ಅಂಕೋಲಾ/ಗೋಕರ್ಣ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಹಾರವಾಡ ತರಂಗಮೇಟದಲ್ಲಿ ಸಮುದ್ರದಲೆಗಳ ಅಬ್ಬರಕ್ಕೆ ಕಡಲತೀರದಲ್ಲಿದ್ದ ಮನೆ ಕೊಚ್ಚಿ ಹೋಗಿದೆ. ಅಕ್ಕಪಕ್ಕದ ಮನೆಗಳು ಅಪಾಯದ ಅಂಚಿನಲ್ಲಿವೆ.
ವಾಯುಭಾರ ಕುಸಿತದಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡು ಬುಧವಾರ ತಡರಾತ್ರಿ ಭಾರಿ ಗಾತ್ರದ ಅಲೆಗಳು ಅಪ್ಪಳಿಸಿದೆ. ಅಶೋಕ ಹರಿಕಂತ್ರ ಎಂಬುವರಿಗೆ ಸೇರಿದ ಮನೆ, ತೆಂಗಿನ ಮರಗಳು ಕೊಚ್ಚಿಹೋಗಿವೆ.
ಗೋಕರ್ಣದ ಮುಖ್ಯ ಕಡಲತೀರದ ಕರಿಯಪ್ಪನ ಕಟ್ಟೆ ಬಳಿ ಗುರುವಾರ ಸಂಜೆ ದಿಢೀರ್ ಉಕ್ಕೇರಿ ಬಂದ ಸಮುದ್ರದ ಅಲೆಗಳಿಗೆ ನಾಲ್ಕು ಅಂಗಡಿ, ರೆಸಾರ್ಟ್‍ಗಳಿಗೆ ತೀವ್ರ ಹಾನಿಯಾಗಿದೆ.
ಅರಬ್ಬಿ ಸಮುದ್ರದ ಅಬ್ಬರಕ್ಕೆ ಎರಡು ಅಂಗಡಿ ಸಂಪೂರ್ಣ ಕೊಚ್ಚಿ ಹೋಗಿದ್ದು, 10ಕ್ಕೂ ಹೆಚ್ಚು ಕೊಠಡಿಗಳು ಭಾಗಶಃ ನಾಶವಾಗಿದೆ. ಕೆಲ ಅಂಗಡಿಗಳ ತಡೆಗೋಡೆ ಕುಸಿದುಬಿದ್ದಿದೆ.
‘ಪ್ರವಾಸಿಗರ ಅನುಕೂಲಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸಿ ತೆರೆದಿದ್ದ ಕೆಫೆ ನೀರಿನಲ್ಲಿ ಕೊಚ್ಚಿಹೋಗಿದೆ. ಹೀಗೆಯೇ ಮುಂದುವರಿದರೆ ಇನ್ನೂ ಹೆಚ್ಚಿನ ಹಾನಿ ಸಂಭವಿಸಬಹುದು. ದುರ್ಘಟನೆಯಿಂದ ಭಯಭೀತ
ರಾಗಿದ್ದೇವೆ’ ಎಂದು ಕೆಫೆ ಓಶನ್ ವ್ಯೂ ಮಾಲೀಕ ಗಣಪು ಜಟ್ಟಯ್ಯ ಗೌಡ ತಿಳಿಸಿದರು.
ಲಂಗರು ಹಾಕಿದ ಬೋಟ್‌ಗಳು:
ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದರಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ನೆರೆಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರಿಕೆ ಬೋಟ್‍ಗಳು, ಹೊರರಾಜ್ಯದ ಬೋಟ್‍ಗಳು ಕಾರವಾರದ ಬೈತಕೋಲದ ಮೀನುಗಾರಿಕೆ ಮತ್ತು ವಾಣಿಜ್ಯ ಬಂದರುಗಳ ಸಮೀಪ ಗುರುವಾರ ಲಂಗರು ಹಾಕಿದವು.
‘ಕಲ್ಯಾಣ’ದಲ್ಲಿ ಸಾಧಾರಣ ಮಳೆ
ಕಲಬುರಗಿ: ಕಲ್ಯಾಣ ಕರ್ನಾಟಕದ ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ.
ರಾಯಚೂರು ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಹಾಗೂ ಗುರುವಾರ ಉತ್ತಮವಾಗಿ ಮಳೆಯಾಗಿದೆ. ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಯದ್ಲಾಪುರು ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ರಸ್ತೆ ಕೊಚ್ಚಿಹೋಗಿದೆ. ದೇವದುರ್ಗ, ಕವಿತಾಳ, ಮಾನ್ವಿ, ಹಟ್ಟಿ ಚಿನ್ನದಗಣಿ ಪ್ರದೇಶದಲ್ಲಿ ಮಳೆಯಾಗಿದೆ.
ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ನಾರಾಯಣಪುರ, ಹುಣಸಗಿ,
ಕೆಂಭಾವಿಯಲ್ಲಿ ತುಂತುರು ಮಳೆಯಾಗಿದ್ದರೆ, ಶಹಾಪುರ, ಸುರಪುರದಲ್ಲಿ ಉತ್ತಮ ಮಳೆಯಾಗಿದೆ.
ಕೊಪ್ಪಳ, ಕುಷ್ಟಗಿ ಹಾಗೂ ಮುನಿರಾಬಾದ್‌ನಲ್ಲಿ ಉತ್ತಮ ಮಳೆಯಾಗಿದೆ. ಬುಧವಾರ ತಡರಾತ್ರಿ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಹಾಗೂ ಹನುಮಸಾಗರದಲ್ಲಿ ಮಳೆ ಸುರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.