ ಭಾಗದ ಕೃಷಿಕರಿಗೆ ಬರಗಾಲದ ಸಂದರ್ಭದಲ್ಲಿ ಕೃಷಿಗೆ ನೀರೊದಗಿಸುವುದು ಎಂದರೆ ಸಾಲದ ಶೂಲಕ್ಕೆ ಕೊರಳೊಡ್ಡುವ ಸಂದರ್ಭವಾಗಿದೆ.

ಪ್ರಸಕ್ತ ವರ್ಷ ನೀರಿನ ತುಟಾಗ್ರತೆ ಎದುರಾಗಿದ್ದು, ಶ್ರಮವಹಿಸಿ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಕೊಳವೆಬಾವಿಗಳ ನಿರ್ಮಾಣದಲ್ಲಿ ರೈತರು ತೊಡಗಿಕೊಂಡಿದ್ದಾರೆ. ಬರಗಾಲ ಪೀಡಿತ ಪ್ರದೇಶ ಘೋಷಣೆಯ ನಂತರ ಕೊಳವೆಬಾವಿ ಕೊರೆಯುವ 50ಕ್ಕೂ ಹೆಚ್ಚು ಯಂತ್ರಗಳು ನಿರಂತರವಾಗಿ ಈ ತಾಲ್ಲೂಕುಗಳಲ್ಲಿ ನಿತ್ಯ ಕಾರ್ಯಾಚರಣೆ ನಡೆಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. 

‘ಕೊಳವೆಬಾವಿ ಕೊರೆಸುವ ಸಲುವಾಗಿ ಕೃಷಿಕರು, ಆಯಾ ಭಾಗದ ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಸಾಲ ಮಾಡುತ್ತಿದ್ದಾರೆ. ಕೃಷಿ ಜಮೀನು ಅಭಿವೃದ್ಧಿ, ತೋಟಗಾರಿಕಾ ಕ್ಷೇತ್ರ ವಿಸ್ತರಣೆ, ತೆರೆದ ಬಾವಿ ನಿರ್ಮಾಣ ಇತ್ಯಾದಿ ಹೆಸರಲ್ಲಿ ಸಾಲ ಮಾಡುವ ರೈತರು ಅಂತಿಮವಾಗಿ ಕೊಳವೆಬಾವಿ ನಿರ್ಮಾಣಕ್ಕೆ ಸಾಲದ ಮೊತ್ತವನ್ನು ಬಳಸುತ್ತಿದ್ದಾರೆ’ ಎಂಬುದು ಸಹಕಾರಿ ಸಂಘದ ಅಧ್ಯಕ್ಷರೊಬ್ಬರ ಮಾತು.

‘ತಮಿಳುನಾಡು, ಆಂಧ್ರಪ್ರದೇಶ ಮೂಲಕ ಕೊಳವೆಬಾವಿ ಕೊರೆಯುವ ಯಂತ್ರಗಳು ಈ ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಕೊಳವೆಬಾವಿ ಕೊರೆಸಲು ರೈತರ ಬಳಿ ಯಾವುದೇ ಅನುಮತಿ ಇಲ್ಲದಿದ್ದರೂ ರೈತ ಹೇಳಿದಷ್ಟು ಕಡೆಗಳಲ್ಲಿ ಕೊಳವೆಬಾವಿ ನಿರ್ಮಿಸಿ ಕೊಡುತ್ತಿದ್ದಾರೆ. ರೈತರ ಅಸಹಾಯಕತೆ ಬಂಡವಾಳ ಮಾಡಿಕೊಂಡ ಯಂತ್ರಗಳ ಮಾಲೀಕರು ಹಣ ದೋಚುವ ಕೆಲಸ ಮಾಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಈ ತಾಲ್ಲೂಕುಗಳಲ್ಲಿ ನೀರಾವರಿಗಾಗಿಯೇ ಎರಡು ತಿಂಗಳಿನಿಂದೀಚೆಗೆ ₹5 ಕೋಟಿಗೂ ಅಧಿಕ ಸಾಲ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು. 

‘ಒಂದು ಕೊಳವೆಬಾವಿ ಕೊರೆಸಲು ಕನಿಷ್ಠ ₹1.25 ಲಕ್ಷದಿಂದ ₹1.50 ಲಕ್ಷ ವೆಚ್ಚವಾಗುತ್ತಿದೆ. ಇದರ ಜತೆ ವಿದ್ಯತ್ ಸಂಪರ್ಕ, ಪಂಪ್ ಅಳವಡಿಕೆಗೆ ಪ್ರತ್ಯೇಕ ಖರ್ಚಾಗುತ್ತದೆ. ಕೆಲವು ಬಾರಿ ಕೊಳವೆಬಾವಿ ವಿಫಲವಾಗುತ್ತಿವೆ. ಸಾಲ ಮಾಡಿ ಭತ್ತ, ಕಬ್ಬು, ಮೆಕ್ಕೊಜೋಳ ಇತ್ಯಾದಿ ಬೆಳೆ ಬೆಳೆದು ಈಗ ಆ ಬೆಳೆ ಉಳಿಸಿಕೊಳ್ಳಲು ಮತ್ತೆ ಸಾಲ ಮಾಡಿ ಕೊಳವೆಬಾವಿ ಕೊರೆಸಲು ರೈತರು ಮುಂದಾಗುವ ಅನಿವಾರ್ಯತೆ ಎದುರಾಗಿದೆ’ ಎಂಬುದು ಮುಂಡಗೋಡದ ಕೃಷಿಕ ಚನ್ನಪ್ಪ ಗೌಡ ಅಭಿಪ್ರಾಯ.

ಬರ ಪರಿಹಾರ ಮೊತ್ತವು ಬೀಜ ಗೊಬ್ಬರ ಖರೀದಿಗೆ ಮಾತ್ರ ಸಾಲುತ್ತದೆ. ಆದರೆ ಈಗಿರುವ ಬೆಳೆ ಉಳಿಸಿಕೊಂಡರೆ ಪರಿಹಾರ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಕೈಸೇರುತ್ತದೆ. ಕಾರಣ ರೈತರು ಕೊಳವೆಬಾವಿ ಕೊರೆಸಲು ಮುಂದಾಗುತ್ತಿದ್ದಾರೆ ‌
-ಸುಧಾಕರ ಗೌಡ ದಾಸನಕೊಪ್ಪ ಕೃಷಿಕ
ಬರಗಾಲದಂಥ ಸನ್ನಿವೇಶದಲ್ಲಿ ತೆರೆದ ಬಾವಿ ನಿರ್ಮಿಸಲು ₹1.5 ಲಕ್ಷರಿಂದ ₹2 ಲಕ್ಷದ ವರೆಗೆ ಸಹಕಾರಿ ಸಂಘದಿಂದ ಸಾಲ ನೀಡಲಾಗುತ್ತದೆ 
-ದ್ಯಾಮಣ್ಣ ದೊಡ್ಮನಿ ಕಾಳಂಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT