ಕಾರವಾರ: ಬೇಸಿಗೆ ಸಮೀಪಿಸುತ್ತಿರುವ ಬೆನ್ನಲ್ಲೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಆಡಳಿತ ವ್ಯವಸ್ಥೆ ಸಿದ್ಧತೆ ಮಾಡಿಕೊಳ್ಳತೊಡಗಿದೆ. ಆದರೆ, ಶುದ್ಧ ನೀರು ಪೂರೈಸುವ ಘಟಕಗಳ ನಿರ್ವಹಣೆಯತ್ತ ಮಾತ್ರ ಗಮನಹರಿಸುತ್ತಿಲ್ಲ ಎಂಬ ಆರೋಪವಿದೆ.

ಶುದ್ಧ ಕುಡಿಯುವ ನೀರಿನ ಲಭ್ಯತೆ ಕಡಿಮೆ ಇರುವ ಪ್ರದೇಶಗಳನ್ನು ಗುರುತಿಸಿ, ಅಂತಹ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹಲವು ವರ್ಷಗಳ ಹಿಂದೆಯೇ ಸ್ಥಾಪಿಸಲಾಗಿದೆ. ಜಿಲ್ಲೆಯ 241 ಸ್ಥಳಗಳಲ್ಲಿ ಈ ಘಟಕಗಳಿವೆ. ಅವುಗಳ ಪೈಕಿ 72 ಮಾತ್ರ ಕಾರ್ಯಾಚರಣೆ ಸ್ಥಗಿಗೊಳಿಸಿದೆ ಎಂದು ಸದ್ಯ ನಿರ್ವಹಣೆ ಮಾಡುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೇಳಿಕೊಳ್ಳುತ್ತಿದೆ.

ಆದರೆ, ವಾಸ್ತದಲ್ಲಿ ಬಹುತೇಕ ಕಡೆಗಳಲ್ಲಿ ಘಟಕಗಳು ಸರಿಯಾಗಿ ನಿರ್ವಹಣೆ ಇಲ್ಲದೆ ಹಾಳಾಗಿವೆ. ಯಂತ್ರೋಪಕರಣಗಳು ಕೆಟ್ಟು ವರ್ಷ ಕಳೆದರೂ ದುರಸ್ತಿ ಕೆಲಸ ನಡೆದಿಲ್ಲ ಎಂಬುದು ಜನರ ದೂರು.

‘₹1 ನಾಣ್ಯ ಹಾಕಿದರೆ 20 ಲೀಟರ್ ನೀರು ಪಡೆಯುವ ಸೌಲಭ್ಯ ಘಟಕದಲ್ಲಿದೆ. ಕೆಲವೊಮ್ಮೆ ನಾಣ್ಯ ಹಾಕಿದರೂ ನೀರು ಬರುತ್ತಿಲ್ಲ. ಬಹುತೇಕ ಕಡೆ ನೀರು ಇಲ್ಲ, ನಾಣ್ಯ ಹಾಕುವ ಜಾಗಗಳನ್ನು ಮುಚ್ಚಿಟ್ಟಿದ್ದಾರೆ. ಪದೇ ಪದೇ ಯಂತ್ರಗಳು ಕೆಟ್ಟುಹೋಗುವ ಕಾರಣಕ್ಕೆ ದುರಸ್ತಿಯನ್ನೂ ಮಾಡುತ್ತಿಲ್ಲ’ ಎಂದು ಮಾಜಾಳಿ ಗ್ರಾಮಸ್ಥ ಸೂರಜ್ ಹೇಳಿದರು.

‘ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗೆ ವಹಿಸಿಕೊಡಲು ನಿರ್ಧರಿಸಲಾಗಿದೆ. ಹಲವು ಬಾರಿ ಪತ್ರ ಬರೆದರೂ ಘಟಕಗಳನ್ನು ಹಸ್ತಾಂತರಿಸಿಕೊಳ್ಳಲು ಗ್ರಾಮ ಪಂಚಾಯಿತಿಯವರು ಮುಂದಾಗುತ್ತಿಲ್ಲ. ನಿರ್ವಹಣೆ ಕಷ್ಟವಾಗಲಿದೆ, ಆದಾಯವೂ ಸಾಲದು ಎಂಬ ಉತ್ತರವನ್ನು ನೀಡುತ್ತಿದ್ದಾರೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಯಲ್ಲಾಪುರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ 5 ಶುದ್ಧ ಕುಡಿಯುವ ನೀರಿನ ಘಟಕ ಇದೆ. ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶೆಟ್ಟಿಕೊಪ್ಪದಲ್ಲಿರುವ ಘಟಕ ನಿರ್ವಹಣೆ ಇಲ್ಲದೆ ಹಾಳಾಗಿದೆ. ಕಿರವತ್ತಿ ಘಟಕದಲ್ಲಿ ಸವಳು ನೀರು ಬರುತ್ತಿದ್ದು ಅದು ಕುಡಿಯಲು ಯೋಗ್ಯವಾಗಿಲ್ಲ ಎಂಬ ಆರೋಪವಿದೆ.

‘ಕಿರವತ್ತಿ ಶುದ್ಧ ಕುಡಿಯುವ ನೀರಿನ ಘಟಕದ ಫಿಲ್ಟರ್ ಹಾಳಾಗಿರುವ ಕಾರಣ ಸವಳು ನೀರು ಬರುತ್ತಿದೆ. ಅದನ್ನು ಇಷ್ಷರಲ್ಲಿಯೇ ದುರಸ್ತಿ ಮಾಡಿಸುತ್ತೇವೆ’ ಎಂದು ಕಿರವತ್ತಿ ಪಿಡಿಒ ಶಿವಕುಮಾರ ವಿರಕ್ತಿಮಠ ಹೇಳಿದರು.

ಅಂಕೋಲಾ ತಾಲ್ಲೂಕಿನಲ್ಲಿ 20 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಬಹುತೇಕ ಎಲ್ಲವೂ ಗ್ರಾಮ ಪಂಚಾಯಿತಿಯ ಹತ್ತಿರವೆ ಇದ್ದು, ಘಟಕಗಳು ಪೂರ್ಣಗೊಂಡರೂ ಕಾರ್ಯನಿರ್ವಹಿಸಲು ತಡವಾಗುತ್ತಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ ಎಂಬುದು ಸಾರ್ವಜನಿಕರ ದೂರು.

‘ಘಟಕಗಳನ್ನು ಹಸ್ತಾಂತರ ಪಡೆಯುವಂತೆ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದಿದ್ದೇವೆ. ಗ್ರಾಮ ಪಂಚಾಯಿತಿಯವರು ಹಸ್ತಾಂತರ ಪಡೆದ ನಂತರವೇ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸಲಿವೆ’ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಅಂಕೋಲಾ ಉಪವಿಭಾಗದ ಎಇ ಶ್ರುತಿ ಶೇಟ್.

ಹಳಿಯಾಳ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಕೆಲವೇ ಕೆಲವು ಚಾಲನೆಯಲ್ಲಿದೆ. ಬಹುತೇಕ ಘಟಕಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ನೀರಿನ ಘಟಕದಲ್ಲಿ ಅಳವಡಿಸಿದ್ದ ಮುಂಭಾಗದ ಗಾಜನ್ನು ಹಾಗೂ ಘಟಕದಲ್ಲಿ ಅಳವಡಿಸಿದ್ದ ಕೆಲ ವಸ್ತುಗಳನ್ನು ಕಿಡಿಗೇಡಿಗಳು ನಾಶ ಪಡಿಸಿದ್ದಾರೆ.

ಬಿ.ಕೆ ಹಳ್ಳಿ, ತತ್ವಣಗಿ, ಅಮ್ಮನಕೊಪ್ಪ, ಜೋಗನಕೊಪ್ಪ ಗ್ರಾಮದಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ತಾಂತ್ರಿಕ ದೋಷದಿಂದ ಕೂಡಿವೆ. ಕೆಲವೊಮ್ಮೆ ನಾಣ್ಯಗಳು ಹಾಕಿದಾಗ ನೀರು ಬರುತ್ತದೆ, ಕೆಲವೊಮ್ಮೆ ಬರುವುದೇ ಇಲ್ಲ. ಹೊಸ ಹಡಗಲಿ ಗ್ರಾಮದಲ್ಲಿ ಘಟಕವನ್ನು ಅಳವಡಿಸಿದ್ದ ಕೆಲವು ತಿಂಗಳುಗಳು ಮಾತ್ರ ನೀರು ಸರಬರಾಜು ಆಗಿ ನಂತರ ಸ್ಥಗಿತಗೊಂಡಿದೆ ಎಂಬುದು ಆಯಾ ಗ್ರಾಮಗಳ ಜನರ ದೂರು.

ಹೊನ್ನಾವರ ತಾಲ್ಲೂಕಿನ ಕರ್ಕಿ ಹಾಗೂ ಕುದ್ರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಪ್ರಸಕ್ತ ಸಾಲಿನಲ್ಲಿ ಘಟಕದ ನಿರ್ವಹಣಾ ಕಾರ್ಯ ಇದುವರೆಗೆ ನಡೆದಿಲ್ಲ.

‘ಕುದ್ರಗಿ ಗ್ರಾಮದ ತೂಗು ಸೇತುವೆ ಸಮೀಪ ಇರುವ ಕುಡಿಯುವ ನೀರಿನ ಘಟಕವನ್ನು ಸ್ಥಳೀಯರು ಹೆಚ್ಚು ಉಪಯೋಗಿಸುತ್ತಿರುವುದು ಕಂಡುಬರದ ಕಾರಣ ಈ ವರ್ಷ ಅದರ ನಿರ್ವಹಣೆಗೆ ಹಣ ತೆಗೆದಿರಿಸಿಲ್ಲ. ಕಳೆದ ಬಾರಿ ಉರಸ್ತಿ ಮಾಡಿಸಿದ್ದು ಸದ್ಯ ಪ್ರವಾಸಿಗರು ಮಾತ್ರ ಇದನ್ನು ಉಪಯೋಗಿಸುತ್ತಿದ್ದಾರೆ’ ಎಂಬುದಾಗಿ ಕುದ್ರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ತಿಳಿಸಿದರು.

‘ಕರ್ಕಿ ಕೇಳಗಿನಕೇರಿ ಸಮೀಪ ಸ್ಥಾಪಿಸಿರುವ ಘಟಕ ಸದ್ಯ ಕಾರ್ಯನಿರ್ವಹಿಸುತ್ತಿದ್ದು ಇದನ್ನು ಇನ್ನಷ್ಟು ಸುಸ್ಥಿತಿಯಲ್ಲಿಡಲು ಅಗತ್ಯ ಗಮನ ಹರಿಸಲಾಗುವುದು’ ಎಂದು ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಳುತ್ತಾರೆ.

ಪೂರಕ ಮಾಹಿತಿ: ಸಂತೋಷಕುಮಾರ ಹಬ್ಬು, ಎಂ.ಜಿ.ಹೆಗಡೆ, ರವಿ ಸೂರಿ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ನೀರಿನ ಘಟಕಗಳನ್ನು ಹಸ್ತಾಂತರಿಸಿಕೊಳ್ಳುವಂತೆ ಆಯಾ ಗ್ರಾಮ ಪಂಚಾಯಿತಿಗೆ ಪತ್ರ ಬರೆಯಲಾಗಿದೆ. ನಿರ್ವಹಣೆ ದೃಷ್ಟಿಯಿಂದ ಶೀಘ್ರ ಹಸ್ತಾಂತರಕ್ಕೆ ಪ್ರಯತ್ನಿಸಲಾಗುತ್ತಿದೆ
ಆರ್.ಸತ್ಯಪ್ಪ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಇಇ

ನೀರಿನ ಘಟಕದಲ್ಲಿ ಅನೇಕ ಬಾರಿ ತಾಂತ್ರಿಕ ದೋಷ ಉಂಟಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ದುರಸ್ತಿ ಮಾಡುವ ಕೆಲಸ ನಡೆದಿಲ್ಲ
ಪರಶುರಾಮ ಗುಂಜೇಕರ ಅಮ್ಮನಕೊಪ್ಪ ಗ್ರಾಮಸ್ಥ (ಹಳಿಯಾಳ)

ಸಿದ್ದಾಪುರ ತಾಲ್ಲೂಕಿನ ಬೇಡ್ಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ
ಉಲ್ಲಾಸ್ ಗೌಡರ್ ಬೇಡ್ಕಣಿ ಗ್ರಾ.ಪಂ ಅಧ್ಯಕ್ಷ

ಆಸರೆಯಾದ ಖಾಸಗಿ ನೀರಿನ ಘಟಕ

ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಗೋಕರ್ಣ ಶುದ್ದ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದ್ದು ಇಲ್ಲಿ ಜನರು ಖಾಸಗಿ ಸಂಸ್ಥೆ ಸ್ಥಾಪಿಸಿದ ಶುದ್ಧ ನೀರಿನ ಘಟಕವನ್ನೇ ಅವಲಂಬಿಸಬೇಕಾಗಿದೆ. ರಥಬೀದಿಯ ಹೃದಯ ಭಾಗದಲ್ಲಿರುವ ಗ್ರಾಮ ಪಂಚಾಯಿತಿ ಸ್ಥಳದಲ್ಲಿ ಯುವಕರು ನೂತನ ತಂತ್ರಜ್ಞಾನದೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕ ಕಳೆದ 4 ವರ್ಷದ ಹಿಂದೆ ಪ್ರಾರಂಭಿಸಿದ್ದಾರೆ. ಈ ಘಟಕ ವಿದೇಶಿಯರಿಂದಲೂ ಮೆಚ್ಚುಗೆ ಗಳಿಸಿದೆ. ‘ಸಮರ್ಪಕವಾದ ಒಳಚರಂಡಿಯ ವ್ಯವಸ್ಥೆಯಿಲ್ಲದೇ ತ್ಯಾಜ್ಯದ ನೀರೆಲ್ಲಾ ಬಾವಿಗೆ ಇಳಿಯುತಿದ್ದು ರಥಬೀದಿ ಸೇರಿದಂತೆ ಊರಿನ ಅನೇಕ ಕಡೆ ಬಾವಿಯ ನೀರು ಮಲೀನವಾಗಿದೆ. ಸ್ಥಳೀಯ ಆಡಳಿತ ಮುಖ್ಯ ಕಡಲ ತೀರ ಬಸದ ನಿಲ್ದಾಣ ಮತ್ತು ಮೇಲಿನಕೇರಿಯಲ್ಲಿ ಶುದ್ಧ ನೀರಿನ ಘಟಕ ಪ್ರಾರಂಭಿಸಿದರೂ ಸಪರ್ಪಕವಾದ ನಿರ್ವಹಣೆಯಿಲ್ಲದೇ ಹಾಳುಬಿದ್ದಿದೆ’ ಎನ್ನುತ್ತಾರೆ ಸ್ಥಳಿಯರು. ‘ಮುಖ್ಯ ಸಮುದ್ರ ದಂಡೆಯಲ್ಲಿರುವ ರಾಮತೀರ್ಥದ ನೀರು ಕುಡಿಯಲು ಉಪಯುಕ್ತವಾಗಿದ್ದು ಸಾವಿರಾರು ಜನರಿಗೆ ಆಸರೆಯಾಗಿದೆ. ಆದರೆ ರಾಮತೀರ್ಥದ ಮೇಲ್ಗಡೆ ಹೆಚ್ಚಿನ ಕೊಳವೆಬಾವಿಗಳನ್ನು ಕೊರೆಯುತ್ತಿದ್ದು ನೈಸರ್ಗಿಕವಾಗಿ ಬರುವ ರಾಮತೀರ್ಥದಲ್ಲೂ ಸಹ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ’ ಎಂಬುದಾಗಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.