ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಸಸ್ಯೋದ್ಯಾನದಲ್ಲಿ ವಸತಿ ಗೃಹಗಳ ನಿರ್ಮಾಣ

ಪಾಳುಬಿದ್ದ ಉದ್ಯಾನದ ಸದ್ಬಳಕೆಗೆ ಅರಣ್ಯ ಇಲಾಖೆ ಕ್ರಮ
Published 14 ಏಪ್ರಿಲ್ 2024, 5:39 IST
Last Updated 14 ಏಪ್ರಿಲ್ 2024, 5:39 IST
ಅಕ್ಷರ ಗಾತ್ರ

ಶಿರಸಿ: ನಗರದ ಹೊರವಲಯ ಚಿಪಗಿ ಸಮೀಪದ ಕೇಂದ್ರೀಯ ಸಸ್ಯೋದ್ಯಾನದಲ್ಲಿ ಈಗ ಅರಣ್ಯ ಇಲಾಖೆ ವಸತಿ ಗೃಹಗಳು ನಿರ್ಮಾಣವಾಗುತ್ತಿವೆ! ಇದರಿಂದ ಸುಂದರ ಉದ್ಯಾನ ನಿರ್ಮಾಣದ ಸಾರ್ವಜನಿಕ ಬೇಡಿಕೆ ಮೂಲೆಗುಂಪಾಗಿದೆ.

ಶಿರಸಿ–ಹುಬ್ಬಳ್ಳಿ ಹೆದ್ದಾರಿಗೆ ತಾಗಿಕೊಂಡ ಕೇಂದ್ರೀಯ ಸಸ್ಯೋದ್ಯಾನವು 1996ರ ಫೆಬ್ರವರಿಯಲ್ಲಿ ಲೋಕಾರ್ಪಣೆಗೊಂಡಿತ್ತು. ಆಗ ಈ ಉದ್ಯಾನ ಸಾರ್ವಜನಿಕರನ್ನು ಸೆಳೆಯುವ ತಾಣವಾಗಿತ್ತು. ಅರಣ್ಯ ಇಲಾಖೆ ಇಲ್ಲಿಯೇ ಸಾವಿರಾರು ಸಸಿಗಳನ್ನು ಬೆಳೆಸಿ, ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿತ್ತು. ಕಾಲಕ್ರಮೇಣ ತಾಲ್ಲೂಕಿನ ನಾಲ್ಕೈದು ಕಡೆಗಳಲ್ಲಿ ನರ್ಸರಿಗಳ ಸ್ಥಾಪನೆಯಾದ ಬಳಿಕ ಈ ಕೇಂದ್ರದ ಬಳಕೆ ಕಡಿಮೆಯಾಗಿತ್ತು. ಹೀಗಾಗಿ ಅಲ್ಲಿ ಗಿಡಗಳನ್ನು ಬೆಳೆಸುತ್ತಿಲ್ಲ. ನಿರ್ವಹಣೆ ಕೊರತೆಯಿಂದ ಹಲವು ವರ್ಷಗಳಿಂದ ಇಡೀ ಉದ್ಯಾನ ಕಾಡಿನಂತಾಗಿತ್ತು. ಒಣಗಿದ ಗಿಡ–ಮರಗಳು ತುಂಬಿ ಜನಸಾಮಾನ್ಯರು ಓಡಾಡದಂತಾಗಿತ್ತು. ಈ ಹಿನ್ನೆಲೆಯಲ್ಲಿ ಉದ್ಯಾನ ಸ್ಥಗಿತಗೊಂಡಿತ್ತು.

‘ಪ್ರಸ್ತುತ ಉದ್ಯಾನದ ಜಾಗದ ಸದ್ಬಳಕೆ ಉದ್ದೇಶದಿಂದ ಒಂದು ಪಾರ್ಶ್ವದಲ್ಲಿ ಅರಣ್ಯ ಇಲಾಖೆಯಿಂದ ವಸತಿಗೃಹಗಳ ನಿರ್ಮಾಣ ಕಾರ್ಯ ನಡೆದಿದೆ. ಈಗಾಗಲೇ ಒಣಗಿದ ಗಿಡಗಳು, ಮುರಿದ ಕಬ್ಬಿಣದ ಮಕ್ಕಳ ಆಟಿಕೆಗಳು, ಶಿಥಿಲಗೊಂಡಿರುವ ಕುಟೀರಗಳನ್ನು ತೆರವು ಮಾಡಲಾಗಿದೆ. ಐದು ಎಕರೆಗೂ ಹೆಚ್ಚು ವಿಸ್ತಾರದ ಜಾಗದಲ್ಲಿ ಒಂದು ಕಡೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದೆ. ಬಳಕೆಯಿಲ್ಲದೆ ಇದ್ದ ಜಾಗವನ್ನು ಬಳಸಿಕೊಳ್ಳಲು ಈ ಯೋಜನೆ ರೂಪಿಸಲಾಗಿದೆ' ಎಂಬುದು ಅರಣ್ಯ ಅಧಿಕಾರಿಗಳ ಮಾತಾಗಿದೆ. 

‘ಮುಖ್ಯ ರಸ್ತೆಯ ಪಕ್ಕದಲ್ಲಿರುವ ಸಸ್ಯೋದ್ಯಾನ ಕೇಂದ್ರವನ್ನು ಅರಣ್ಯ ಇಲಾಖೆ ಸುಂದರ ಉದ್ಯಾನವಾಗಿ ರೂಪಿಸಿದರೆ ಸ್ಥಳೀಯರಿಗೆ ಅನುಕೂಲವಾಗುವ ಜತೆಗೆ ಪ್ರವಾಸಿಗರಿಗೂ ಅನುಕೂಲ ಆಗುತ್ತಿತ್ತು. ನಗರ ಪ್ರವೇಶಿಸುವ ಮುನ್ನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಮನೋರಂಜನೆ ಪಡೆಯಲು ಅಗತ್ಯ ಆಟಿಕೆ, ಸಾಹಸ ಚಟುವಟಿಕೆ ವ್ಯವಸ್ಥೆ ಅಳವಡಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ಆದರೆ ಈಗ ವಸತಿ ಗೃಹಗಳ ನಿರ್ಮಾಣ ಮಾಡಲಾಗುತ್ತಿದೆ. ಆದರೂ ಇನ್ನುಳಿದ ಜಾಗದಲ್ಲಿ ಉದ್ಯಾನ ಬೆಳೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು' ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಎಕರೆಗಟ್ಟಲೆ ಭೂಮಿ ಸರಿಯಾಗಿ ಬಳಕೆಯಾಗದೆ ವ್ಯರ್ಥವಾಗುತ್ತಿದೆ. ಈಗ ಒಂದು ಪಾರ್ಶ್ವದಲ್ಲಿ ಮಾತ್ರ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಉಳಿದ ಜಾಗದಲ್ಲಿ ಉದ್ಯಾನ ಮಾಡಲು ಪೂರಕವಾಗಿದೆ
ಶಿವರಾಮ ಭಟ್- ಸ್ಥಳೀಯರು
ಸಸ್ಯೋದ್ಯಾನ ಅಭಿವೃದ್ಧಿ ಮಾಡಿ ಸದ್ಬಳಕೆ ಮಾಡಿಕೊಳ್ಳುವ ಯೋಜನೆ ಇದೆ. ಇದರೊಟ್ಟಿಗೆ ಅರಣ್ಯ ಇಲಾಖೆಯ ವಸತಿಗೃಹ ನಿರ್ಮಾಣ ಕೂಡ ನಡೆಯಲಿದೆ
-ಜಿ.ಆರ್.ಅಜ್ಜಯ್ಯಶಿರಸಿ ಡಿ.ಸಿ.ಎಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT