ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಕದಂಬೋತ್ಸವಕ್ಕೆ ಭರದ ಸಿದ್ಧತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನಾಳೆ
Published 3 ಮಾರ್ಚ್ 2024, 15:20 IST
Last Updated 3 ಮಾರ್ಚ್ 2024, 15:20 IST
ಅಕ್ಷರ ಗಾತ್ರ

ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಮಾ.5 ಮತ್ತು 6ರಂದು ನಡೆಯಲಿರುವ ಕದಂಬೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ.

ಉತ್ಸವಕ್ಕೆ ಮೂರು ದಿನಗಳ ಮೊದಲೇ ಕದಂಬೋತ್ಸವ ನಡೆಯುವ ಮಯೂರವರ್ಮ ವೇದಿಕೆ ಹಾಗೂ ಎದುರಿಗೆ ಪೆಂಡಾಲ್‌ ಹಾಕುವ ಕಾರ್ಯ ಬಹುತೇಕ ಮುಗಿದಿರುವುದು ವಿಶೇಷವಾಗಿದೆ. ಅದರಂತೆ ಮಯೂರವರ್ಮ ವೇದಿಕೆಯನ್ನು ಸಜ್ಜುಗೊಳಿಸಲಾಗುತ್ತಿದೆ. ವೇದಿಕೆಯ ಗೋಡೆಗಳಿಗೆ ಬಣ್ಣ ಬಳಿದು ಸಿದ್ಧತೆ ನಡೆಸಲಾಗುತ್ತಿದೆ.

ಉತ್ಸವ ನಡೆಯುವ ಮೈದಾನದ ವಿಶಾಲ ಜಾಗದಲ್ಲಿ ಶಾಮಿಯಾನ ಅಳವಡಿಸುವ ಕಾರ್ಯ ನಡೆಯುತ್ತಿದೆ. ಸುಮಾರು 5 ಸಾವಿರದಷ್ಟು ಆಸನಗಳನ್ನು ಹಾಕಲಾಗುತ್ತಿದೆ. ಅದರಂತೆ ಉತ್ಸವಕ್ಕೆ ಬರುವ ಮಾರ್ಗದಲ್ಲಿ ಬಣ್ಣದ ಪತಾಕೆ ಹಾಕಲು ಸಿದ್ಧತೆ ನಡೆದಿದೆ.

ಕದಂಬೋತ್ಸವವನ್ನು ಯಾವುದೇ ಸರ್ಕಾರಿ ಉತ್ಸವವಾಗುವುದಕ್ಕೆ ಬಿಡದೇ ಜನರ ಉತ್ಸವವನ್ನಾಗಿ ರೂಪಿಸುವುದಕ್ಕೆ ಹಾಗೂ ಹೆಚ್ಚೆಚ್ಚು ಜನರು ಪಾಲ್ಗೊಳ್ಳುವಂತೆ ಮಾಡಲು ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ಪ್ರಚಾರ ನಡೆಸುವುದಕ್ಕೆ ಶಾಸಕ ಶಿವರಾಮ ಹೆಬ್ಬಾರ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಎರಡು ದಿನಗಳ ಸಂಜೆ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜ್ಯದ ಹೆಸರಾಂತ ಕಲಾವಿದರನ್ನು ತರಿಸುತ್ತಿರುವುದು ಕಲಾಭಿಮಾನಿಗಳಲ್ಲಿ ಸಂತಸ ಮೂಡುವಂತಾಗಿದೆ. ಉತ್ಸವದ ದಿನಗಳಲ್ಲಿ ಸಾರಿಗೆ ಸಂಸ್ಥೆಯಿಂದ 20 ಬಸ್‍ಗಳು ಉಚಿತವಾಗಿ ಸಂಚರಿಸಲು ಸೂಚಿಸಿದ್ದಾರೆ.  

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದು, ಭಾನುವಾರ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಕದಂಬೋತ್ಸವ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಮುಖ್ಯ ವೇದಿಕೆ ಮತ್ತು ಅದರ ಎದುರು ಜನ ಕುಳಿತುಕೊಳ್ಳಲು ಸ್ಥಳ ಸಿದ್ಧತೆ, ಕ್ರೀಡಾ ಚಟುವಟಿಕೆ ಯಾವ ಕಡೆ ನಡೆಯಬೇಕೆಂಬ ಬಗ್ಗೆ ಸೂಚಿಸಿದರು. ಕುಸ್ತಿ ಅಖಾಡದ ಸಿದ್ಧತೆ ವೀಕ್ಷಿಸಿದರು. ಸಿಎಂ ಆಗಮನದ ಹಿನ್ನೆಲೆಯಲ್ಲಿ ಹೆಲಿಪ್ಯಾಡ್‌ ವೀಕ್ಷಣೆ ಮಾಡಿದರು. ಸ್ಟಾಲ್‌ಗಳ ನಿರ್ಮಾಣ ಮತ್ತು ಅದಕ್ಕೆ ಜಾಗ ಕೂಡಾ ನಿಗದಿ ಮಾಡಿದರು.

ಸಿದ್ಧವಾಗುತ್ತಿರುವ ಕುಸ್ತಿ ಅಖಾಡ
ಸಿದ್ಧವಾಗುತ್ತಿರುವ ಕುಸ್ತಿ ಅಖಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT