ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ: ಕಾಡುಪ್ರಾಣಿಗಳ ದಾಳಿಗೆ ಕೃಷಿಕ ಕಂಗಾಲು

ಎಂ.ಜಿ. ಹೆಗಡೆ
Published 1 ಜನವರಿ 2024, 7:59 IST
Last Updated 1 ಜನವರಿ 2024, 7:59 IST
ಅಕ್ಷರ ಗಾತ್ರ

ಹೊನ್ನಾವರ: ಹಗಲು ಹೊತ್ತಿನಲ್ಲಿ ಎಳೆಯ ತೆಂಗಿನಕಾಯಿ, ಬಾಳೆ ಕೊನೆ, ಅಡಿಕೆ ಮಿಳ್ಳೆಗಳನ್ನು ಮಂಗ, ಕೆಂದಳಿಲು ತಿಂದು ತೇಗುತ್ತಿದ್ದರೆ ರಾತ್ರಿ ಹೊತ್ತಿನಲ್ಲಿ ತೋಟಗಳಿಗೆ ದಾಳಿ ಇಡುವ ಕಾಡು ಹಂದಿಗಳು ಬೆಳೆದು ನಿಂತ ಅಡಿಕೆ, ಬಾಳೆ ಗಿಡಗಳ ಬುಡದ ತಿರುಳನ್ನೇ ಅಗೆದು ತೋಟವನ್ನೇ ಧ್ವಂಸಗೊಳಿಸುತ್ತಿವೆ.

ಕಾಡುಪ್ರಾಣಿಗಳ ಕಾಟಕ್ಕೆ ಕೃಷಿಕರು ಕಂಗಾಲಾಗಿದ್ದು ಸಂಬಂಧಿಸಿದ ಇಲಾಖೆಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ರೈತರ ನೋವಿಗೆ ಕೇವಲ ‘ಪರಿಹಾರ’ದ ಮುಲಾಮು ಹಚ್ಚುವ ಮಾತನಾಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿದೆ.

ಅಡಿಕೆ ತಾಲ್ಲೂಕಿನ ಪ್ರಮುಖ ಬೆಳೆಯಾಗಿದೆ. 4,600 ಹೆಕ್ಟೇರ್ ಜಾಗದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಉಳಿದಂತೆ 1,600 ಹೆಕ್ಟೇರ್ ಜಾಗದಲ್ಲಿ ತೆಂಗು, 1,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 1,200 ಹೆಕ್ಟೇರ್ ಜಾಗದಲ್ಲಿ ಗೇರು ಹಾಗೂ 250 ಹೆಕ್ಟೇರ್ ಜಾಗದಲ್ಲಿ ಶೇಂಗಾ ಬೆಳೆ ಇದೆ. ಪ್ರಸ್ತುತ ಅಧಿಕೃತ ಮಾಲ್ಕಿ ಜಾಗದ ಜೊತೆಗೆ ಅರಣ್ಯ ಅತಿಕ್ರಮಿತ ಭೂಮಿಯಲ್ಲಿಯೂ ಬಹಳಷ್ಟು ಪ್ರಮಾಣದಲ್ಲಿ ಮುಖ್ಯವಾಗಿ ಅಡಿಕೆ ತೋಟಗಳು ನಿರ್ಮಾಣವಾಗಿವೆ.

‘ಈಚಿನ ವರ್ಷಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಲು ಜನರ ಪಾಲೂ ಇದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏರಿದಂತೆ ಅರಣ್ಯ ಪ್ರದೇಶಗಳ ಅತಿಕ್ರಮಣ ಕೂಡ ಹೆಚ್ಚುತ್ತ ಸಾಗಿದೆ. ಈ ಹಿಂದೆ ರೈತರ ತೋಟಕ್ಕೆ ಹೊಂದಿಕೊಂಡು ಇರುತ್ತಿದ್ದ ಕುರುಚಲು ಗಿಡಗಳಿದ್ದ ಗುಡ್ಡಗಳಲ್ಲಿ ಅಡಿಕೆ ಮರಗಳು ತಲೆ ಎತ್ತಿವೆ. ಮೈಲುಗಟ್ಟಲೇ ದೂರ ಅನಧಿಕೃತ ಪೈಪ್‌ಲೈನ್ ಅಳವಡಿಸಿ ನದಿಯಿಂದ ನೀರು ತಂದು ತೋಟ ನಿರ್ಮಿಸಲಾಗಿದೆ. ತಮ್ಮ ಆವಾಸ ಸ್ಥಾನ ಜನರಿಂದ ಅತಿಕ್ರಮಣವಾಗಿರುವುದರಿಂದ ಕಾಡುಪ್ರಾಣಿಗಳು ಅನಿವಾರ್ಯವಾಗಿ ಆಹಾರ ಹುಡುಕುತ್ತ ತೋಟಪಟ್ಟಿಗಳಿಗೆ ಲಗ್ಗೆ ಇಡುತ್ತಿವೆ’ ಎಂಬುದು ಹಲವು ಹಿರಿಯರ ಅಭಿಪ್ರಾಯವಾಗಿದೆ.

ರೈತರ ಮಾಲ್ಕಿ ಜಾಗದ ಪಕ್ಕ ಅವರಿಗೆ ನೀಡಲಾಗಿದ್ದ ಹಾಡಿ, ಕುಮ್ಕಿ ಮೊದಲಾದ ಪ್ರದೇಶಗಳಿಗೂ ಅಡಿಕೆ ಪ್ರದೇಶ ವಿಸ್ತರಣೆಗೊಳ್ಳುತ್ತಿರುವ ಜೊತೆಗೆ ಇಂಥ ಹಲವು ಜಾಗಗಳಲ್ಲಿ ವಾಣಿಜ್ಯ ಉದ್ದೇಶವುಳ್ಳ ಕಟ್ಟಡಗಳು ನಿರ್ಮಾಣವಾಗಿವೆ. ಕಲ್ಲು, ಮಣ್ಣು ಗಣಿಗಾರಿಕೆ ಕೂಡ ಈ ಜಾಗದಲ್ಲಿ ಅವ್ಯಾಹತವಾಗಿ ನಡೆದಿದ್ದು ಜೆಸಿಬಿ ಮತ್ತಿತರ ಯಂತ್ರಗಳ ಶಬ್ಧಗಳಿಗೆ ಕಾಡುಪ್ರಾಣಿಗಳು ನಲುಗುವಂತಾಗಿದೆ. ಇಂಥ ಅನಧಿಕೃತ ಗಣಿಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳದೇ ಅರಣ್ಯ, ಗಣಿ, ಕಂದಾಯ ಹಾಗೂ ಪೊಲಿಸ್ ಇಲಾಖೆಗಳು ಪರಸ್ಪರ ಬೊಟ್ಟು ಮಾಡಿ ತೋರಿಸಿ ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳುತ್ತಿವೆ ಎನ್ನುವ ಅಸಮಾಧಾನ ಸಾರ್ವಜನಿಕ ವಲಯದಲ್ಲಿದೆ. ತಾಲ್ಲೂಕಿನಲ್ಲಿ ಈಚೆಗೆ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ ತಮ್ಮ ಲಿಖಿತ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು.

‘ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಬದಲು ಚುನಾವಣಾ ರಾಜಕೀಯದ ಕಾರಣಕ್ಕೆ ರಾಜಕೀಯ ಮುಖಂಡರು ಜನರ ಮೂಗಿಗೆ ‘ಅರಣ್ಯ ಅತಿಕ್ರಮಣ ಜಾಗ ಮಂಜೂರಿ’ಯ ತುಪ್ಪ ಸವರುತ್ತಿದ್ದಾರೆ. ಜನಜೀವನಕ್ಕೆ ತೊಂದರೆಯಾಗದಂತೆ ವನ್ಯಜೀವಿಗಳೂ ಬದುಕುವ ಯೋಜನೆ ತರುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕಿದೆ’ ಎಂದು ಚಿಕ್ಕನಕೋಡ ಗ್ರಾಮದ ವಿನಾಯಕ ನಾಯ್ಕ ಅಭಿಪ್ರಾಯಪಟ್ಟರು.

ಸೋಲಾರ್‌ ಬೇಲಿ ಅಳವಡಿಕೆಗೆ ಸಹಾಯಧನ ಲಭ್ಯ
‘ವನ್ಯ ಜೀವಿಗಳಿಂದ ಅಗಿರುವ ಬೆಳೆ ನಷ್ಟಕ್ಕೆ ಇಲಾಖೆಯಿಂದ ಪರಿಹಾರ ನೀಡಲಾಗುತ್ತಿದೆ. ಜಮೀನಿನ ಸುತ್ತ ಸೋಲಾರ್ ಬೇಲಿ ಅಳವಡಿಸಲು ಸಹಾಯಧನ ಕೂಡ ಲಭ್ಯವಿದೆ. ತೋಟ ಹಾಗೂ ಅರಣ್ಯದ ನಡುವೆ ಇದ್ದ ಕುರುಚಲು ಕಾಡು ಅತಿಕ್ರಮಣವಾಗಿರುವುದು ಕಾಡು ಪ್ರಾಣಿಗಳು ಊರಿಗೆ ಲಗ್ಗೆ ಇಡಲು ಪ್ರಮುಖ ಕಾರಣ ಎಂದು ಹೊನ್ನಾವರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಸಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT