ಕಾರವಾರ: ಇಸ್ರೇಲ್‍ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಈಚೆಗೆ ನಡೆಸಿದ ‘ಆಪರೇಷನ್ ಅಜಯ್’ ತಂಡದಲ್ಲಿ ತಾಲ್ಲೂಕಿನ ಬಿಣಗಾದ ಮಹಿಮಾ ಶೆಟ್ಟಿ ಕೂಡ ಇದ್ದರು.
ಸದ್ಯ ಗೋವಾದ ಪರ್ವೊರಿಮ್‍ನಲ್ಲಿ ನೆಲೆಸಿರುವ ದುರ್ಗಪ್ಪ ಶೆಟ್ಟಿ ಮತ್ತು ನಯನಾ ದಂಪತಿಯ ಪುತ್ರಿ ಮಹಿಮಾ ಶೆಟ್ಟಿ ಆಪರೇಷನ್ ಅಜಯ್ ತಂಡದಲ್ಲಿದ್ದರು. ಏರ್ ಇಂಡಿಯಾದಲ್ಲಿ ಗಗನಸಖಿ ಆಗಿರುವ ಅವರು ಇಸ್ರೇಲ್‍ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವ ಆರು ಮಂದಿಯ ತಂಡದಲ್ಲಿದ್ದರು.
‘ಮಗಳು ಮಹಿಮಾ ಇಸ್ರೇಲ್‍ನಲ್ಲಿ ಇರುವವರನ್ನು ಕರೆತರಲು ಹೋಗುತ್ತಾಳೆ ಎಂದು ತಿಳಿದು ಆತಂಕವಾಗಿತ್ತು. ಅಲ್ಲಿ ಸಂಕಷ್ಟದಲ್ಲಿ ಇರುವ ನಮ್ಮವರನ್ನು ಸುರಕ್ಷಿತವಾಗಿ ಕರೆತರುವುದು ಪುಣ್ಯದ ಕೆಲಸ. ಈ ಅವಕಾಶ ಎಲ್ಲರಿಗೂ ಸಿಗದು ಎಂದು ನಮಗೇ ಧೈರ್ಯ ತುಂಬಿದಳು. ಕ್ಷಿಪಣಿ ದಾಳಿ ನಡೆಯುತ್ತಿದ್ದುದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದ ಅನುಭವ ಹೇಳಿದಳು. 236 ಮಂದಿ ಭಾರತೀಯರನ್ನು ಕರೆತಂದಿದ್ದಾಗಿ ತಿಳಿಸಿದ್ದಾಳೆ’ ಎಂದು ಮಹಿಮಾ ತಾಯಿ ನಯನಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಾರದ ಹಿಂದೆಯೇ ಮಗಳು ಇಸ್ರೇಲ್‍ನಿಂದ ಮರಳಿದ್ದಾಳೆ. ಮಹತ್ತರ ಕಾರ್ಯಾಚರಣೆಯೊಂದರಲ್ಲಿ ಮಗಳು ಪಾಲ್ಗೊಂಡಿದ್ದರ ಬಗ್ಗೆ ನಮಗೂ ಹೆಮ್ಮೆ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.