ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ ಪರಿಹಾರ ದೊರಕಿಸುವಲ್ಲಿ ಅನ್ಯಾಯ: ಹೆದ್ದಾರಿ ತಡೆದು ರೈತರ ಪ್ರತಿಭಟನೆ

Last Updated 24 ನವೆಂಬರ್ 2022, 12:32 IST
ಅಕ್ಷರ ಗಾತ್ರ

ಶಿರಸಿ: ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮಂಜೂರಾತಿಯಲ್ಲಿ ವಿಮೆ ಕಂಪನಿ ಅನ್ಯಾಯ ಎಸಗಿದೆ. ರೈತರಿಗೆ ನ್ಯಾಯ ಒದಗಿಸುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ತಾಲ್ಲೂಕಿನ ದಾಸನಕೊಪ್ಪದಲ್ಲಿ ಗುರುವಾರ ಶಿರಸಿ–ಹಾವೇರಿ ರಾಷ್ಟ್ರೀಯ ಹೆದ್ದಾರಿಯನ್ನು ಒಂದು ತಾಸಿಗೂ ಹೆಚ್ಚು ಕಾಲ ತಡೆದು ಪ್ರತಿಭಟಿಸಿದರು.

ರಸ್ತೆಯಲ್ಲೇ ಧರಣಿ ಕುಳಿತ ನೂರಾರು ರೈತರು, ಪ್ರತಿ ಎಕರೆಗೆ ₹13 ರಿಂದ ₹18 ಸಾವಿರ ಪರಿಹಾರ ಒದಗಿಸಬೇಕು. ಇ–ಸ್ವತ್ತು ಸಮಸ್ಯೆ ಬಗೆಹರಿಸಬೇಕು. ರೈತರು, ಕೃಷಿ ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಸಕಾಲದಲ್ಲಿ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಮಂಜುನಾಥ ಗೌಡ, ‘ರೈತರಿಗೆ ನ್ಯಾಯ ಒದಗಿಸುವ ವೈದ್ಯನಾಥನ್ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ. ಉತ್ತರ ಕನ್ನಡದ ಅಡಿಕೆ ಬೆಳೆಗಾರರಿಗೆ ಪ್ರತಿಬಾರಿಯೂ ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ ಎಸಗಲಾಗುತ್ತದೆ. ಆದರೂ ಇಲ್ಲಿನ ಜನಪ್ರತಿನಿಧಿಗಳು ಚಕಾರ ಎತ್ತದೆ ಕುಳಿತಿರುವುದು ರೈತರ ಬಗ್ಗೆ ಅವರಿಗಿರುವ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದೆ’ ಎಂದು ಆರೋಪಿಸಿದರು.

‘ಭತ್ತ, ಗೋವಿನ ಜೋಳ, ಶುಂಠಿ, ತರಕಾರಿ ಬೆಳೆ ಹಾಳಾಗಿದ್ದು ಎಲ್ಲ ಬೆಳೆಗೂ ಪರಿಹಾರ ನೀಡಬೇಕು. ಹಾಲು ಖರೀದಿ ದರ ಏರಿಸುವ ಜತೆಗೆ ಪಶು ಆಹಾರ ದರ ಕಡಿಮೆ ಮಾಡಬೇಕು. ಕೃಷಿ ಜಮೀನನ್ನು ನಿರುಪಯುಕ್ತ ಎಂದು ಪರಿಗಣಿಸಿ ಮಾರಾಟಕ್ಜೆ ಆಸ್ಪದ ನೀಡುತ್ತಿರುವುದನ್ನು ತಡೆಯಬೇಕು’ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಹೇಳಿದರು.

ರೈತರ ಬೇಡಿಕೆಗಳ ಮನವಿಯನ್ನು ಗ್ರೇಡ್–2 ತಹಶೀಲ್ದಾರ್ ರಮೇಶ ಹೆಗಡೆ ಅವರಿಗೆ ಸಲ್ಲಿಸಲಾಯಿತು. ಪ್ರಮುಖರಾದ ಸತೀಶ ನಾಯ್ಕ, ಜಾಕೀರ್ ದಾಸನಕೊಪ್ಪ, ಪ್ರಮೋದ ಜಕಲಣ್ಣನವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT