ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: 17 ವರ್ಷದ ಬಳಿಕ ಯುದ್ಧನೌಕೆ ದುರಸ್ತಿ

ತಾತ್ಕಾಲಿಕ ನಿರ್ಬಂಧ: ಬೆಸರದಿಂದ ಮರಳುತ್ತಿರುವ ಪ್ರವಾಸಿಗರು
Published 25 ಫೆಬ್ರುವರಿ 2024, 4:35 IST
Last Updated 25 ಫೆಬ್ರುವರಿ 2024, 4:35 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿರುವ ಐ.ಎನ್.ಎಸ್ ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯದ ದುರಸ್ತಿ ಕಾರ್ಯ ಬರೋಬ್ಬರಿ 17 ವರ್ಷದ ಬಳಿಕ ನಡೆಯುತ್ತಿದೆ. ಹೀಗಾಗಿ ವಸ್ತುಸಂಗ್ರಹಾಲಯ ವೀಕ್ಷಣೆಗೆ ಸದ್ಯ ನಿರ್ಬಂಧ ಹೇರಲಾಗಿದೆ.

ವಾರ್ಷಿಕವಾಗಿ ಸಾವಿರಾರು ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುವ ವಸ್ತುಸಂಗ್ರಹಾಲಯವು ತುಕ್ಕು ಹಿಡಿದ ಸ್ಥಿತಿಯಲ್ಲಿದೆ. ಯುದ್ಧನೌಕೆಯ ಒಳಭಾಗದಲ್ಲಿರುವ ಉಪಕರಣಗಳು ಹಾಳಾಗಿದ್ದು, ಮೇಲ್ಭಾಗದ ನೆಲಹಾಸು ಕೂಡ ತುಕ್ಕು ಹಿಡಿದು ಮುರಿದು ಬೀಳುವ ಸ್ಥಿತಿಗೆ ತಲುಪಿತ್ತು. ಮಳೆಗಾಲದಲ್ಲಿ ನೀರಿನ ಸೋರಿಕೆಯಾಗಿ ನೌಕೆ ಒದ್ದೆಯಾಗುತ್ತಿತ್ತು.

ಶಿಥಿಲಗೊಳ್ಳುವ ಹಂತಕ್ಕೆ ಸಾಗುತ್ತಿದ್ದ ನೌಕೆಯನ್ನು ದುರಸ್ತಿಪಡಿಸಲು ಜಿಲ್ಲಾಡಳಿತ ಮುಂದಾಗಿದೆ. ಯುದ್ಧನೌಕೆಗಳ ನಿರ್ವಹಣೆ ಮಾಡಬಲ್ಲ ಖಾಸಗಿ ಸಂಸ್ಥೆಯೊಂದು ಗುತ್ತಿಗೆ ಪಡೆದುಕೊಂಡಿದೆ. ಫೆ.11ರಿಂದಲೇ ದುರಸ್ತಿ ಕಾರ್ಯ ಆರಂಭಗೊಂಡಿದೆ.

ನೌಕೆ ವೀಕ್ಷಿಸಲು ಆಸಕ್ತಿಯಿಂದ ಬರುವ ಪ್ರವಾಸಿಗರು ಬೇಸರದಿಂದ ಮರಳುತ್ತಿದ್ದಾರೆ. ವಾರಾಂತ್ಯದ ದಿನಗಳಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು ನೌಕೆ ನೋಡಲಾಗದೆ ಹತಾಶೆ ವ್ಯಕ್ತಪಡಿಸುತ್ತಿದ್ದಾರೆ.

‘ಗೂಗಲ್ ಸರ್ಚ್ ಮೂಲಕ ಯುದ್ಧನೌಕೆ ವಸ್ತುಸಂಗ್ರಹಾಲಯದ ಮಾಹಿತಿ ಪಡೆದುಕೊಂಡಿದ್ದೆ. ಅದನ್ನು ಕಣ್ಣಾರೆ ನೋಡಲು ಬಂದರೆ ತಾತ್ಕಾಲಿಕವಾಗಿ ನಿರ್ಬಂಧಿಸಿದ ಮಾಹಿತಿ ತಿಳಿಯಿತು. 600 ಕಿ.ಮೀ ದೂರ ಪ್ರಯಾಣ ಮಾಡಿ ಬಂದರೂ ನೌಕೆ ನೋಡಲಾಗದಿರುವುದು ಬೇಸರ ತಂದಿದೆ’ ಎಂದು ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗ ವೇಣುಗೋಪಾಲ್ ಹೇಳಿದರು.

‘ಯುದ್ಧನೌಕೆ ಶಿಥಿಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ದುರಸ್ತಿ ಕಾರ್ಯ ನಡೆಸಲು ನಿರ್ಧರಿಸಲಾಯಿತು. ₹68 ಲಕ್ಷ ಮೊತ್ತವನ್ನು ಮಂಜೂರು ಮಾಡಲಾಗಿದೆ. ಬೇಸಿಗೆ ರಜೆ ಅವಧಿಯ ಒಳಗೆ ದುರಸ್ತಿ ಕಾರ್ಯ ಮುಗಿಸಲು ಸೂಚನೆ ಕೊಡಲಾಗಿದೆ’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

‘ನೌಕೆಯ ಮೇಲ್ಭಾಗದ ನೆಲಹಾಸು (ಡೆಕ್) ಸಂಪೂರ್ಣ ಬದಲಿಸಬೇಕಾಗಿದೆ. ಇದಕ್ಕಾಗಿ ಕಾಲಾವಕಾಶ ತಗಲುತ್ತದೆ. ಅಲ್ಲದೆ ನೌಕೆಯ ಹಲವು ಉಪಕರಣ ಬದಲಿಸಬೇಕಿದ್ದು ದುರಸ್ತಿ ಕಾರ್ಯಕ್ಕೆ ಕನಿಷ್ಠ ಎರಡು ತಿಂಗಳು ಕಾಲಾವಕಾಶ ತಗುಲಬಹುದು’ ಎಂದು ಗುತ್ತಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರು ಹೇಳಿದರು.

2007ರಲ್ಲಿ ಸಂಪೂರ್ಣ ದುರಸ್ತಿಯಾಗಿದ್ದ ಯುದ್ಧನೌಕೆ ವಾರಾಂತ್ಯದಲ್ಲಿ ಬೇಸರದಿಂದ ಮರಳುವ ಪ್ರವಾಸಿಗರು ತ್ವರಿತವಾಗಿ ದುರಸ್ತಿ ನಡೆಸಲು ಜಿಲ್ಲಾಡಳಿತದ ಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT